ಬೆಂಗಳೂರು: ಸಂದರ್ಭ, ಸಂಭ್ರಮ ಹಾಗೂ ನಿರೀಕ್ಷೆಗಳ ನಡುವೆ ಈ ವರ್ಷದ ಅತ್ಯಂತ ಚರ್ಚಿತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದಾಗಿರುವ ‘45’ ಸಿನಿಮಾ ಡಿಸೆಂಬರ್ 25ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಕನ್ನಡದ ಮೂವರು ಶ್ರೇಷ್ಠ ತಾರೆಯರಾದ ಡಾ. ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರವಾಗಿರುವುದರಿಂದಲೇ ಪ್ರೇಕ್ಷಕರ ಜಿಜ್ಞಾಸೆ ತಾರಕಕ್ಕೆ ಏರಿದೆ.
ಸಂಗೀತ ಕ್ಷೇತ್ರದಲ್ಲಿ ಮಿಂಚಿದ ಅರ್ಜುನ್ ಜನ್ಯ ಅವರ ಮೊದಲ ನಿರ್ದೇಶನ ಪ್ರಯತ್ನ ಆಗಿರುವ ಈ ಸಿನಿಮಾ, ಭಾರಿ ಬಜೆಟ್, ತಾಂತ್ರಿಕ ವೈಭವ ಹಾಗೂ ಪ್ಯಾನ್ ಇಂಡಿಯಾ ಬಿಡುಗಡೆ ಎಂಬುದರಿಂದ ರಾಷ್ಟ್ರೀಯ ಮಟ್ಟದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹೂಡಿಕೆ ಮಾಡಿರುವ ಈ ದೊಡ್ಡ ಯೋಜನೆ ಬಗ್ಗೆ ಈಗಾಗಲೇ ಸಿನಿಪ್ರೇಮಿಗಳು ಮಾತ್ರವಲ್ಲ, ಸಿನಿಮಾ ತಜ್ಞರೂ ಗಮನ ಹರಿಸಿದ್ದಾರೆ.
ತಾಂತ್ರಿಕ ವೈಭವದ ‘45’ – ವಿದೇಶದಲ್ಲಿ ನಡೆಯುತ್ತಿರುವ ಪೋಸ್ಟ್ ಪ್ರೊಡಕ್ಷನ್: ಸಿನಿಮಾದ ಹಾಡುಗಳು ಈಗಾಗಲೇ ಡಿಜಿಟಲ್ ವೇದಿಕೆಗಳಲ್ಲಿ ಅಬ್ಬರ ಸೃಷ್ಟಿಸಿವೆ. ಮತ್ತೊಂದೆಡೆ, ಚಿತ್ರಕ್ಕೆ ಅಗತ್ಯವಾದ VFX, DI ಹಾಗೂ ಸೌಂಡ್ ಡಿಸೈನ್ ಕೆಲಸಗಳು ವಿದೇಶಗಳಲ್ಲಿ ನಡೆಯುತ್ತಿದ್ದು, ದೇಶೀಯ ಸಿನಿಮಾ ಮಟ್ಟವನ್ನು ಮೀರಿಸುವ ಗುಣಮಟ್ಟ ತರುವ ಪ್ರಯತ್ನ ತಂಡದೊಳಗಿದೆ.
ಬಲ್ಲ ಮೂಲಗಳ ಪ್ರಕಾರ, ಚಿತ್ರದಲ್ಲಿ ಅನೇಕ ದೃಶ್ಯಗಳನ್ನು ಉನ್ನತ ಮಟ್ಟದ ದೃಶ್ಯವೈಭವ ಮತ್ತು ಹೊಸ ತಂತ್ರಜ್ಞಾನ ಬಳಸಿ ರೂಪಿಸಲಾಗಿದೆ. ಅದೇ ಕಾರಣಕ್ಕೆ ‘45’ ಸಿನಿಮಾ ಕನ್ನಡ ಮಾತ್ರವಲ್ಲ, ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೂ ಹೊಸ ಅನುಭವ ನೀಡಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
“ಬಹು ವರ್ಷಗಳ ಕನಸು ನನಸಾಗುವ ಹಂತ” – ನಿರ್ದೇಶಕ ಅರ್ಜುನ್ ಜನ್ಯ: ನಿರ್ದೇಶಕ ಮತ್ತು ಸಂಗೀತಗಾರ ಅರ್ಜುನ್ ಜನ್ಯ ಈ ಚಿತ್ರದ ಕುರಿತಂತೆ ನನ್ನ ನಿರ್ದೇಶನದ ಮೊದಲ ಸಿನಿಮಾ ಎಂಬ ಖುಷಿ ಇದೆ, ಜೊತೆಗೆ ಭಯ ಮತ್ತು ಜವಾಬ್ದಾರಿಯೂ ಇದೆ. ಶಿವಣ್ಣ ಕೊಟ್ಟ ಧೈರ್ಯದಿಂದ ಮುಂದುವರಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರ ಸಂಪೂರ್ಣ ಬೆಂಬಲದಿಂದ ಬಹು ವರ್ಷಗಳ ನನ್ನ ಕನಸಿನ ಸಿನಿಮಾ ಇದೀಗ ಸಾಕಾರವಾಗುತ್ತಿದೆ. ‘45’ ನೋಡುವವರಿಗೆ ತಾಂತ್ರಿಕವಾಗಿ ಹಾಗೂ ಮೇಕಿಂಗ್‌ನಲ್ಲಿ ಹೊಸ ಅನುಭವ ಕಾದಿದೆ ಎಂದಿದ್ದಾರೆ.
“ತ್ರಿವಳಿಗಳ ಜೋಡಿ ಮೋಡಿ ಮಾಡಲಿದೆ” – ನಿರ್ಮಾಪಕ ರಮೇಶ್ ರೆಡ್ಡಿ: ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಚಿತ್ರದ ಕುರಿತು ಭಾವನೆ ಹಂಚಿಕೊಂಡು “ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ – ಮೂವರದ್ದೂ ವಿನೂತನ ಅಭಿನಯ ಶೈಲಿ. ಕಥೆ ಕೇಳಿದಾಗಲೇ ಥ್ರಿಲ್ ಆಯಿತು. ಶೂಟಿಂಗ್ ಸಮಯದಲ್ಲಿ ಅದಕ್ಕಿಂತ ಹೆಚ್ಚು ನಿಬ್ಬೆರಗಾಗಿದ್ದೆ. ಆದರೆ ರೀ-ರೆಕಾರ್ಡಿಂಗ್ ಆದ ನಂತರ ಸಿನಿಮಾ ಯಾವ ಮಟ್ಟಕ್ಕೆ ಬಂದಿದೆ ಎಂಬುದು ವರ್ಣನೆಗೆ ಅಮಾನ್ಯ. ಅರ್ಜುನ್ ಜನ್ಯ ಅವರ ನಿರ್ದೇಶನ ಹಾಗೂ ತ್ರಿವಳಿಗಳ ಅಭಿನಯ ಎಲ್ಲ ವರ್ಗದ ಪ್ರೇಕ್ಷಕರ ಮನ ಗೆಲ್ಲಲಿದೆ. ‘45’ ಸಿನಿಮಾ ಅಸಾಧಾರಣವಾಗಿ ಮೂಡಿಬಂದಿದೆ ಎಂದಿದ್ದಾರೆ
ಪ್ಯಾನ್ ಇಂಡಿಯಾ ಬಿಡುಗಡೆ – ಕನ್ನಡ ಸಿನಿ ಉದ್ಯಮದ ಮತ್ತೊಂದು ಹೆಮ್ಮೆ: ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಬಿಡುಗಡೆ ಮಾಡಲು ತಂಡ ಸಿದ್ಧತೆ ಮಾಡುತ್ತಿದೆ. ಕನ್ನಡ ಚಿತ್ರರಂಗಕ್ಕೆ ದೇಶ ಮಟ್ಟದಲ್ಲಿ ಮತ್ತೊಂದು ಪ್ರಮುಖ ಸ್ಥಾನ ತರುವುದು ಖಚಿತ.
ಡಿಸೆಂಬರ್ 25 ಸಿನಿಮಾ ಪ್ರೇಕ್ಷಕರಿಗೆ ನಿಜವಾದ ಹಬ್ಬದ ಉಡುಗೊರೆಯೇ ಆಗಲಿದೆ.


























