ರಿಷಬ್ ಶೆಟ್ಟಿ ಬಹು ನಿರೀಕ್ಷಿತ ಚಿತ್ರ ‘ಕಾಂತಾರ: ಚಾಪ್ಟರ್ 1’ ಇದೇ ಅಕ್ಟೋಬರ್ 2 ರಂದು ತೆರೆ ಕಾಣಲು ಸಜ್ಜಾಗಿದೆ. ಈ ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಇದೀಗ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ಸಹ-ಪ್ರಾಯೋಜಕತ್ವ ನೀಡುವ ಮೂಲಕ ಮತ್ತೊಂದು ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಈ ಸಹಯೋಗದಿಂದ ತಮ್ಮ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಹೊಸ ವೇದಿಕೆ ಕಂಡುಕೊಂಡಿದೆ. ಈ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಮತ್ತು ಸ್ಯಾಂಡಲ್ ಸೋಪ್‌ನ ಅಪರೂಪದ ಸಂಗಮ: ಸಚಿವ ಎಂ ಬಿ ಪಾಟೀಲ ತಿಳಿಸಿರುವಂತೆ, ಕನ್ನಡ ಚಿತ್ರರಂಗವನ್ನು ‘ಸ್ಯಾಂಡಲ್‌ವುಡ್’ ಎಂದು ಕರೆಯುವಂತೆ, ಕೆಎಸ್‌ಡಿಎಲ್ ಸಂಸ್ಥೆ ತನ್ನ ಉತ್ಕೃಷ್ಟ ಸ್ಯಾಂಡಲ್ ಸೋಪ್ ಮತ್ತು ಗಂಧದ ಎಣ್ಣೆಗೆ ಹೆಸರುವಾಸಿಯಾಗಿದೆ. ಈ ಎರಡೂ ದಿಗ್ಗಜರ ಒಪ್ಪಂದದಿಂದ ‘ಕಾಂತಾರ: ಚಾಪ್ಟರ್ 1’ ಚಿತ್ರದ ಪ್ರತಿಯೊಂದು ಪ್ರದರ್ಶನದಲ್ಲೂ ಕೆಎಸ್‌ಡಿಎಲ್ ಉತ್ಪನ್ನಗಳಿಗೆ ಪ್ರಚಾರ ಸಿಗಲಿದೆ.
ಜಾಗತಿಕ ವೇದಿಕೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರಚಾರ: ‘ಕಾಂತಾರ ಚಾಪ್ಟರ್ 1’ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್ ಮಾತ್ರವಲ್ಲದೆ ಸ್ಪ್ಯಾನಿಷ್ ಭಾಷೆಯಲ್ಲೂ ತೆರೆ ಕಾಣಲಿದೆ. ಭಾರತದಾದ್ಯಂತ 7 ಸಾವಿರ ಚಿತ್ರಮಂದಿರಗಳಲ್ಲಿ ಹಾಗೂ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದೊಂದಿಗೆ ಕೆಎಸ್‌ಡಿಎಲ್ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ.
ಕಳೆದ 110 ವರ್ಷಗಳಿಂದ ಕರ್ನಾಟಕದ ಪರಂಪರೆ ಮತ್ತು ಅಸ್ಮಿತೆಯನ್ನು ಪ್ರತಿನಿಧಿಸುತ್ತಿರುವ ಮೈಸೂರು ಸ್ಯಾಂಡಲ್ ಸೋಪ್, ಈ ಮೂಲಕ ತನ್ನ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ನಾಡಗೌಡ ಜನಪ್ರಿಯ ಸಿನಿಮಾದ ಮೂಲಕ ಗ್ರಾಹಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಸಚಿವ ಎಂ ಬಿ ಪಾಟೀಲರು, ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಹೊಸ ತಲೆಮಾರಿನ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ ಎಂದಿದ್ದಾರೆ. ಈಗಾಗಲೇ ಭಾರತೀಯ ಅಂಚೆ ಇಲಾಖೆಯು ‘ಕಾಂತಾರ ಚಾಪ್ಟರ್ 1’ ಚಿತ್ರಕ್ಕಾಗಿ ವಿಶೇಷ ಅಂಚೆ ಚೀಟಿ ಮತ್ತು ಕವರ್‌ಗಳನ್ನು ಬಿಡುಗಡೆ ಮಾಡಿದೆ. ಸೈಕಲ್ ಪ್ಯೂರ್ ಅಗರಬತ್ತಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಈ ಚಿತ್ರದೊಂದಿಗೆ ಕೈಜೋಡಿಸಿವೆ.