ಬಿಜೆಪಿ‌ ರೈತ ಮೋರ್ಚಾವತಿಯಿಂದ ಪ್ರತಿಭಟನೆ

0
19

ಶ್ರೀರಂಗಪಟ್ಟಣ: ಇಂದಿನ ರಾಜ್ಯ ಸರ್ಕಾರ ರೈತರ ವಿರೋಧಿ ಸರ್ಕಾರವಾಗಿದ್ದು, ರೈತಪರವಾದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ರೈತರು ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ತಾಲ್ಲೂಕು‌ ಬಿಜೆಪಿ‌ ಅಧ್ಯಕ್ಷ ಪೀ ಹಳ್ಳಿ ರಮೇಶ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ರೈತರಿಗೆ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ, ಶ್ರಮಶಕ್ತಿ ಯೋಜನೆ ಸೇರಿದಂತೆ ಹಲವು ರೈತಪರವಾದ ಯೋಜನೆಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ. ರೈತರ ಅನುಕೂಲಗಳನ್ನು ಕಿತ್ತು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇತರೆ ಯೋಜನೆಗಳಿಗೆ ಬಳಸಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ರನ್ನು ಓಲೈಸುವ ಸಲುವಾಗಿ ತಮಿಳುನಾಡಿಗೆ ನೀರು ಬಿಟ್ಟಿರುವ ಸರ್ಕಾರ, ರೈತರ ತಲೆ ಮೇಲೆ ಚಪ್ಪಡಿ ಎಳೆದಿದೆ. ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಬೆಳೆ ನಷ್ಟ ಪರಿಹಾರ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ತಾಲ್ಲೂಕು ಕಚೇರಿ ಅಧಿಕಾರಿಗಳ ಮೂಲಕ‌ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಬಲ್ಲೇನಹಳ್ಳಿ ಕೃಷ್ಣೇಗೌಡ, ಮಂಜುನಾಥ್, ಮಹದೇವು ಸೇರಿದಂತೆ ಇತರರು ಉಪಸ್ಥಿತರಿದ್ದರು.

Previous articleಗಣಪನಿಗೆ ಬಣ್ಣ ಹಚ್ಚಿ
Next articleಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣದಿಂದ ಬರಗಾಲ ಘೋಷಣೆ ವಿಳಂಬ