ಜುಮೈಕಾ: ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಆಂಡ್ರೆ ರೆಸಲ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಆಂಡ್ರೆ ರೆಸಲ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಪ್ರತಿನಿಧಿಸುತ್ತಾರೆ. ತಮ್ಮ ಹೊಡಿಬಡಿ ಆಟದ ಮೂಲಕವೇ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಜುಲೈಕಾ ಮೂಲದ ಆಂಡ್ರೆ ರೆಸಲ್ ಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಮೂವರು ಆಟಗಾರರಲ್ಲಿ ಒಬ್ಬರು. 750+ ಸಿಕ್ಸರ್‌ಗಳನ್ನು ಅವರು ಸಿಡಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ-ವೆಸ್ಟ್ ಇಂಡೀಸ್ ತಂಡದ ನಡುವಿನ ಟಿ-20 ಪಂದ್ಯಾವಳಿಯಲ್ಲಿ ರೆಸಲ್ ಆಡಲಿದ್ದಾರೆ.
ಜುಲೈ 20, 22ರಂದು ಜುಮೈಕಾದ ಸಬೀನಾ ಪಾರ್ಕ್‌ನಲ್ಲಿ ಎರಡು ಪಂದ್ಯಗಳನ್ನು ಆಂಡ್ರೆ ರೆಸಲ್ ಆಡಲಿದ್ದಾರೆ. ತಮ್ಮ ನಿವೃತ್ತಿಯ ಪ್ರಕಟಣೆಯಲ್ಲಿ ಆಂಡ್ರೆ ರೆಸಲ್ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಲು ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ವೆಸ್ಟ್ ಇಂಡೀಸ್ ತಂಡದ ಜೆರ್ಸಿ ಧರಿಸಿರುವುದಕ್ಕೆ ಹೆಮ್ಮೆ ಇದೆ ಎಂದು 37 ವರ್ಷದ ಆಂಡ್ರೆ ರೆಸಲ್ ಹೇಳಿದ್ದಾರೆ. “ನಾನು ಚಿಕ್ಕವನಿದ್ದಾಗ ಈ ಮಟ್ಟಕ್ಕೆ ತಲುಪುತ್ತೇ ಎಂದು ಭಾವಿಸಿರಲಿಲ್ಲ. ಕ್ರೀಡೆಯನ್ನು ಹೆಚ್ಚು ಪ್ರೀತಿಸಿದಾಗ ಏನನ್ನು ಸಾಧಿಸಬಹುದು ಎಂದು ಈಗ ತಿಳಿದಿದೆ” ಎಂದು ತಿಳಿಸಿದ್ದಾರೆ.
2019ರಿಂದ ವೆಸ್ಟ್ ಇಂಡೀಸ್ ತಂಡದ ಟಿ-20 ಪಂದ್ಯಗಳನ್ನು ಮಾತ್ರ ರೆಸಲ್ ಆಡುತ್ತಿದ್ದರು. ವೆಸ್ಟ್ ಇಂಡೀಸ್ ತಂಡದ ಪರ 56 ಏಕದಿನ ಪಂದ್ಯಗಳನ್ನು ಆಡಿರುವ ರೆಸಲ್ ಆಡಿರುವುದು ಕೇವಲ ಒಂದು ಟೆಸ್ಟ್ ಪಂದ್ಯ ಮಾತ್ರ.
ಆಂಡ್ರೆ ರೆಸಲ್ ಎರಡು ಬಾರಿ (2012, 2016) ಟಿ-20 ವಿಶ್ವಕಪ್ ಗೆದ್ದ ತಂಡದಲ್ಲಿದ್ದರು. 84 ಟಿ-20 ಪಂದ್ಯಗಳನ್ನು ಅವರು ಆಡಿದ್ದು, 1078 ರನ್ ಸಿಡಿಸಿದ್ದಾರೆ ಮತ್ತು 61 ವಿಕೆಟ್‌ಗಳಿಸಿದ್ದಾರೆ. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕವೇ ಅವರು ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದರು.
ಒಟ್ಟು 561 ಟಿ-20 ಪಂದ್ಯಗಳು, 485 ವಿಕೆಟ್ ಮತ್ತು 9,316 ರನ್ ಸಿಡಿಸಿರುವ ಆಂಡ್ರೆ ರೆಸಲ್ ಐಪಿಎಲ್ ಪಂದ್ಯಾವಳಿಗಳಲ್ಲಿ ಫ್ರಾಂಚೈಸಿಗಳ ನೆಚ್ಚಿನ ಆಲ್ ರೌಂಡರ್ ಆಗಿದ್ದರು.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಟಿ-20 ಪಂದ್ಯದಲ್ಲಿ ಆಂಡ್ರೆ ರೆಸಲ್ 39 ಎಸೆತದಲ್ಲಿ ಅಜೇಯ 65 ರನ್ ಚಚ್ಚಿದ್ದರು. ಈ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ಅವರು ಟಿ-20ಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಸಾಲಿಗೆ ಸೇರಿದರು.