ಮೈಸೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನಾ ಸಮಾವೇಶವನ್ನು ಜುಲೈ 19ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಸಮಾವೇಶ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ವೇದಿಕೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಸಮಾವೇಶದ ಕುರಿತು ಮಾತನಾಡಿದರು, “2013ರಲ್ಲಿಯೇ ಜನರು ನಮಗೆ ಶಕ್ತಿ ಕೊಟ್ಟಿದ್ದಾರೆ. ಮತ್ತ-ಮತ್ತೆ ಏಕೆ ಶಕ್ತಿ ಪ್ರದರ್ಶನ ಮಾಡಬೇಕು?’ ಎಂದು ಪ್ರಶ್ನೆ ಮಾಡಿದರು.
“ಮೈಸೂರಿನಲ್ಲಿ ಜುಲೈ 19ರಂದು ನಡೆಯಲಿರುವ ಸಮಾವೇಶ ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಸಮಾವೇಶ ಅಲ್ಲ. ಶಕ್ತಿ ಪ್ರದರ್ಶಿಸುವ ಯಾವ ಅಗತ್ಯವೂ ನಮಗೆ ಇಲ್ಲ, ಇದು ಶಕ್ತಿ ಪ್ರದರ್ಶಿಸುವ ಕಾಲವೂ ಅಲ್ಲ. ಇದು ಸಾಧನೆ ಹೇಳುವ ಕಾಲ” ಎಂದು ಸಚಿವರು ಸ್ಪಷ್ಟಪಡಿಸಿದರು.
ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ: ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಮಾತನಾಡಿ, “ನಾವು ಏನು ಅಭಿವೃದ್ಧಿ ಮಾಡಿದ್ದೇವೆ, ಮಾಡುತ್ತೇವೆ ಎಂಬುದನ್ನು ತೋರಿಸಲು ಸಮಾವೇಶ ಮಾಡುತ್ತಿದ್ದೇವೆಯೇ ಹೊರತು ಶಕ್ತಿ ಪ್ರದರ್ಶನಕ್ಕಲ್ಲ. ಮೈಸೂರಿನಲ್ಲಿ ಸಿದ್ದರಾಮಯ್ಯ ಕಾಲದಲ್ಲಿ ಆದ ಅಭಿವೃದ್ಧಿ ಯಾವ ಕಾಲದಲ್ಲೂ ಆಗಿಲ್ಲ. ಯಾವ ಸರ್ಕಾರವೂ ಮಾಡದ ಕೆಲಸವನ್ನು ಮೈಸೂರಿಗೆ ನಮ್ಮ ಸರ್ಕಾರ ಮಾಡಿದೆ” ಎಂದರು.
“ಕೇವಲ ಮೈಸೂರು ನಗರಕ್ಕಾಗಿ 2569 ಕೋಟಿ ಕೊಟ್ಟಿದ್ದೇವೆ. ಇದು ಸಾಧನೆ ಅಲ್ವಾ?, ಗ್ಯಾರಂಟಿಯಿಂದ ಅನುದಾನ ಇಲ್ಲ ಎಂಬುದು ಸುಳ್ಳು. ಗ್ಯಾರಂಟಿ ಜೊತೆಯೇ ನಾವು ಅಭಿವೃದ್ಧಿ ಮಾಡುತ್ತಿದ್ದೇವೆ.ಈ ಸಾಧನ ಸಮಾವೇಶಕ್ಕೆ ವಿರೋಧ ಪಕ್ಷದ ಶಾಸಕರು ಹಾಗೂ ಸಂಸದರಿಗೆ ಆಹ್ವಾನ ಕೊಟ್ಟಿದ್ದೇವೆ. ಶಿಷ್ಟಾಚಾರ ಪಾಲನೆ ಮಾಡಿದ್ದೇವೆ. ಬರುವುದು ಬಿಡುವುದು ಅವರಿಗೆ ಬಿಟ್ಟದ್ದು” ಎಂದು ಸಚಿವರು ಹೇಳಿದರು.
ಸೂಪರ್ ಸಿಎಂ ಯಾರೂ ಇಲ್ಲ: ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯದ ಸೂಪರ್ ಸಿಎಂ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪೋಸ್ಟ್ ಹಾಕಿದ ಕುರಿತು ಸಚಿವರು ಪ್ರತಿಕ್ರಿಯೆ ನೀಡಿದರು. “ರಾಜ್ಯದಲ್ಲಿ ಯಾವ ಸೂಪರ್ ಸಿಎಂಗಳು ಇಲ್ಲ. ರಾಜ್ಯದಲ್ಲಿ ಇರುವುದು ಒಬ್ಬರೇ ಸಿಎಂ ಅದು ಸಿದ್ದರಾಮಯ್ಯ. ನಮ್ಮಲ್ಲಿ ಅಸಂವಿಧಾನಿಕವಾದ ಯಾವ ಹುದ್ದೆಗಳು ಇಲ್ಲ” ಎಂದು ಸ್ಪಷ್ಟಪಡಿಸಿದರು.
“ಸಚಿವರನ್ನು ಪ್ರತ್ಯೇಕವಾಗಿ ಕರೆದು ಸುರ್ಜೇವಾಲಾ ಸಭೆ ನಡೆಸುತ್ತಿರುವುದಕ್ಕೆ ಬಣ್ಣ ಹಚ್ಚುವುದು ಬೇಡ. ಅವರು ನಮ್ಮ ರಾಜ್ಯದ ಉಸ್ತುವಾರಿ, ಸಭೆ ಕರೆಯಲು ಅವರಿಗೆ ಎಲ್ಲ ಹಕ್ಕಿದೆ. ಹೀಗಾಗಿ ಸಭೆ ನಡೆಸುತ್ತಿದ್ದಾರೆ. ಇದರಲ್ಲಿ ಯಾವ ತಪ್ಪು ಇಲ್ಲ. ಯಾವ ಸಚಿವರು ಸಹ ಈ ಸಭೆಗೆ ವಿರೋಧ ವ್ಯಕ್ತಪಡಿಸಿಲ್ಲ. ನನ್ನನ್ನು ಸಭೆಗೆ ಕರೆದಿದ್ದರು, ನಾನು ಇಂಡಿ ಕಾರ್ಯಕ್ರಮ ಮುಗಿಸಿ ಆ ನಂತರ ಭೇಟಿಯಾಗಿ ಮಾತನಾಡಿದೆ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ” ಎಂದರು.
“ಸಿಗಂದೂರು ಸೇತುವೆ ಕಾಮಗಾರಿ ಇದು ನಮ್ಮ ಮೊದಲ ಅವಧಿಯ ಸರ್ಕಾರದ ಯೋಜನೆ. 2013ರಲ್ಲಿ ನಾವೇ ಈ ಸೇತುವೆ ಯೋಜನೆಗೆ ಕಾರ್ಯಸೂಚಿ ಸಿದ್ದ ಮಾಡಿದ್ದೇವೆ. ಒಟ್ಟಾರೆ ಪ್ಲಾನ್ ಕೂಡ ತಯಾರು ಮಾಡಿದ್ದೇವೆ. ಯಡಿಯೂರಪ್ಪ ಅವರೇ ನನಗೆ ಕರೆ ಮಾಡಿ ಮಹದೇವಣ್ಣ ಈ ಬ್ರಿಡ್ಜ್ ಮಾಡಿಕೊಡು ಎಂದು ಪ್ರೀತಿಯಿಂದ ಹೇಳಿದ್ದರು. ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಮಹದೇವಪ್ಪ ಈ ಬ್ರಿಡ್ಜ್ ಮಾಡು ಎಂದು ಹೇಳಿದ್ದರು. ಹೀಗಾಗಿ ಸೇತುವೆ ಕಾರ್ಯ ಯೋಜನೆ ಮಾಡಿದ್ದೇವೆ” ಎಂದು ಸಚಿವರು ಹೇಳಿದರು.
“ಯೋಜನೆಗೆ ಹಣ ಜಾಸ್ತಿಯಾದ ಕಾರಣ ಅದನ್ನು ಕೇಂದ್ರಕ್ಕೆ ವರ್ಗಾಯಿಸಲಾಯಿತು. ನಾನು ಯಾವತ್ತು ಇದು ನಮ್ಮದು ಎಂದು ಕ್ಲೈಂ ಮಾಡಿಲ್ಲ. ಇವರು ಹೇಳುತ್ತಿರುವುದಕ್ಕೆ ನಾನು ಹೇಳುತ್ತಿದ್ದೇನೆ, ಇದು ಕಾಂಗ್ರೆಸ್ ಸರ್ಕಾರದ ಯೋಜನೆ ಅನ್ನುವುದರಲ್ಲಿ ಯಾವ ಅನುಮಾನಗಳು ಬೇಡ. ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ” ಎಂದು ತಿಳಿಸಿದರು.