ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಪೊಲೀಸರು ಶಾಲೆಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನಗರದ 40 ಶಾಲೆಗಳಿಗೆ ಸಂದೇಶ, ಇ-ಮೇಲ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರ್. ಆರ್. ನಗರ, ಕೆಂಗೇರಿ ಸೇರಿದಂತೆ ನಗರದ ವಿವಿಧ ಶಾಲೆಗಳಿಗೆ ಶುಕ್ರವಾರ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬಾಂಬ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು ನಗರದ 40 ಖಾಸಗಿ ಶಾಲೆಗಳನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಬಾಂಬ್ ಬೆದರಿಕೆ ಸಂದೇಶ, ಇ-ಮೇಲ್ ಕಳಿಸಿದ್ದಾರೆ. ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದ ಜೊತೆಗೆ ಶಾಲೆಗಳಿಗೆ ಧಾವಿಸಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಪೊಲೀಸರು ಪರಿಶೀಲನೆ ಪೂರ್ಣಗೊಂಡ ಬಳಿಕ ಇದು ಹುಸಿ ಬಾಂಬ್ ಬೆದರಿಕೆಯೇ? ಎಂಬುದು ತಿಳಿಯಲಿದೆ. ಬಾಂಬ್ ಬೆದರಿಕೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡಿದ್ದಾರೆ.
ಈ ಹಿಂದೆಯೂ ಹಲವು ಬಾರಿ ನಗರದ ಖಾಸಗಿ ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಇ-ಮೇಲ್ ಕಳಿಸಲಾಗಿತ್ತು. ಪೊಲೀಸರ ಪರಿಶೀಲನೆ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ತಿಳಿದುಬಂದಿತ್ತು. ಈ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು.
ಜೂನ್ 16, 2025ರಂದು ಸಹ ಬೆಂಗಳೂರು ನಗರದ ಕಲಾಸಿಪಾಳ್ಯ, ಕುಂಬಳಗೋಡು ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶದ ಇ–ಮೇಲ್ ಬಂದಿತ್ತು. ಇದು ಶಾಲೆಗಳ ಆವರಣದಲ್ಲಿ ಆತಂಕ ಮೂಡಿಸಿತ್ತು.
ಜೂನ್‌ನಲ್ಲಿ ಬಂದ ಬೆದರಿಕೆ ಸಂದೇಶದಲ್ಲಿ ‘ಹೈದರಾಬಾದ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕು. ಇಲ್ಲವಾದಲ್ಲಿ ಶಾಲೆಯನ್ನು ಸ್ಪೋಟಿಸುತ್ತೇವೆ’ ಎಂದು ಬರೆಯಲಾಗಿತ್ತು.
ಇದೇ ಮಾದರಿಯ ಇ-ಮೇಲ್ ಹಾಸನ ನಗರದ ಎರಡು ಖಾಸಗಿ ಶಾಲೆಗಳಿಗೆ ಸಹ ಹೋಗಿತ್ತು. ಅಲ್ಲದೇ ಜೂನ್ 13ರಂದು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಹ ಬಾಂಬ್ ಬೆದರಿಕೆ ಬಂದಿತ್ತು. ಈ ಕುರಿತು ದೇವನಹಳ್ಳಿ ಪೊಲೀಸರ ತನಿಖೆ ನಡೆಯುತ್ತಿದೆ.
ದೆಹಲಿಯ ಶಾಲೆಗಳಿಗೂ ಬೆದರಿಕೆ: ಶುಕ್ರವಾರ ಬೆಂಗಳೂರು ನಗರ ಮಾತ್ರವಲ್ಲ ರಾಷ್ಟ್ರರಾಜಧಾನಿ ನವದೆಹಲಿಯ ಹಲವು ಶಾಲೆಗಳಿಗೆ ಸಹ ಬಾಂಬ್ ಬೆದರಿಕೆ ಬಂದಿದೆ. ಆದ್ದರಿಂದ ಪೋಷಕರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ದೆಹಲಿಯಲ್ಲಿ ಈ ವಾರದಲ್ಲಿ 4ನೇ ಬಾರಿಗೆ ಇಂತಹ ಬೆದರಿಕೆಗಳು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ 2025ರ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗಳು ನಡೆಯುತ್ತಿದ್ದು, ಆದ್ದರಿಂದ ಪೊಲೀಸರು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲನೆ ಮುಂದುವರೆಸಿದ್ದಾರೆ.