ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪರಪ್ಪನ ಅಗ್ರಹಾರ ಜೈಲಿನೊಳಗಿನ ಕೈದಿಗಳ ವಿಲಾಸಿ ಜೀವನದ ವಿಡಿಯೋ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನಟ ಧನ್ವೀರ್ ಸುತ್ತ ಅನುಮಾನದ ಹುತ್ತ ಮತ್ತಷ್ಟು ಬೆಳೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್ ಇಂದು ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಮೊದಲ ವಿಚಾರಣೆಯಲ್ಲಿ ಸಿಕ್ಕಿರಲಿಲ್ಲ ಸಾಕ್ಷ್ಯ: ಕೆಲ ದಿನಗಳ ಹಿಂದೆ, ಪರಪ್ಪನ ಅಗ್ರಹಾರ ಜೈಲಿನೊಳಗೆ ಕೈದಿಗಳು ರಾಜಾರೋಷವಾಗಿ ಮೊಬೈಲ್ ಬಳಸುವುದು, ಮೋಜು-ಮಸ್ತಿ ಮಾಡುವುದು ಸೇರಿದಂತೆ ರಾಜಾತಿಥ್ಯ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ವೀಡಿಯೋಗಳು ಹೊರಬಂದಿದ್ದರ ಹಿಂದೆ ನಟ ಧನ್ವೀರ್ ಪಾತ್ರವಿರಬಹುದು ಎಂಬ ಅನುಮಾನದ ಮೇಲೆ, ಪೊಲೀಸರು ಅವರನ್ನು ವಶಕ್ಕೆ ಪಡೆದು, ಮೊಬೈಲ್ ಅನ್ನು ಜಪ್ತಿ ಮಾಡಿ ವಿಚಾರಣೆ ನಡೆಸಿದ್ದರು. ಆದರೆ, ಆ ಸಂದರ್ಭದಲ್ಲಿ ಅವರ ಮೊಬೈಲ್‌ನಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ.
ಮೊಬೈಲ್ ರಿಟ್ರೀವ್ ವರದಿಯೇ ತಿರುಗುಬಾಣ?: ಆದರೆ, ಪೊಲೀಸರ ತನಿಖೆ ಅಲ್ಲಿಗೇ ನಿಂತಿರಲಿಲ್ಲ. ಧನ್ವೀರ್ ಅವರ ಮೊಬೈಲ್‌ನಿಂದಲೇ ಕೆಲವು ವ್ಯಕ್ತಿಗಳಿಗೆ ಈ ವಿಡಿಯೋಗಳು ಕಳುಹಿಸಲ್ಪಟ್ಟಿವೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ, ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಡಿಲೀಟ್ ಆಗಿದ್ದ ಡೇಟಾವನ್ನು ರಿಟ್ರೀವ್ (ಮರುಪಡೆಯುವಿಕೆ) ಮಾಡಲಾಗಿದೆ.
ಲಭ್ಯವಾದ ಮಾಹಿತಿ ಪ್ರಕಾರ, ಈ ಮೊಬೈಲ್ ರಿಟ್ರೀವ್ ವರದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಸಾಕ್ಷ್ಯಗಳು ಮತ್ತು ಧನ್ವೀರ್ ಪಾತ್ರದ ಬಗ್ಗೆ ಸ್ಫೋಟಕ ಮಾಹಿತಿಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ವರದಿಯ ಆಧಾರದ ಮೇಲೆ, ಪೊಲೀಸರು ಇದೀಗ ಧನ್ವೀರ್ ಅವರಿಗೆ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಇಂದು ನಡೆಯಲಿರುವ ವಿಚಾರಣೆಯು ಧನ್ವೀರ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಮೊಬೈಲ್ ರಿಟ್ರೀವ್ ವರದಿಯಲ್ಲಿ ಸಿಕ್ಕಿರುವ ಸಾಕ್ಷ್ಯಗಳು ಮತ್ತು ಇಂದಿನ ವಿಚಾರಣೆಯಲ್ಲಿ ಅವರು ನೀಡುವ ಉತ್ತರಗಳ ಆಧಾರದ ಮೇಲೆ, ಅವರು ಈ ಪ್ರಕರಣದಿಂದ ಪಾರಾಗುತ್ತಾರೆಯೇ ಅಥವಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆಯೇ ಎಂಬುದು ನಿರ್ಧಾರವಾಗಲಿದೆ.


























