ಶಿವಮೊಗ್ಗ: ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಗೆ ನೀರು ಹರಿಸುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕ ಇನ್ನೂ ತೀರ್ಮಾನ ಮಾಡಿಲ್ಲ, ಶೀಘ್ರದಲ್ಲೇ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಸೋಮವಾರ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಮುಂಗಾರು ಬೆಳೆಗೆ ನೀರು ಹರಿಸುವ ಕುರಿತು ಭದ್ರ ಕಾಡಾ ಕಚೇರಿಯಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.
ಮುಂಗಾರು ಬೆಳೆಗೆ ಬಲದಂಡೆ ನಾಲೆಗೆ ಜುಲೈ 22 ರಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಹಾಗೂ ಎಡದಂಡೆ ನಾಲೆಗೆ ನೀರು ಹರಿಸುವ ದಿನಾಂಕ ಶೀಘ್ರದಲ್ಲೇ ನಿಗದಿ ಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸುರಕ್ಷತಾ ಕ್ರಮಗಳನ್ನು ಕೈಗೊಂಡು ನೀರು ಬಿಡಬೇಕು. ಎಡದಂಡ ನಾಲೆಯಲ್ಲಿ ರಿಪೇರಿ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದು . ಶೀಘ್ರದಲ್ಲೇ ಎಡದಂಡ ನಾಲೆಗೆ ನೀರು ಹರಿಸಲು ದಿನಾಂಕ ನಿಗದಿಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಚಿಕ್ಕಮಗಳೂರಿಗೂ ನೀರು: ಎಡದಂಡೆ ನಾಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ನೀರು ಹಂಚಿಕೆ ಕುರಿತು ನೀರಾವರಿ ಸಚಿವರೊಂದಿಗೆ ಸಭೆ ನಿಗದಿಪಡಿಸಿ ಮಾತನಾಡಬೇಕು. ಕಾಡಾ ವ್ಯಾಪ್ತಿಯಲ್ಲಿ 537 ನೀರು ಬಳಕೆದಾರರ ಸಂಘಗಳಿದ್ದು, ಇವುಗಳಿಗೆ ನೀರು ಬಳಕೆ, ಇತರೆ ರೈತ ಚಟುವಟಿಕೆ ಕುರಿತು ಕಾರ್ಯಾಗಾರ ಮಾಡಿದರೆ ಒಳಿತು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಹರಿಹರ ಶಾಸಕ ಬಿ.ಪಿ.ಹರೀಶ್, “ಮಂಗಳವಾರದಿಂದಲೇ ನೀರು ಬಿಟ್ಟರೆ ಒಳಿತಾಗುತ್ತದೆ. ಹರಪನಹಳ್ಳಿ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ರೈತಪರ ಕಾಳಜಿವಹಿಸಿ ಕೊನೆ ಭಾಗದ ರೈತರಿಗೆ ನೀರು ತಲುಪಿಸಬೇಕು. ಅಕ್ರಮ ಪಂಪ್ ಸೆಟ್ ತೆರವು ಕಷ್ಟವಾಗಿದೆ. ಕೆರೆ ತುಂಬಿಸಲು, ಕುಡಿಯುವ ನೀರಿಗಾಗಿ ಭದ್ರಾ ನಾಲೆಯನ್ನು ಸೀಳುತ್ತಾ ಹೋಗುವುದು ಅಷ್ಟು ಸರಿಯಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಕಷ್ಟ ಆಗುತ್ತದೆ” ಎಂದರು.
ಸಮಿತಿ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, “ವೇಳಾಪಟ್ಟಿ ಬಗ್ಗೆ ಯಾರಲ್ಲೂ ಭಿನ್ನಾಭಿಪ್ರಾಯ ಇಲ್ಲ. ಕಾಲುವೆ ತುಂಬಾ ನೀರು ಹರಿಸಲಾಗುತ್ತದೆ. ಆದರೂ ಕೊನೆಭಾಗ ತಲುಪುತ್ತಿಲ್ಲವೆಂದರೆ ಲೀಕೇಜ್ ತಡೆದು ಉಳಿಸಬೇಕು. ಹೂಳು, ರಿಪೇರಿ ಸೇರಿದಂತೆ ನಾಲೆಗಳ ನಿರ್ವಹಣೆ ಸಮರ್ಪಕವಾಗಿ ಆಗಬೇಕು. ಎಲ್ಲಾ ಭಾಗದವರಿಗೂ ಅನುಕೂಲ ಆಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ತಿಳಿಸಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, “ಕಟ್ಟಕಡೆಯ ರೈತರಿಗೂ ಯಾವುದೇ ತೊಂದರೆಯಾಗದಂತೆ ನೀರು ಬಿಡುತ್ತೇವೆ. ರೈತರ ಹಿತ ಕಾಪಾಡಲು ಸದಾ ಸಿದ್ದವಾಗಿದ್ದೇವೆ. ತಾಂತ್ರಿಕ, ಕೃಷಿ ವಿಭಾಗಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿವೆ. ಸವಳು ಜವಳು ಯೋಜನೆ ಜಾರಿ ಮಾಡಲು ರೈತ ರ ಸಹಕಾರ ಬೇಕು. ಭೂಮಿ ಫಲವತ್ತತೆಯ, ಸುರಕ್ಷತೆ ಬಗ್ಗೆ ಸಹ ಕಾಡಾ ಕೆಲಸ ಮಾಡುತ್ತಿದೆ” ಎಂದರು.
ಭದ್ರಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಡ್ಯಾಂ ಭರ್ತಿಯಾಗಿದೆ. ಡ್ಯಾಂ ಗೇಟುಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಈಗ ರೈತರಿಗೆ ಕೃಷಿ ಚಟುವಟಿಕೆಗಾಗಿ ನಾಲೆ ಮೂಲಕ ನೀರು ಹರಿಸುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ.