ಶಾಲೆ ಇರುವುದು ಮಕ್ಕಳಿಗಾಗಿ ಅಲ್ಲಿ ವಿದ್ಯೆ ಕಲಿಸಲು ಗುರುಗಳಿರುತ್ತಾರೆ. ಆದರೆ, ಇರುವ ಶಾಲೆ ಮುಚ್ಚಿ ಹೋದಾಗ, ಅಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು ಮುಂದೇನು ಮಾಡಬೇಕು? ಅದು ಅವರಿಗೂ ಅರ್ಥವಾಗದೆ ಗುರುಗಳು ಮಕ್ಕಳೊಂದಿಗೆ ಸೇರಿಕೊಂಡು ಕೆರೆಯಲ್ಲಿ ಆಟವಾಡುತ್ತ ಸಮಯ ಕಳೆಯುತ್ತಿದ್ದರಂತೆ…
ಇದನ್ನು ನಿರ್ದೇಶಕ ಸೆಲ್ವ ಮಾದಪ್ಪನ್ ಕಣ್ಣಾರೆ ಕಂಡಿದ್ದರಂತೆ. ಅದೇ ವಿಷಯಗಳ ಸುತ್ತ ಗುರಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಬಾಂಧವ್ಯ, ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸಂಘರ್ಷ ಈ ಎಲ್ಲ ಅಂಶಗಳನ್ನು ತೆರೆಯ ಮೇಲೆ ತೋರಿಸಿದ್ದಾರೆ. ಸರ್ಕಾರಿ ಶಾಲೆಯೊಂದು ಮುಚ್ಚಿದರೆ ನೊಂದುಕೊಂಡು ಸಮ್ಮನೆ ಉಳಿಯುವುದರಿಂದ ಪರಿಹಾರ ಸಿಗದು. ಮತ್ತೆ ಅದರ ಬಾಗಿಲು ತೆರೆಯುವವರೆಗೂ ಹೋರಾಟ ಮಾಡಬೇಕು ಎಂಬುದು ಸಿನಿಮಾ ಆಶಯ. ಮಕ್ಕಳೇ ಪ್ರಧಾನವಾಗಿರುವ ಈ ಚಿತ್ರದಲ್ಲಿ ದೊಡ್ಡವರೂ ಮಕ್ಕಳಾಗಿದ್ದಾರೆ. ಅವರ ಆಶಯಕ್ಕೆ ಎಲ್ಲರೂ ಕೈ ಜೋಡಿಸುವ ಮೂಲಕ ಕೊನೆಗೆ ಗುರಿ ತಲುಪುತ್ತಾರಾ ಇಲ್ಲವೋ ಎಂಬುದೇ ಚಿತ್ರದ ಕ್ಲೈಮ್ಯಾಕ್ಸ್.
ದೇಶದ ಉನ್ನತ ಹುದ್ದೆಯಲ್ಲಿರುವ ಸಾಕಷ್ಟು ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಓದಿ ಬಂದವರು. ಹೀಗಾಗಿ, ಈ ಕಥೆ ಇಂದಿನ ಸಮಾಜಕ್ಕೆ ಹೆಚ್ಚು ಪ್ರಸ್ತುತ ಎನ್ನಬಹುದು. ಸರ್ಕಾರಿ ಶಾಲೆಯನ್ನು ಮುಚ್ಚಿಸುವಲ್ಲಿ ಖಾಸಗಿ ಶಾಲೆ ನಡೆಸುವವರ ಕೈವಾಡ, ಅದಕ್ಕೆ ಸಾಥ್ ಕೊಡುವ ಅಧಿಕಾರಿಗಳು, ದೇವಸ್ಥಾನದ ಬಾಗಿಲು ಮುಚ್ಚಿರುವ ಬಗ್ಗೆ ತಲೆಕೆಡಿಸಿಕೊಳ್ಳುವ ಹಳ್ಳಿ ಮಂದಿ, ಶಾಲೆ ಮುಚ್ಚಿದ್ದರೂ ತುಟಿಕ್ ಪಿಟಿಕ್ ಎನ್ನದೇ ಮಗುಮ್ಮಾಗಿರುವ ಸನ್ನಿವೇಶಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ.
ಈ ಬಗೆಯ ಹಲವು ವಿಷಯಗಳೂ ಸಿನಿಮಾದಲ್ಲಿ ಪ್ರಸ್ತಾಪವಾಗಿವೆ. ಅಚ್ಯುತ್ ಕುಮಾರ್, ಜಯಶ್ರೀ, ಉಗ್ರಂ ಮಂಜು, ಮಹಾನಿಧಿ, ಜೀವಿತ್ ಭೂಷಣ್, ಸಂದೀಪ್ ಮಲಾನಿ, ಸಂತೋಷ್ ರೆಡ್ಡಿ ನಟನೆ ಅಚ್ಚುಕಟ್ಟಾಗಿದೆ.