ಮುಚ್ಚಿರುವ ದಾಂಡೇಲಿ ಶಾಲೆ: ಲೀಸ್‌ ಭೂಮಿ ಮರಳಿ ಪಡೆಯುವಂತೆ ನಗರಸಭೆಗೆ ಆಗ್ರಹ

ದಾಂಡೇಲಿ: ಇಲ್ಲಿಯ ಮಾರುತಿ ನಗರದಲ್ಲಿರುವ ಡಾ.ಅಂಬೇಡ್ಕರ ನಂದಿ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡವಿಂದು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಈ ಶಾಲೆಯ ಕೊಠಡಿ ಬೀಗ ಮುರಿದು ಒಳಗೆ ಹಾಗೂ ಆವರಣದ ಹೊರಗೆ ಸಂಜೆಯಾದೊಡನೆ ಗಾಂಜಾ ಸೇದುವವರ ಹಾಗೂ ಕುಡುಕರ ಅಡ್ಡೆಯಾಗಿ ಸುತ್ತಲಿನ ಸಾರ್ವಜನಿಕರ ನೆಮ್ಮದಿ ಕೆಡಿಸಿದೆ. ಸರ್ಕಾರದ ಅನುಧಾನಿತ ಶಾಲೆಯಾಗಿದ್ದರೂ ಮುಚ್ಚಿದ್ದು, ಪುನರಾರಂಭವಾಗುವ ಸಾಧ್ಯತೆಗಳಿಲ್ಲ. ಈ ಶಾಲೆಗೆ ದಾಂಡೇಲಿ ನಗರಸಭೆಯಿಂದ 20 ಗುಂಠೆ ಭೂಮಿಯನ್ನು ಲೀಸ್ ಮೇಲೆ ನೀಡಲಾಗಿದೆ. ಈ ಭೂಮಿ ಪರಭಾರೆ ಮಾಡುವ ಪ್ರಯತ್ನಗಳು ನಡೆದಿದೆ. ನಗರಸಭೆ ಈ ಭೂಮಿಯ ಲೀಸ್ ರದ್ದುಪಡಿಸಿ ವಶಕ್ಕೆ ಪಡೆದು ಮಾರುತಿ ನಗರದ ಸಾರ್ವಜನಿಕರ ಅಭಿವೃಧ್ಧಿಗೆ ಜಾಗೆಯನ್ನು ಮೀಸಲಿಡಬೇಕೆಂದು ಇಲ್ಲಿಯ ಸಾರ್ವಜನಿಕರು ನಗರಸಭಾಧ್ಯಕ್ಷ ಹಾಗೂ ಆಯುಕ್ತರನ್ನು ಆಗ್ರಹಿಸಿದ್ದಾರೆ.