ತಾರಾತಿಗಡಿ: ಕುರ್ಚಿ ಕಾಳಗ, ಅವರ ಕಡೆಯವರು ಹಂಗಂದರು, ಇವರ ಕಡೆಯವರು ಹಿಂಗಂದರು ಎಂಬ ಗದ್ದಲ ಗಲಾಟೆಗಳು ಹೆಚ್ಚಾಗಿವೆ ಹಾಗಾಗಿ ಅವರಿಗೊಂದು ಬಿಗ್‌ಬಾಸ್ ಕಾರ್ಯಕ್ರಮ ಮಾಡೋಣ ಸ್ವಲ್ಪ ದಿನ ಒಳಗಿದ್ದು ಬಂದರೆ ಎಲ್ಲವೂ ಆರಾಮಾಗಿ ಆಗುತ್ತೆ ಎಂబ ಲೆಕ್ಕಾಚಾರ ಹಾಕಿಕೊಂಡು ಕರ್ನಾಟಕ ಆಲ್ ಪೊಲಿಟಿಕಲ್ ಸಿನಿ
ಲಾಂಛನ(ಎಕೆಪಿಸಿಎಲ್) ನವರು ನಿರ್ಧರಿಸಿದರು.
ಮದ್ರಾಮಣ್ಣೂರು, ಬಂಡೇಸಿ, ಪಂ. ಲೇವೇಗೌಡರು, ಸಿಟ್ಯೂರಪ್ಪನವರು, ಸುಮಾರಣ್ಣೂರು, ಗೋಟಾಳ್ ಜಾಗಜಾರ್, ಗುತ್ನಾಳ ಸಾಹೇಬರು, ಗುಜೇಂದ್ರ, ಗುಬ್ಬಾಳಕರ ಲಚುಮವ್ವ ಅವರೆನ್ನೆಲ್ಲ ಆಯ್ಕೆ ಮಾಡಿಕೊಳ್ಳಲಾಯಿತು. ಮೊದಲ ದಿನ ಒಬ್ಬೊಬ್ಬರನ್ನಾಗಿ ವೇದಿಕೆಗೆ ಕರೆದು ಪರಿಚಯಿಸಿ ಒಳಗೆ ಬಿಡಲಾಯಿತು.
ಒಳಗಡೆ ಡೆಲ್ಲಿಯಲ್ಲಿ ಕುಳಿತಿದ್ದ ಯಜಮಾನ್‌ರ ಧ್ವನಿಯನ್ನೇ ಬಿಗ್‌ಬಾಸ್ ಧನಿ ಎಂದು ಘೋಷಿಸಲಾಯಿತು. ಮರುದಿನದಿಂದಲೇ ಎಲ್ಲರಿಗೂ ಟಾಸ್ಕ್ ಇರುತ್ತದೆ ಎಂದು ಹೇಳಲಾಯಿತು. ಮರುದಿನ ಮುಂಜಾನೆ ಸೋಬಾನ ಪದ ಹಾಕುವ ಮೂಲಕ ಎಲ್ಲರನ್ನೂ ಎಬ್ಬಿಸಿ ಇನ್ನ ಸ್ನಾನ ಮಾಡಿ ಎಂದು ಹೇಳಲಾಯಿತು. ತುಂಬಾ ಚಳಿಯಿದೆ ನಾನ್ಯಾಕೆ ಮಾಡಲಿ ಎಂದು ಒಬ್ಬರೆಂದರೆ ನಾನು ಸ್ಪಾಂಜ್ ಬಾತ್ ಮಾಡುತ್ತೇನೆ ಎಂದು ಇನ್ನೊಬ್ಬರು ಅಂದರು.
ನನಗೆ ಪೂರ್ತಿ ಬಿಸಿನೀರು ಆಗುವುದಿಲ್ಲ, ತಣ್ಣೀರೂ ಆಗಿಬರುವುದಿಲ್ಲ ಹಾಗಾಗಿ ಎರಡನ್ನೂ ಮಿಕ್ಸ್ ಮಾಡಿಕೊಡಿ ಎಂದು ಮತ್ತಿಬ್ಬರು ರಿಕ್ವೆಸ್ಟ್ ಮಾಡಿದರು. ನಂತರ ಮ್ಯಾಜಿಕ್ ಚೇರ್ ಆಟದ ಟಾಸ್ಕ್ ಆರಂಭವಾಯಿತು. ಚಪ್ಪಾಳೆ ಹೊಡೆದುಕೊಂಡು ತಿರುಗುತ್ತಿದ್ದಾಗ ಸೀಟಿ ಹೊಡೆಯಲಾಯಿತು. ಎಲ್ಲರೂ ಒಮ್ಮೆಲೇ ಕುರ್ಚಿಮೇಲೆ ಬಿದ್ದರು.
ಅವರು ಬಿದ್ದ ಹೊಡೆತಕ್ಕೆ ಕುರ್ಚಿ ನುಜ್ಜುಗುಜ್ಜಾಯಿತು. ಇನ್ನೊಂದು ಕುರ್ಚಿ ತರಿಸಿ ಆಟ ಶುರುಮಾಡಲಾಯಿತು. ಈ ಬಾರಿ ಸ್ವಲ್ಪ ಹೆಚ್ಚು ಅನ್ನುವಷ್ಟು ಹೊತ್ತು ತಿರುಗಿಸಿ ಆಮೇಲೆ ಸೀಟಿ ಹೊಡೆದರು ಅಷ್ಟರಲ್ಲಿ ಒಬ್ಬ ಚೇರ್ ಎತ್ತಿಕೊಂಡು ಇದು ನನ್ನ ಕುರ್ಚಿ.. ನನ್ನ ಕುರ್ಚಿ ಎಂದು ಓಟಕಿತ್ತ.























