Devanahalli: ರೈತರ ಹೋರಾಟಕ್ಕೆ ಗೆಲುವು, ದೇವನಹಳ್ಳಿ ಭೂ ಸ್ವಾಧೀನ ರದ್ದು

1
144

ಬೆಂಗಳೂರು: ಕರ್ನಾಟಕದ ಗಮನ ಸೆಳೆದಿದ್ದ ಹೋರಾಟದಲ್ಲಿ ರೈತರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ದೇವನಹಳ್ಳಿಯ ಭೂ ಸ್ವಾಧೀನ ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ರೈತರು, ರೈತಪರ ಹೋರಾಟಗಾರರ ಜೊತೆ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಘೋಷಣೆ ಮಾಡಿದ್ದಾರೆ. ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಅಧಿಸೂಚನೆ ರದ್ದುಗೊಳಿಸುವುದಾಗಿ ಅವರು ಹೇಳಿದ್ದಾರೆ.

ರೈತರ ಭೂಮಿ ಸ್ವಾಧೀನ ವಿರೋಧಿಸಿ ಬೃಹತ್ ಪ್ರತಿಭಟನೆಗಳು ನಡೆದಿತ್ತು. ಸಾಹಿತಿಗಳು, ಸಿನಿಮಾ ತಾರೆಯರು ಹೋರಾಟಕ್ಕೆ ಬೆಂಬಲ ನೀಡಿದ್ದರು. ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಈ ಕುರಿತು ಮುಖ್ಯಮಂತ್ರಿಗಳ ಜೊತೆ ರೈತರು ಹಲವು ಬಾರಿ ಸಭೆಯನ್ನು ನಡೆಸಿದ್ದರು.

ದೇವನಹಳ್ಳಿ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ರೈತರ 1777 ಎಕರೆ ಭೂಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆ ರದ್ದು ಮಾಡಲಾಗುವುದು ಎಂದು ಇಂದಿನ ಸಭೆ ಬಳಿಕ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಸ್ವ-ಇಚ್ಛೇಯಿಂದ ಭೂಮಿ ನೀಡಲು ರೈತರು ಮುಂದೆ ಬಂದರೆ ಅದನ್ನು ಖರೀದಿ ಮಾಡಲಾಗುತ್ತದೆ. ಅಭಿವೃದ್ಧಿಗೊಳಿಸಿದ ಭೂಮಿಯಲ್ಲಿ ಶೇ 50ರಷ್ಟು ಭೂಮಿಯನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಭೂ ಸ್ವಾಧೀನ ರದ್ದುಗೊಳಿಸಬೇಕು, ರೈತರ ಭೂಮಿ ಉಳಿಸಬೇಕು ಎಂದು ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು 1,198 ದಿನಗಳಿಂದ ಹೋರಾಟವನ್ನು ನಡೆಸುತ್ತಿದ್ದರು. ನಟ ಪ್ರಕಾಶ್ ರಾಜ್, ಹಲವು ಸಾಹಿತಿಗಳು ಈ ಹೋರಾಟಕ್ಕೆ ಬೆಂಬಲ ನೀಡಿದ್ದರು.

ಸೋಮವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಮಾತನಾಡಿ, ‘ಭೂ ಸ್ವಾಧೀನ ರದ್ದುಗೊಳಿಸುವ ಕುರಿತು ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಬೇಕು” ಎಂದು ಹೇಳಿದ್ದರು. ರೈತರ ಜೊತೆ ಕಳೆದ ಬಾರಿ ಸಭೆ ನಡೆಸಿದಾಗ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಕೈಗೊಳ್ಳಲು 10 ದಿನದ ಕಾಲಾವಕಾಶ ಕೇಳಿದ್ದರು.

ಮಂಗಳವಾರದ ಸಭೆಯ ಕುರಿತು ಮುಖ್ಯಮಂತ್ರಿಗಳ ಕಛೇರಿ ಮಾಹಿತಿ ನೀಡಿದೆ. ಸಭೆಯ ತೀರ್ಮಾನಗಳನ್ನು ಪ್ರಕಟಣೆ ಮೂಲಕ ತಿಳಿಸಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಭಾಂಗಣದಲ್ಲಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಯಿತು.

ಮುಖ್ಯಮಂತ್ರಿಗಳು ಹೇಳಿದ್ದೇನು?

  • ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ.
  • ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದ್ದರೂ ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು.
  • ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ.
  • ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ.
  • 1777 ಎಕರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶ. ಬೆಂಗಳೂರಿನ ಸಮೀಪದಲ್ಲಿ ಇದಕ್ಕೆ ಜಮೀನು ಒದಗಿಸಲು ಕೋರಿಕೆ ಸ್ವೀಕರಿಸಲಾಗಿತ್ತು.
  • ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.

ಏನಿದು ಯೋಜನೆ?: ಕರ್ನಾಟಕ ಸರ್ಕಾರ ದೇವನಹಳ್ಳಿಯಲ್ಲಿ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಇದಕ್ಕಾಗಿ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಪ್ರಕಟಿಸಲಾಗಿತ್ತು, ಇದು ವಿವಾದಕ್ಕೆ ಕಾರಣವಾಗಿತ್ತು.

ಜಮೀನು ಸ್ವಾಧೀನಕ್ಕೆ 2021ರಲ್ಲಿಯೇ ಅಧಿಸೂಚಿಸಲಾಗಿದೆ.2022ರಲ್ಲಿ ಆದೇಶ ಹೊರಡಿಸಲಾಗಿತ್ತು. ಹೂಡಿಕೆ ಮಾಡುವವರು ತಮ್ಮ ಕಾರ್ಯಾಚರಣೆಗೆ ಸೂಕ್ತ ಎನಿಸುವ ಜಾಗವನ್ನು ಕೋರುತ್ತಾರೆ. ನಾವು ಅವರ ಅಹವಾಲುಗಳನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಸರ್ಕಾರ ಹೇಳಿತ್ತು.

ಈ ಭೂ ಸ್ವಾಧೀನ ಅಧಿಸೂಚನೆ ವಾಪಸ್ ಪಡೆಯಬೇಕು ಎಂದು ಬೃಹತ್ ಹೋರಾಟ ನಡೆದಿತ್ತು. ರೈತರು, ಪ್ರಗತಿಪರ ಸಂಘಟನೆಗಳ ಸದಸ್ಯರು ಬೆಂಗಳೂರು ನಗರದ ಪ್ರೀಡಂಪಾರ್ಕ್‌ನಲ್ಲಿಯೂ ಹೋರಾಟವನ್ನು ನಡೆಸುತ್ತಿದ್ದರು.

Previous articleSigandur Bridge: ಸಿಗಂದೂರು ಬ್ರಿಡ್ಜ್ ಉದ್ಘಾಟನೆ, ಮೋದಿಗೆ ಸಿದ್ದರಾಮಯ್ಯ ಪತ್ರ!
Next articleTesla India: ಭಾರತಕ್ಕೆ ಬಂತು ಟೆಸ್ಲಾ, ಮೊದಲ ಮಳಿಗೆ ಲೋಕಾರ್ಪಣೆ

1 COMMENT

LEAVE A REPLY

Please enter your comment!
Please enter your name here