ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ, ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಇಂದು (ಏಪ್ರಿಲ್ 8) ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನದ ಸಂಭ್ರಮವು ಕೇವಲ ಕುಟುಂಬಕ್ಕೆ ಸೀಮಿತವಾಗದೆ, ಹೈದರಾಬಾದ್‌ನ ನಿವಾಸದ ಮುಂದೆ ಹಬ್ಬದ ವಾತಾವರಣ ನಿರ್ಮಿಸಿದೆ.
ಹೌದು.. ಅಲ್ಲು ಅರ್ಜುನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಭಾನುವಾರ ತಡರಾತ್ರಿಯೇ ಸಾವಿರಾರು ಅಭಿಮಾನಿಗಳು ಹೈದರಾಬಾದ್‌ನಲ್ಲಿರುವ ನಿವಾಸದ ಮುಂದೆ ಜಮಾಯಿಸಿದ್ದರು. ತಮ್ಮ ನೆಚ್ಚಿನ ನಟನಿಗೆ ಶುಭಾಶಯ ಕೋರಲು ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು, ‘ಜೈ ಬನ್ನಿ’ ಮತ್ತು ‘ಐಕಾನ್ ಸ್ಟಾರ್’ ಎಂಬ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.
ಹಾಗೇ ಅಭಿಮಾನಿಗಳ ಈ ಅಪಾರ ಪ್ರೀತಿಗೆ ಸ್ಪಂದಿಸಿದ ಅಲ್ಲು ಅರ್ಜುನ್, ತಡರಾತ್ರಿಯಲ್ಲೂ ಮನೆಯಿಂದ ಹೊರಬಂದು ಎಲ್ಲರಿಗೂ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಅಷ್ಟೇ ಅಲ್ಲದೇ.. ಹುಟ್ಟುಹಬ್ಬದ ಉಡುಗೊರೆಯಾಗಿ ಅಲ್ಲು ಮುಂದಿನ ಬಹುನಿರೀಕ್ಷಿತ ಸಿನಿಮಾದ ಅಪ್‌ಡೇಟ್ ಸಿಗಲಿದೆ ಎಂಬುದು ಅಭಿಮಾನಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ. ಸದ್ಯಕ್ಕೆ “AA22 x A6” ಎಂಬ ತಾತ್ಕಾಲಿಕ ಶೀರ್ಷಿಕೆಯಲ್ಲಿ ಗುರುತಿಸಿಕೊಂಡಿರುವ ಈ ಚಿತ್ರದ ಶೀರ್ಷಿಕೆ ಇಂದು ಅಧಿಕೃತವಾಗಿ ಹೊರಬೀಳಲಿದೆ.
ವಿಶೇಷವೆಂದರೆ, ಮಂಗಳವಾರವಷ್ಟೇ ಚಿತ್ರತಂಡವು ನಿಗೂಢ ಪೋಸ್ಟರ್ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ತೋಳದ ಉಗುರುಗಳ ಚಿತ್ರವಿದ್ದು, ಇದು ಒಂದು ಮಾಸ್ ಆಕ್ಷನ್ ಅಥವಾ ಫ್ಯಾಂಟಸಿ ಕಥೆಯಾಗಿರಬಹುದೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ನಟನೆಯ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಅಲ್ಲು ಅರ್ಜುನ್, ಸದ್ಯ ‘ಪುಷ್ಪ 2: ದಿ ರೂಲ್’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಘೋಷಣೆಯಾಗಲಿರುವ ಹೊಸ ಸಿನಿಮಾವು ಟಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರ ಜೊತೆಗಿನ ಸಹಯೋಗ ಎನ್ನಲಾಗುತ್ತಿದೆ.
ಅಲ್ಲದೇ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಒಟ್ಟಿನಲ್ಲಿ, 44ನೇ ವಸಂತಕ್ಕೆ ಕಾಲಿಟ್ಟಿರುವ ಅಲ್ಲು ಅರ್ಜುನ್ ಸಿನಿಮಾ ತಾರೆಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.























