ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಹರಿಸುವ ಮುನ್ಸೂಚನೆ ನೀಡಲಾಗಿದೆ. ಡ್ಯಾಂ ಗೇಟುಗಳನ್ನು ತೆರೆದರೆ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ನೀರು ಹರಿದುಬರಲಿದ್ದು, ಅದರ ಸೌಂದರ್ಯ ದುಪ್ಪಟ್ಟಾಗಲಿದೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಕಾರ್ಯನಿರ್ವಾಹಕ ಅಭಿಯಂತರರು (ಕಾಮಗಾರಿ) ಕಛೇರಿ ಲಿಂಗನಮಕ್ಕಿ ಜಲಾಶಯದ ಮೊದಲನೇ ಪ್ರವಾಹ ಮುನ್ಸೂಚನೆ ಕುರಿತು ಜನರಿಗೆ ಸೂಚನೆ ನೀಡಿದೆ.
ಶರಾವತಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನದಿನೇ ಏರುತ್ತಿರುತ್ತದೆ ಎಂದು ಹೇಳಿದೆ.
ಜಲಾಶಯದ ಗರಿಷ್ಠ ಮಟ್ಟವು 1819 ಅಡಿಗಳಾಗಿದ್ದು, ದಿನಾಂಕ 15/07/2025ರಂದು ಜಲಾಶಯದ ನೀರಿನ ಮಟ್ಟ 1801.10 ಅಡಿಗಳಗೆ ತಲುಪಿರುತ್ತದೆ. ಜಲಾಶಯದ ಒಳ ಹರಿವು ಸುಮಾರು 32,000 ಕ್ಯುಸೆಕ್‌ಗಳಿಗಿಂತಲೂ ಅಧಿಕವಾಗಿದೆ.
ಇದೇ ರೀತಿಯಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣವು ಮುಂದುವರೆದಲ್ಲಿ ಜಲಾಶಯವು ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುವುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು.
ಆದ್ದರಿಂದ, ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ಜಾನುವಾರುಗಳ ಜೊತೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕು ಹಾಗೂ ಪ್ರವಾಸಿಗರು ನದಿಯ ನೀರಿಗೆ ಇಳಿಯಬಾರದೆಂದು ಸೂಚನೆ ನೀಡಲಾಗಿದೆ.
ಮಲೆನಾಡಿನಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ಜೋಗ ಜಲಪಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಲಿಂಗನಮಕ್ಕಿ ಡ್ಯಾಂನಿಂದ ನೀರು ಹೊರ ಬಿಟ್ಟರೆ ಅದು ಜೋಗ ಜಲಪಾತ ತಲುಪುತ್ತದೆ. ಆಗ ಜಲಪಾತದ ಸೌಂದರ್ಯ ಇಮ್ಮಡಿಯಾಗುತ್ತದೆ.
ಜೋಗ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಈಗಾಗಲೇ ಹಾವೇರಿ, ರಾಣೆಬೆನ್ನೂರು, ಹುಬ್ಬಳ್ಳಿ ಮೂಲಕ ಬಸ್‌ಗಳ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಿದೆ. ಖಾಸಗಿ ವಾಹನ, ಶಿವಮೊಗ್ಗ ಕಡೆಯಿಂದಲೂ ನೂರಾರು ಜನರು ಮಳೆಗಾಲದಲ್ಲಿ ಜೋಗ ನೋಡಲು ಆಗಮಿಸುತ್ತಾರೆ.
ಸಿಗಂದೂರು ಕೇಬಲ್ ಬ್ರಿಡ್ಜ್ ಸೋಮವಾರ ಲೋಕಾರ್ಪಣೆಯಾಗಿದೆ. ಸಾಗರದಲ್ಲಿ ಜೋಗ ಸೇರಿದಂತೆ ಹಲವು ಪ್ರವಾಸಿ ಆಕರ್ಷಣೆಗಳಿವೆ. ಜೋಗ ಲಿಂಗನಮಕ್ಕಿ ಡ್ಯಾಂ ಬಾಗಿಲು ತೆರೆದರೆ ಸಾವಿರಾರು ಪ್ರವಾಸಿಗರು ವಾರಾಂತ್ಯದಲ್ಲಿ, ರಜೆ ದಿನಗಳಲ್ಲಿ ಜೋಗ ನೋಡಲು ಬರಲಿದ್ದಾರೆ.
ಲಿಂಗನಮಕ್ಕಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದು. ಅದರಲ್ಲೂ ರಾಜ್ಯದಲ್ಲಿ ಜಲವಿದ್ಯುತ್ ಉತ್ಪಾದನೆಯಲ್ಲಿ ಲಿಂಗನಮಕ್ಕಿ ಡ್ಯಾಂ ಮೊದಲ ಸ್ಥಾನದಲ್ಲಿದೆ. ಜುಲೈ ಅಂತ್ಯದಲ್ಲಿ ಡ್ಯಾಂ ಸಾಮಾನ್ಯವಾಗಿ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಜುಲೈ 20ರ ವೇಳೆಗೆ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಬೇಗನೆ ಭರ್ತಿಯಾಗುವ ಸೂಚನೆ ಸಿಕ್ಕಿದೆ.