ಚಿತ್ರ: ಸನ್ ಆಫ್ ಮುತ್ತಣ್ಣ
ನಿರ್ಮಾಣ: ಪುರಾತನ ಫಿಲಂಸ್
ನಿರ್ದೇಶನ: ಶ್ರೀಕಾಂತ್ ಹುಣಸೂರು
ತಾರಾಗಣ: ಪ್ರಣಾಮ್ ದೇವರಾಜ್, ಖುಷಿ ರವಿ, ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಮತ್ತಿತರರು.
ರೇಟಿಂಗ್ಸ್: 3 ***
- ಜಿ.ಆರ್.ಬಿ
ಪ್ರತಿಯೊಂದು ಸಿನಿಮಾದ ಕಥೆಯೂ ಫೀಲ್ ಗುಡ್ ಎನಿಸುವಷ್ಟು ಚೆನ್ನಾಗಿರುವುದಿಲ್ಲವಾದರೂ, ಇರುವ ಕಥೆಯನ್ನೇ ಎಷ್ಟರಮಟ್ಟಿಗೆ ಆಸಕ್ತಿಕರವಾಗಿ ತೋರಿಸಬಹುದು, ಆ ರೀತಿಯ ಅಂಶಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು ಎಂಬ ಕಲೆ ಸಿದ್ಧಿಸಿದ್ದರೆ ನಿರ್ದೇಶಕ ಅರ್ಧ ಗೆದ್ದಂತೆ. ಅದರಲ್ಲೂ ಫ್ಯಾಮಿಲಿ ಸಮೇತ ಕುಳಿತು ನೋಡುವ ಕಂಟೆಂಟ್ ಇದ್ದರಂತೂ ಭಾಗಶಃ ಗೆದ್ದಂತೆ…
ಇದು ‘ಸನ್ ಆಫ್ ಮುತ್ತಣ್ಣ’ ಮೂಲಕ ಸಾಧ್ಯವಾದಷ್ಟೂ ನೆರವೇರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕ ಶ್ರೀಕಾಂತ್ ಹುಣಸೂರು. ಸೆಂಟಿಮೆಂಟ್ ಕಥೆಗಳಲ್ಲಿ ಬಿಗಿಯಾದ ಬಂಧ-ಸಂಬಂಧದ ಹೂರಣವಿದ್ದರೆ, ಒಂದೊಳ್ಳೆ ಭೋಜನೆ ಸವಿದಂತೆ. ‘ಮುತ್ತಣ್ಣ’ನ ಮುಖೇನ ಕಾಮಿಡಿ, ಸೆಂಟಿಮೆಂಟ್, ಫ್ಯಾಮಿಲಿ ಅಟ್ಯಾಚ್‌ಮೆಂಟ್ ಮತ್ತು ಡಿಟ್ಯಾಚ್‌ಮೆಂಟ್‌ಗಳನ್ನು ಹರವಿಟ್ಟಿದ್ದಾರೆ. ಅದರಲ್ಲಿ ಯಾವುದಕ್ಕೆ ಎಷ್ಟು ಶೇರು ಎನ್ನುವುದಕ್ಕಿಂತ ಎಲ್ಲದಕ್ಕೂ ಸಮಪಾಲು ಎಂದುಕೊಂಡರೆ ಸಮಾಧಾನದ ನಿಟ್ಟುಸಿರು ಬಿಡಬಹುದು.
‘ಸನ್ ಆಫ್ ಮುತ್ತಣ್ಣ’ ಒಂದು ಪರಿಪೂರ್ಣ ಸೆಂಟಿಮೆಂಟ್ ಸಿನಿಮಾ. ಅಪ್ಪ-ಮಗನ ನಡುವಿನ ಬಾಂಧವ್ಯದ ಕಥಾಹಂದರವಿರುವ ಚಿತ್ರ. ಕಥೆಯನ್ನು ಸರಳವಾಗಿ ನಿರೂಪಿಸಿದರೆ ಮಾಮೂಲಿ ಧಾಟಿಯಂತಾಗುತ್ತದೆ ಎಂದು ಭಾವಿಸಿದಂತಿರುವ ನಿರ್ದೇಶಕ, ಆಗಾಗ ಟ್ವಿಸ್ಟ್ ನೀಡುವ ಮುಖೇನ ಗಮನ ಸೆಳೆಯುತ್ತಾರೆ, ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡುತ್ತಾರೆ.
ಹಾಗೆ ನೋಡಿದರೆ ಅಸಲಿ ಕಥೆ ಶುರುವಾಗುದೇ ಸೆಕೆಂಡ್ ಹಾಫ್‌ನಲ್ಲಿ. ಫಸ್ಟ್ ಹಾಫ್‌ನಲ್ಲಿ ಕಥೆಯ ತಳಹದಿಗೆ ಸಮಯ ತೆಗೆದುಕೊಂಡು ಗಟ್ಟಿ ಅಡಿಪಾಯ ಹಾಕಿರುವ ಶ್ರೀಕಾಂತ್, ದ್ವಿತೀಯಾರ್ಧದಲ್ಲಿ ಒಟ್ಟಾರೆ ಸಾರಾಂಶವನ್ನು ತೆರೆದಿಡುತ್ತಾರೆ. ಇಲ್ಲಿ ತಂದೆ-ಮಗನ ಬಾಂಧವ್ಯದ ಜೊತೆ ಲವ್‌ಸ್ಟೋರಿಗೂ ಜಾಗವಿದೆ. ಮುಖ್ಯವಾಗಿ ಸಂಬಂಧಗಳ ಸುತ್ತ ಈ ಸಿನಿಮಾ ಸಾಗುವುದರಿಂದ ಅದಕ್ಕೆ ಪೂರಕವಾದ ಕೆಲವು ಸಂಭಾಷಣೆಗಳೂ ಗಮನ ಸೆಳೆಯುತ್ತದೆ. ಚಿತ್ರದಲ್ಲಿ ಪೋಷಕರ ಮಹತ್ವ, ಅವ್ಯಕ್ತ ಪ್ರೀತಿಯ ನೋವು ಅಭಿವ್ಯಕ್ತಗೊಳ್ಳುತ್ತವೆ. ಕಾಶಿ ಸನ್ನಿವೇಶ ಚಿತ್ರದ ಹೈಲೈಟ್‌ಗಳಲ್ಲೊಂದು. ಹಾಗೆಯೇ ಛಾಯಾಗ್ರಹಣ ಸಹ ಸೊಗಸಾಗಿದೆ. ಸಚಿನ್ ಬಸ್ರೂರು ಸಂಗೀತದ ಹಾಡುಗಳು ಕಥೆಗೆ ಪೂರಕವಾಗಿದೆ.
ಮುತ್ತಣ್ಣನಾಗಿ ರಂಗಾಯಣ ರಘು ಮಿಂಚು ಹರಿಸಿದರೆ, ಅವರ ಪುತ್ರನಾಗಿ ಪ್ರಣಾಮ್ ಗಮನ ಸೆಳೆಯುತ್ತಾರೆ. ವೈದ್ಯೆಯಾಗಿ ಖುಷಿ ರವಿ ಇಷ್ಟವಾಗುತ್ತಾರೆ.