ಹಾವೇರಿ: ಜನರ ಈ ತೀರ್ಪನ್ನು ಅತ್ಯಂತ ಗೌರವ ಪೂರ್ವಕವಾಗಿ ನಾನು ಒಪ್ಪಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿಯ ಈ ಸೋಲಿನ ಜವಾಬ್ದಾರಿಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನಾನೇ ಹೊರುತ್ತೇನೆ. ಇದನ್ನು ಯಾರ ಹೆಗಲಿಗೂ ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿ ದೇವಗಿರಿಯ ಮತ ಎಣಿಕೆ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಈ ಸೋಲಿನ ಬಗ್ಗೆ ಸಂಪೂರ್ಣವಾದ ಪರಾಮರ್ಶೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಹಲಾವರು ಕಾರಣಗಳಿವೆ. ಇದನ್ನು ಪಕ್ಷದಲ್ಲಿ ಆಂತರಿಕವಾಗಿ ಆತ್ಮಾವಲೋಕನ ಮಾಡುತ್ತೇವೆ.
ಪ್ರತಿಯೊಂದು ಕ್ಷೇತ್ರದ ಕುರಿತು ಕೂಲಂಕುಷವಾಗಿ ಪರಿಶೀಲನೆ ಮಾಡುತ್ತೇವೆ. ಏನೆಲ್ಲ ಕೊರತೆಗಳು ಆಗಿವೆ. ಅವುಗಳನ್ನು ನೀಗಿಸಿ ಮತ್ತೊಮ್ಮೆ ಸಂಘಟಿತರಾಗಿ ಮತ್ತೆ ಪುಟಿದು ಏಳುವ ಪಕ್ಷ ಬಿಜೆಪಿ. ಬರುವಂತ ಸಂಸತ್ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಎಲ್ಲ ಸಂಘಟನಾತ್ಮಕ ಬಲದಿಂದ ತಪ್ಪುಗಳನ್ನು ಸರಿ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇವೆ.
ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ: ಮೋದಿ, ಅಮಿತ್ ಷಾ ಪ್ರಚಾರ ಕೈ ಹಿಡಿಯಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸೋಲಿಗೆ ಹಲವಾರು ಕಾರಣಗಳಿವೆ. ಅದನ್ನು ಅವಲೋಕನ ಮಾಡಿದಾಗ ಗೊತ್ತಾಗುತ್ತದೆ. ಈ ಬಗ್ಗೆ ಈಗಲೇ ಹೇಳುವುದು ಸರಿಯಲ್ಲ ಎಂದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲುವು ಕುರಿತು ಮಾತನಾಡಿದ ಸಿಎಂ, ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿದಿವೆ. ಬೆಂಬಲಿಸಿದ್ದಾರೆ. ನಿರಂತರವಾಗಿ ನಾಲ್ಕನೇ ಬಾರಿಗೆ ಬೆಂಬಲ ಕೊಟ್ಟಿದ್ದಾರೆ. ನಾನು ಇನ್ನಷ್ಟು ಜವಾಬ್ದಾರಿಯಿಂದ ಕೆಲಸಮಾಡುತ್ತೇನೆ. ಕಾಂಗ್ರೆಸ್ ಗೆಲುವಿಗೆ ಕಾರಣ ಅವರು ಹೇಳಬೇಕು. ಅವರು ನಮಗಿಂತ ವ್ಯವಸ್ಥಿತವಾಗಿ ಚುನಾವಣೆ ಮಾಡಿದ್ದಾರೆ ಎನಿಸುತ್ತದೆ ಎಂದರು.