ಕೆರೆಗಳು ಅಂತರ್ಜಲದ ಜೀವಡಿ ಎಂದೆಲ್ಲ ಹೇಳುತ್ತಿವೆ. ಹಿಂದಿನ ರಾಜಮಹಾರಾಜರು ತಮ್ಮ ಹೆಸರು ಶಾಶ್ವತವಾಗಿರಲಿ ಎಂದು ಕೆರೆಕಟ್ಟೆಗಳನ್ನು ಕಟ್ಟಿಸುತ್ತಿದ್ದರು. ಇಂದಿನ ಜನಪ್ರತಿನಿಧಿಗಳು ಕೆರೆಗಳ ಅಸ್ತಿತ್ವಕ್ಕೆ ಕುತ್ತು ತರುವ ಕಾಯ್ದೆಗಳನ್ನು ಜಾರಿಗೆ ತರುವುದರಲ್ಲಿ ನಿರತರಾಗಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ನೀಡಿದ ಅಧಿಕಾರದ ದುರುಪಯೋಗ ಕಣ್ಣಿಗೆ ಕಂಡರೂ ಜನರು ಅಸಹಾಯಕರಾಗಿ ನೋಡುವ ಸ್ಥಿತಿ ಬಂದಿದೆ. ‘ಕೋಡಗನಾ ಕೋಳಿ ನುಂಗಿತ್ತ’ ಎಂಬ ತತ್ವಪದ ನಿಜವಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಕೆರೆಗಳನ್ನು ಸ್ಥಳೀಯ ನಾರಯಕರೇ ನೋಡಿಕೊಳ್ಳುತ್ತಿದ್ದರು. ಆಮೇಲೆ ಅವುಗಳು ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟವು, ಕೆಲವು ಕಡೆ ಸ್ಥಳೀಯ ಸಂಸ್ಥೆಗಳು ನಿರ್ವಹಣೆ ಕೈಗೊಂಡವು, ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ರೀತಿ ಕೆರೆಗಳು ಸುಂದರ ವಿಹಾರತಾಣಗಳಾಗಿ ಪರಿವರ್ತನೆಗೊಂಡವು. ರಾಷ್ಟ್ರೀಯ ಹಸಿರು ಪೀಠ ಅಸ್ತಿತ್ವಕ್ಕೆ ಬಂದ ಮೇಲೆ ಕೆರೆಗಳ ರಕ್ಷಣೆಗೆ ಕಾನೂನು ಬಲ ಬಂದಿತು.
ಕರ್ನಾಟಕ ಸರ್ಕಾರ ಕೆರೆಗಳ ಸಂರಕ್ಷಣೆಗೆ ಪ್ರತ್ಯೇಕ ಪ್ರಾಧಿಕಾರವನ್ನು 2014ರಲ್ಲಿ ರಚಿಸಿತು. ಆಗ ಇದು ಅರಣ್ಯ ಇಲಾಖೆಯ ಕೈಯಲ್ಲಿತ್ತು. ಆಮೇಲೆ ಇದನ್ನು ಸಣ್ಣ ನೀರಾವರಿಗೆ ವರ್ಗಾಯಿಸಲಾಯಿತು. 2016 ರಲ್ಲಿ ಎನ್‌ಜಿಟಿ ಕೆರೆ ರಕ್ಷಣೆಗೆ ಸುತ್ತ 75 ಮೀಟರ್ ಪ್ರದೇಶದಲ್ಲಿ ಏನೂ ಇರಬಾರದು ಎಂದು ನಿಯದು ಮಾಡಿತು. ನಗರಗಳಲ್ಲಿ ಇದು ದೊಡ್ಡ ಸಮಸ್ಯೆಯಾಯಿತು.
ರಿಯಲ್ ಎಸ್ಟೇಟ್‌ನವರಿಗೆ ಕೆರೆಗಳ ಸಮೀಪ ಫ್ಲ್ಯಾಟ್ ನಿರ್ಮಿಸಿದರೆ ಹೆಚ್ಚಿನ ಬೆಲೆ ಸಿಕ್ಕಿತು. ಹೀಗಾಗಿ ಎಲ್ಲರ ಕಣ್ಣು ಕೆರೆಗಳ ಕಡೆ ಹರಿಯಿತು. ಕೆಲವು ಕಡೆ ಕೆರೆಗಳನ್ನು ಒಣಗಿಸಿ ಅಲ್ಲಿಯೇ ಬಹುಮಹಡಿ ಮನೆಗಳನ್ನು ನಿರ್ಮಿಸುವ ಕೆಲಸ ನಡೆಯಿತು. ಸುಪ್ರೀಂಕೋರ್ಟ್ ಕೆರೆ ಸುತ್ತ ಇರಬೇಕಾದ ಖಾಲಿ ಪ್ರದೇಶವನ್ನು 30 ಮೀಟರ್‌ಗೆ ಇಳಿಸಿತು. ಇದು ಇಡೀ ದೇಶಕ್ಕೆ ಅನ್ವಯವಾಯಿತು.
ಈಗ ನಮ್ಮ ರಾಜ್ಯದ ಶಾಸಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆರೆಗಳ ವಿಸ್ತೀರ್ಣ ನೋಡಿಕೊಂಡು ಖಾಲಿ ಪ್ರದೇಶ ಕಡಿಮೆ ಮಾಡಿದ್ದಾರೆ. ಇದಕ್ಕೆ ಪ್ರತಿಪಕ್ಷದ ವಿರೋಧವಿದ್ದರೂ ಅಂಗೀಕಾರ ಪಡೆದಿದೆ. ರಾಜ್ಯಪಾಲರು ಇದನ್ನು ಏನು ಮಾಡುತ್ತಾರೋ ತಿಳಿಯದು. ಈಗಿನ ಹೊಸ ನಿಯಮದಂತೆ ಅರ್ಧ ಎಕರೆ ಇರುವ ಕೆರೆಯ ಸುತ್ತ ಯಾವ ಪ್ರದೇಶವನ್ನೂ ಬಿಡಬೇಕಿಲ್ಲ.
1 ಎಕರೆ ಇರುವುದಕ್ಕೆ 3 ಮೀಟರ್, 10 ಎಕರೆ ಇರುವುದಕ್ಕೆ 6 ಮೀಟರ್, 25 ಎಕರೆ ಇರುವುದಕ್ಕೆ 12 ಮೀಟರ್, 100 ಎಕರೆ ಇರುವುದಕ್ಕೆ 24 ಮೀಟರ್, 1000 ಎಕರೆ ಮೇಲ್ಪಟ್ಟ ಕೆರೆಗೆ 30 ಮೀಟರ್ ಬಿಡಬೇಕು. ಅಂದರೆ ಬೆಂಗಳೂರಿನಲ್ಲಿ ಹೆಬ್ಬಾಳ ಮತ್ತು ಅಲಸೂರು ಕೆರೆ ಮಾತ್ರ 100 ಎಕರೆಗಿಂತ ಹೆಚ್ಚಿದೆ. ಉಳಿದ ಎಲ್ಲ ಕೆರೆಗಳ ಸಂರಕ್ಷಿತ ಪ್ರದೇಶ ಇಳಿಮುಖಗೊಳ್ಳುವುದು ಖಚಿತ.
ಇದಕ್ಕೆ ಯಾವ ವೈಜ್ಞಾನಿಕ ಕಾರಣವೂ ಇಲ್ಲ. ಗಂಗೆ ಮತ್ತು ಕಾವೇರಿಯಲ್ಲೂ ಇಷ್ಟು ಸಂರಕ್ಷಿತ ಪ್ರದೇಶ ಇಲ್ಲ ಎಂಬ ವಾದ. ನದಿಗೂ ಕೆರೆಗೂ ಹೋಲಿಸುವುದು ಸರಿಯಿಲ್ಲ. ನಮ್ಮಲ್ಲಿ ಪರಿಸರವಾದಿಗಳು ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಾಗದದ ಮೇಲೆ ಮಾತ್ರ, ಕೆರೆಗಳ ರಕ್ಷಣೆಗೆ ಯಾರೂ ಇಲ್ಲ. ಹಿಂದೆ ಊರಿನ ಪಟೇಲ ಹೊಸದಾಗಿ ನಿರ್ಮಿಸಿದ ಕೆರೆಗೆ ನೀರು ಬರಲಿ ಎಂದು ತನ್ನ ಸೊಸೆಯನ್ನೇ ಬಲಿಕೊಟ್ಟ ಎಂಬ ಜಾನಪದ ಹಾಡು ಹೇಳುತ್ತದೆ. ಈಗಿನ ಆಧುನಿಕ ಪಟೇಲರು ಕೆರೆಯನ್ನೇ ಗುಂಗಿ ನೀರು ಕುಡಿಯುವುದರಲ್ಲಿ ನಿಪುಣರು.
ಹಿಂದೆ ಒಂದಾನೊಂದು ಕಾಲದಲ್ಲಿ ರಾಜ್ಯದಲ್ಲಿ 48 ಸಾವಿರ ಕೆರೆಗಳಿದ್ದವು, ಅದು ಈಗ 26 ಸಾವಿರಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಹಿಂದೆ 262 ಕೆರೆಗಳಿದ್ದವು, ಈಗ 80ಕ್ಕೆ ಇಳಿದಿದೆ. ಇದರಲ್ಲೂ ಹಲವು ಕೆರೆಗಳು ಕಾಗದದಲ್ಲಿ ಮಾತ್ರ ಉಳಿದಿವೆ. ಕೆಲವು ಕಡೆ ಕೆರೆಗಳು ಬಡಾವಣೆ ಹೆಸರಿನಲ್ಲಿ ಮಾತ್ರ ಉಳಿದುಕೊಂಡಿವೆ. ಮುಂದಿನ ಜನಾಂಗ ಕೆರೆಗಳನ್ನು ಪುಸ್ತಕದಲ್ಲಿ ಮಾತ್ರ ನೋಡಬೇಕಾಗುತ್ತದೆ. ಕೆರೆಗಳು ಮಾಯವಾದಂತೆ ಅಂತರ್ಜಲ ಕುಸಿಯುವುದಂತೂ ಖಚಿತ. ಅದಕ್ಕೆ ಯಾವ ವಿಜ್ಞಾನಿಯೂ ಬೇಕಿಲ್ಲ. ಹೀಗೆ ಮುಂದುವರಿದರೆ ಕೆರೆ ಸಂರಕ್ಷಣಾ ಪ್ರಾಧಿಕಾರ ವಿಕಾಸಸೌಧದ ಯಾವುದೋ ಒಂದು ಮೂಲೆ ಸೇರುತ್ತದೆ.
ಅಂತರ್ಜಲ 500 ಅಡಿಗಿಂತ ಕೆಳಗೆ ದೊರೆತರೆ ನಮ್ಮ ಪುಣ್ಯ. ಮೇಕೆದಾಟುನಿಂದ ನೀರು ಬಾರದೆ ಹೋದಲ್ಲಿ ಬೆಂಗಳೂರು ಬೆಂಗಾಡು ಆಗುವುದು ನಿಶ್ಚಿತ. ಹಳ್ಳಿಯ ಜನರಿಗೆ ಈಗಲೂ ಕೆರೆಕಟ್ಟೆ, ಮಳೆ-ಬೆಳೆ ಬೇಕಿದೆ. ನಗರದವರಿಗೆ ಮೆಟ್ರೋ, ಮಾಲ್‌ಗಳಿದ್ದರೆ ಸಾಕು. ಪರಿಸರ ರಕ್ಷಣೆ ಎಂದರೆ ಇಂಗಾಲಾಮ್ಲ ಕಡಿಮೆ ಮಾಡುವುದಲ್ಲ, ಕೆರೆಕಟ್ಟೆಗಳನ್ನೂ ಉಳಿಸಿಕೊಳ್ಳಬೇಕು. ಒಂದು ಕೆರೆ ಸಾವಿರ ಹವಾ ನಿಯಂತ್ರಣ ಯಂತ್ರಗಳಿಗೆ ಬೇಕಾದ ವಿದ್ಯುತ್ ಉಳಿಸುತ್ತದೆ ಎಂಬುದನ್ನು ಮರೆಯಬಾರದು.