ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಳದಿ ನಮ್ಮ ಮೆಟ್ರೋ ಮಾರ್ಗದ ಸಂಚಾರಕ್ಕೆ ದಿನಗಣನೆ ಪ್ರಾರಂಭವಾಗಿದೆ. ಬಿಎಂಆರ್‌ಸಿಎಲ್ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ಐಎಸ್‌ಎ) ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಆಗಸ್ಟ್ 15ಕ್ಕೆ ಆರ್.ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಚಾಲನೆ ಸಿಗಲಿದೆ.
ಬೆಂಗಳೂರು ನಗರದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ. ಇದು ಸಾಫ್ಟ್‌ವೇರ್ ಕಂಪನಿಗಳು ಅಧಿಕವಾಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಪರ್ಕವನ್ನು ಕಲ್ಪಿಸುತ್ತದೆ. ಆದ್ದರಿಂದ ಐಟಿ ಕಂಪನಿಗಳು ಅನುದಾನವನ್ನು ನೀಡಿ, ಈ ಮಾರ್ಗದಲ್ಲಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಿವೆ.
ಆದರೆ ಹಲವು ಗಡುವುಗಳು ಮುಗಿದರೂ ಸಹ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾಗಿಲ್ಲ. ಸರ್ಕಾರ, ಬಿಎಂಆರ್‌ಸಿಎಲ್ 18.8 ಕಿ.ಮೀ. ಉದ್ದದ ಮಾರ್ಗದಲ್ಲಿ ಈಗ ರೈಲು ಸಂಚಾರ ಆರಂಭಿಸಲು ತಯಾರಿಯನ್ನು ನಡೆಸಿವೆ.
ಈ ಮಾರ್ಗದಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದಿದೆ. ಆದರೆ ರೈಲುಗಳು ಓಡುತ್ತಿಲ್ಲ. ಡಬಲ್ ಡೆಕ್ಕರ್ ಫ್ಲೈ ಓವರ್‌ನ ಒಂದು ಕಡೆ ವಾಹನಗಳು ಸಂಚಾರ ನಡೆಸುತ್ತಿವೆ. ಆದರೆ ಮೇಲ್ಭಾಗದಲ್ಲಿ ರೈಲುಗಳ ಸಂಚಾರ ಇನ್ನೂ ಆರಂಭವಾಗಿಲ್ಲ.
ಅಗತ್ಯವಾಗಿದ್ದ ಪ್ರಮಾಣ ಪತ್ರ: ಬಿಎಂಆರ್‌ಸಿಎಲ್ ಹಳದಿ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಓಡಿಸಲು ನಿರ್ಧರಿಸಿದೆ. ಆದ್ದರಿಂದ ಸಿಗ್ನಲ್ ವ್ಯವಸ್ಥೆ, ಹಳಿಗಳನ್ನು ಪರಿಶೀಲಿಸಿ ಇಂಡಿಪೆಂಡೆಂಟ್ ಸೇಫ್ಟಿ ಅಸೆಸ್ಸರ್ (ಐಎಸ್‌ಎ) ಪ್ರಮಾಣ ಪತ್ರ ಪಡೆಯಬೇಕಿತ್ತು. ಶುಕ್ರವಾರ ಈ ಪ್ರಮಾಣ ಪತ್ರ ಬಿಎಂಆರ್‌ಸಿಎಲ್ ಕೈ ಸೇರಿದೆ.
ಐಎಸ್‌ಎ ಪ್ರಮಾಣ ಪತ್ರವನ್ನು ಪಡೆದಿರುವ ಬಿಎಂಆರ್‌ಸಿಎಲ್ ಈಗ ಮೆಟ್ರೊ ರೈಲು ಸುರಕ್ಷತಾ ಆಯುಕ್ತರನ್ನು (ಸಿಎಂಆರ್‌ಎಸ್) ಪರಿಶೀಲನೆಗೆ ಆಹ್ವಾನ ನೀಡಲಿದ್ದಾರೆ. ಇದು ರೈಲು ಓಡಿಸಲು ಬೇಕಾದ ಅಂತಿಮ ಒಪ್ಪಿಗೆ ಆಗಿದೆ. ಆಯುಕ್ತರು ರೈಲುಗಳ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದರೆ ರೈಲು ಸಂಚಾರದ ದಿನಾಂಕ ಘೋಷಣೆಯಾಗಲಿದೆ.
ಸದ್ಯದ ಮಾಹಿತಿಯಂತೆ ಆಗಸ್ಟ್ 15ರಂದು ಹಳದಿ ಮಾರ್ಗವನ್ನು ಉದ್ಘಾಟಿಸಲಾಗುತ್ತದೆ. ಆದರೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೂ ಅರ್ಧಗಂಟೆಗೊಂದು ರೈಲು ಸಂಚಾರ ನಡೆಸುವ ಸಾಧ್ಯತೆ ಇದೆ. ಕಾರಣ ಬಿಎಂಆರ್‌ಸಿಎಲ್ ರೈಲುಗಳ ಕೊರತೆ ಎದುರಿಸುತ್ತಿದೆ.
ಈಗಿರುವ ರೈಲುಗಳನ್ನು ಬಳಕೆ ಮಾಡಿಕೊಂಡು ಸೀಮಿತ ನಿಲ್ದಾಣಗಳಿಗೆ ಅರ್ಧ ಗಂಟೆಗೊಂದು ರೈಲು ಓಡಿಸುವುದು ಬಿಎಂಆರ್‌ಸಿಎಲ್ ಯೋಜನೆಯಾಗಿದೆ. ಅಕ್ಟೋಬರ್ ಅಂತ್ಯ ಅಥವ ನವೆಂಬರ್‌ನಲ್ಲಿ ನಗರಕ್ಕೆ ಮತ್ತಷ್ಟು ರೈಲುಗಳು ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಬರಲಿದ್ದು, ಆಗ ಸಂಪೂರ್ಣ ಹಳದಿ ಮಾರ್ಗ ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂಬ ಮಾಹಿತಿ ಇದೆ.
ಸದ್ಯ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸುಮಾರು 8 ಲಕ್ಷ ಜನರು ಸಂಚಾರವನ್ನು ನಡೆಸುತ್ತಾರೆ. ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಪ್ರತಿದಿನ 3 ಲಕ್ಷ ಜನರು ಸಂಚಾರವನ್ನು ನಡೆಸಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ. ಈ ಮಾರ್ಗ ಟೆಕ್ಕಿಗಳಿಗೆ ಅನುಕೂಲವಾಗಿದ್ದು, ಅವರು ಖಾಸಗಿ ವಾಹನ ಬಿಟ್ಟು ಮೆಟ್ರೋ ಹತ್ತಿದರೆ ಎಲೆಕ್ಟ್ರಾನಿಕ್ ಸಿಟಿ ಕಡೆ ಸಂಚಾದ ದಟ್ಟಣೆಯೂ ಕಡಿಮೆಯಾಗಲಿದೆ.
ಸಿಎಂಆರ್‌ಎಸ್ ಪರಿಶೀಲನೆ ಯಾವಾಗ? ಎಂಬ ಕುರಿತು ನಮ್ಮ ಮೆಟ್ರೋ ಇನ್ನೂ ಅಂತಿಮ ಮಾಹಿತಿ ನೀಡಿಲ್ಲ. ಈಗ ಇರುವ ರೈಲುಗಳ ಮೂಲಕ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಬಿಎಂಆರ್‌ಸಿಎಲ್ ಯಶಸ್ವಿಯಾಗಿ ನಡೆಸುತ್ತಿದೆ. ಆಯುಕ್ತರು ಮಾರ್ಗದಲ್ಲಿ ಸಂಚಾರ ನಡೆಸಿ ಪರಿಶೀಲನೆ ಕೈಗೊಂಡು ವಾಣಿಜ್ಯ ಸಂಚಾರಕ್ಕೆ ಅಂತಿಮ ಒಪ್ಪಿಗೆ ನೀಡಬೇಕಿದೆ.