ಬೆಂಗಳೂರು: ಸಣ್ಣ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದು ಕರ್ನಾಟಕದಲ್ಲಿ ಚರ್ಚೆಯ ವಿಚಾರವಾಗಿದೆ. ಯುಪಿಐ ವಾರ್ಷಿಕ ವಹಿವಾಟು 40 ಲಕ್ಷ ದಾಟಿದ್ದರೆ ಅವರಿಗೆ ಜಿಎಸ್‌ಟಿ ನೋಟಿಸ್ ನೀಡಲಾಗಿದೆ. ಇದರಿಂದಾಗಿ ಯುಪಿಐ ವಹಿವಾಟು ಕಡಿಮೆಯಾಗುತ್ತಿದೆ.
ಜಿಎಸ್‌ಟಿ ನೋಟಿಸ್ ಖಂಡಿಸಿ ಜುಲೈ 25ರಂದು ಬೇಕರಿ, ಕಾಂಡಿಮೆಂಟ್ಸ್, ಕಾಫಿ ಶಾಪ್‌ಗಳನ್ನು ಕರ್ನಾಟಕದಾದ್ಯಂತ ಬಂದ್ ಮಾಡಿ ಪ್ರತಿಭಟನೆ ನಡೆಸಲು ವರ್ತಕರು ತೀರ್ಮಾನಿಸಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಡಿಜಿಟಪ್ ಪಾವತಿಯನ್ನು ವರ್ತಕರು ನಿರಾಕರಿಸುತ್ತಿದ್ದಾರೆ.
ದುಡ್ ಕೊಡು, ಬೋಂಡಾ ತಿನ್ನು: ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಚಿತ್ರವೊಂದು ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದ ಚಿಕ್ಕ ಕಾಂಡಿಮೆಂಟ್ಸ್‌ನ ಚಿತ್ರವಿದು. ‘ಫೋನ್-ಪೇ, ಗೂಗಲ್-ಪೇ, ಪೇಟಿಎಂ, ಭಾರತ್-ಪೇ ಯಾವ ಫೇನು ಇರುವುದಿಲ್ಲ ಎಂದು ಬರೆಯಲಾಗಿದೆ. ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ, ದುಡ್ಡು ಕೊಡು ಏನಾರ ತಗ ಸಾಲ ಇಲ್ಲ, ಕ್ಯಾಶ್ ವ್ಯವಹಾರ ಮಾತ್ರ ಇರುತ್ತದೆ’ ಎಂದು ಗ್ರಾಹಕರಿಗೆ ಮಾಹಿತಿ ನೀಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆ ಈಗಾಗಲೇ ನೋಟಿಸ್ ಕುರಿತು ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ನೋಟಿಸ್ ಪಡೆದಿದ್ದು, ಈಗ ಯುಪಿಐ ಬಳಕೆ ನಿಲ್ಲಿಸಿದರೆ ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಜಿಎಸ್‌ಟಿ ನೋಂದಣಿ ಮಾಡಿಸಲೇಬೇಕು ಮತ್ತು ತೆರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಅವರ ನಗದು ವಹಿವಾಟು ವಿವಿರ ಪಡೆದು ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಹೇಳಿದೆ.
40 ಲಕ್ಷದ ವಹಿವಾಟು ನಡೆಸಿದವರೆಲ್ಲ ದೊಡ್ಡ ಮೊತ್ತದ ಜಿಎಸ್‌ಟಿ ಪಾವತಿಸಬೇಕು ಎಂದೇನಿಲ್ಲ. ಎಲ್ಲಾ ಸರಕು ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ವ್ಯಾಪಾರಿಗಳು ನೋಂದಣಿ ಮಾಡಿಸಿ ವ್ಯಾಪಾರದ ಸ್ವರೂಪ ವಿವರಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.
ಯುಪಿಐ ವಹಿವಾಟು ವಾರ್ಷಿಕ 40 ಲಕ್ಷ ದಾಟಿದ ಬೇಕರಿ, ಹೋಟೆಲ್, ಬೀಡಾ ಅಂಗಡಿ, ಕಾಫಿ ಶಾಪ್, ಕಾಂಡಿಮೆಂಟ್ಸ್‌ಗಳಿಗೆ ಜಿಎಸ್‌ಟಿ ನೋಟಿಸ್ ನೀಡಲಾಗಿದೆ. ಮೊದಲು ಜಿಎಸ್‌ಟಿಗೆ ನೋಂದಣಿ ಮಾಡಿಸಿ, ಜಿಎಸ್‌ಟಿ ಪಾವತಿಸಿ ಎಂದು ಸೂಚನೆ ನೀಡಲಾಗಿತ್ತು.
ಈ ನೋಟಿಸ್ ಬಳಿಕ ಯುಪಿಐ ಮೂಲಕ ಹಣ ಪಡೆಯಲು ಚಿಕ್ಕ ಪುಟ್ಟ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ. ಇದು ಡಿಜಿಟಲ್ ವಹಿವಾಟಿಗೆ ಅಂಟಿಕೊಂಡಿದ್ದ ಜನರಿಗೆ ಸಹ ಸಂಕಷ್ಟವನ್ನು ತಂದಿದೆ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್‌ನ ರವಿ ಶೆಟ್ಟಿ ಬೈಂದೂರು ಮಾತನಾಡಿ, “ನಾವು ರಾಜ್ಯ ಸರ್ಕಾರಕ್ಕೆ ಜುಲೈ 24ರ ತನಕ ಗಡುವು ನೀಡಿದ್ದೇವೆ. ನೋಟಿಸ್ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದೇವೆ. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದರೆ ಜುಲೈ 25ರಂದು ಎಲ್ಲಾ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ಮಾಡುತ್ತೇವೆ” ಎಂದರು.
ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟಿ ಎಂದು ಹೇಳುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್‌ಗೆ ನಮ್ಮ ವಿರೋಧವಿದೆ. ಸಾವಿರಾರು ಬಡವರು ಬೇಕರಿ, ಕಾಂಡಿಮೆಂಟ್ಸ್, ತರಕಾರಿ ವ್ಯಾಪಾರ, ರಸ್ತೆ ಬದಿಯ ವಿವಿಧ ಉತ್ಪನ್ನದ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಅವರು ಸಾವಿರಾರು ರೂಪಾಯಿ ವ್ಯಾಪಾರ ಮಾಡಿದರೆ ಲಕ್ಷಾಂತರ ರೂಪಾಯಿಯ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಿದರು.
ಜಿಎಸ್‌ಟಿ ಪಾವತಿ ಮಾಡದಿದ್ದರೆ ವ್ಯಾಪಾರಿಗಳ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಬೆದರಿಕೆಯನ್ನು ಹಾಕಲಾಗುತ್ತಿದೆ. ಆದ್ದರಿಂದ ಜುಲೈ 25ರಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳದರು.