ಬೆಂಗಳೂರು: ಬೆಂಗಳೂರು ನಗರದ 2ನೇ ಏರ್‌ಪೋರ್ಟ್ ಸದಾ ಚರ್ಚೆಯ ವಿಚಾರ. ಏರ್‌ಪೋರ್ಟ್ ಎಲ್ಲಿ ನಿರ್ಮಾಣವಾಗಲಿದೆ?, ಅದಕ್ಕೆ ಅಗತ್ಯ ಇರುವ ಭೂಮಿ ಎಷ್ಟು? ಎಂಬುದು ಇನ್ನೂ ಅಂತಿಮವಾಗಿಲ್ಲ. ರಾಜ್ಯ ಸರ್ಕಾರ ಕಗ್ಗಲೀಪುರ, ಹಾರೋಹಳ್ಳಿ ಅಥವ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿರುವ ಚಿಕ್ಕಸೋಲೂರನ್ನು ಗುರುತಿಸಿದೆ ಎಂಬ ಮಾಹಿತಿ ಇದೆ.
ಸದ್ಯದ ಮಾಹಿತಿ ಪ್ರಕಾರ 2ನೇ ವಿಮಾನ ನಿಲ್ದಾಣಕ್ಕೆ 3 ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಅಂತಿಮ ಸ್ಥಳವನ್ನು ಗುರುತು ಮಾಡಲು ಕೇಂದ್ರ ಸಚಿವರನ್ನು ಭೇಟಿಯಾಗಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ್ ಸಿದ್ಧತೆ ನಡೆಸಿದ್ದಾರೆ.
ಉದ್ಯಾನ ನಗರಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚಾಗುತ್ತಿದೆ. ಆದ್ದರಿಂದ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ 3 ಸ್ಥಳಗಳನ್ನು ಅಂತಿಮವಾಗಿ ಗುರುತಿಸಲಾಗಿದೆ.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳ ತಂಡ ಕನಕಪುರ ಮುಖ್ಯರಸ್ತೆಯ ಕಗ್ಗಲೀಪುರ, ಹಾರೋಹಳ್ಳಿ ಹಾಗೂ ನೆಲಮಂಗಲದ ಕುಣಿಗಲ್ ರಸ್ತೆಯ ಚಿಕ್ಕಸೋಲೂರು ಭಾಗದಲ್ಲಿ ಸ್ಥಳವನ್ನು ಪರಿಶೀಲನೆ ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಔಪಚಾರಿಕ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಪ್ರಸ್ತಾವನೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಸಚಿವ ಎಂ.ಬಿ.ಪಾಟೀಲ್ ದೆಹಲಿ ಭೇಟಿ ಕೈಗೊಂಡಿದ್ದಾರೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಭೇಟಿಯಾಗಲು ಸಿದ್ಧತೆ ನಡೆಸಿದ್ದಾರೆ.
ಭೂಮಿ ಮತ್ತು ರೈತರ ಹೋರಾಟ: ಈಗಾಗಲೇ ದೇವನಹಳ್ಳಿ ತಾಲೂಕಿನಲ್ಲಿ ಭೂಮಿ ಸ್ವಾಧೀನಪಡಿಸಿಕೊಂಡು ಏರೋಸ್ಪೇಸ್ ಘಟಕ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಆಲೋಚನೆ ರೈತರ ಹೋರಾಟದ ಕಾರಣ ಸದ್ಯಕ್ಕೆ ರದ್ದಾಗಿದೆ. ಆದ್ದರಿಂದ 2ನೇ ವಿಮಾನ ನಿಲ್ದಾಣ ಸ್ಥಳದ ಕುರಿತು ಸಹ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನು ಇಡಲಿದೆ.
2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 4,500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಆದ್ದರಿಂದ ಏರ್‌ಪೋರ್ಟ್ ಎಲ್ಲಿ ನಿರ್ಮಾಣವಾಗಲಿದೆ? ಎಂಬುದು ರೈತರಲ್ಲಿ ಆತಂಕವನ್ನು ಮೂಡಿಸಿದೆ. ಈಗ ಗುರುತಿಸಿರುವ ಮೂರು ಸ್ಥಳಗಳ ನಡುವೆಯೇ ಪೈಪೋಟಿ ಇದ್ದು, ಯಾವ ಜಿಲ್ಲೆಗೆ ನಿಲ್ದಾಣ ಸಿಗಲಿದೆ? ಎಂಬುದು ಪ್ರಶ್ನೆಯಾಗಿದೆ.
2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾವಿತ ಸ್ಥಳಗಳು ಸೂಕ್ತವೇ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಉತ್ತಮ ಸಂಪರ್ಕ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣ ಸ್ಥಾಪಿಸಬೇಕು. ರೈತರ ಹಿತವನ್ನು ಕಾಪಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.
ನೆಲಮಂಗಲ ವ್ಯಾಪ್ತಿಯಲ್ಲಿಯೇ 2ನೇ ವಿಮಾನ ನಿಲ್ದಾಣವಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ. ಅಂತಿಮಗೊಂಡಿರುವ ಸ್ಥಳದ ಪೈಕಿ ಎರಡು ಸ್ಥಳ ಕನಕಪುರ ರಸ್ತೆ ವ್ಯಾಪ್ತಿಗೆ ಮತ್ತೊಂದು ಸ್ಥಳ ನೆಲಮಂಗಲ-ಕುಣಿಗಲ್ ರಸ್ತೆ ವ್ಯಾಪ್ತಿಗೆ ಬರುತ್ತದೆ. ಈ ಮೂರು ಸ್ಥಳಗಳು ಬೆಂಗಳೂರು ನಗರ ಕೇಂದ್ರದಿಂದ 25 ರಿಂದ 45 ಕಿ.ಮೀ. ದೂರದಲ್ಲಿವೆ.
ಕರ್ನಾಟಕ ಸರ್ಕಾರ ಕೇಂದ್ರದ ಜೊತೆ ಚರ್ಚಿಸಿದ ಬಳಿಕ 2ನೇ ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಸ್ಥಳವನ್ನು ಅಂತಿಮಗೊಳಿಸಿದರೆ ಅಲ್ಲಿ ಭೂಮಿಯ ಬೆಲೆ ಎರಡು ಪಟ್ಟು ಏರಿಕೆಯಾಗಿದೆ.