ಬೆಂಗಳೂರು: ಘನ ಕರ್ನಾಟಕ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಉಚಿತ ಯೋಜನೆ ಜಾರಿ. ಆಧಾರ್ ಕಾರ್ಡ್ ತೋರಿಸಿದರೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮುಜರಾಯಿ ದೇವಸ್ಥಾನಗಳಲ್ಲಿ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಿ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ ಈ ಸೌಲಭ್ಯ ಸಿಗಲಿದೆ. ಸದ್ಯ ಕುಕ್ಕೆ ಸುಬ್ರಮಣ್ಯ, ಚಾಮುಂಡಿಬೆಟ್ಟ, ಸಿಗಂದೂರು, ಕೊಲ್ಲೂರು ಸೇರಿದಂತೆ ನಾಡಿನ ಎಲ್ಲಾ ಪ್ರಮುಖ ದೇವಸ್ಥಾನಗಳೂ ಕೂಡಾ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿವೆ. ದೇವಾಲಯಗಳಲ್ಲಿ ಹಿರಿಯ ನಾಗರೀಕರ ಸಹಾಯ ಕೇಂದ್ರವನ್ನು ಸ್ಥಾಪಿಸಬೇಕು. ಹಿರಿಯ ನಾಗರೀಕರಿಗೆ ಸಹಕರಿಸಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು, ಸದರಿ ಸಹಾಯ ಕೇಂದ್ರಕ್ಕೆ ಜವಾಬ್ದಾರಿಯುತ ಸಿಬ್ಬಂದಿಗಳನ್ನು ನಿಯೋಜಿಸಿ ಹಿರಿಯ ನಾಗರೀಕರಿಗೆ ಅರಿತ ದರ್ಶನ ಏರ್ಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಹಿರಿಯ ನಾಗರೀಕರು ಅವರ ವಯಸ್ಸಿನ ದಾಖಲೆ/ ಆಧಾರ ಕಾರ್ಡ್ ತೋರಿಸಿದಲ್ಲಿ ಅವರಿಗೆ ಶೀಘ್ರ ದರ್ಶನಕ್ಕೆ ಅನುಕೂಲವಾಗುವಂತ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.


























