ಸಂಪಾದಕೀಯ: ಬೆಂಗಳೂರಲ್ಲಿ 4 ಲಕ್ಷ ಅಕ್ರಮ ಕಟ್ಟಡ, ಎಲ್ಲಿದೆ ಪರಿಹಾರ?

0
61

ಬೆಂಗಳೂರು ನಗರದಲ್ಲಿ 4 ಲಕ್ಷ ಅಕ್ರಮ ಕಟ್ಟಡಗಳಿವೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಎಂದ ಮೇಲೆ ಇದಕ್ಕೆ ಪರಿಹಾರ ಕಂಡುಹಿಡಿಯುವವರು ಯಾರು?. ಇವುಗಳಲ್ಲಿ ಬಹುತೇಕ ವಾಸಕ್ಕೆ ಯೋಗ್ಯವಾಗಿಲ್ಲ. ಕಟ್ಟಡದ ಮೂಲ ನಕ್ಷೆ ಎಂಬುದೇ ಇಲ್ಲ. ಬೆಂಕಿಪೊಟ್ಟಣ ಜೋಡಿಸಿದಂತೆ 3 ಮಹಡಿ ಕಟ್ಟುವ ಸ್ಥಳದಲ್ಲಿ 5-6 ಮಹಡಿ ನಿರ್ಮಾಣಗೊಂಡಿದೆ.

ಇದು ಯಾವಾಗ ಬೇಕಾದರೂ ಬೀಳಬಹುದು. ಈ ಕಟ್ಟಡಗಳಿಗೆ ಯಾವುದೇ ರೀತಿಯ ಅನುಮತಿ ಯಾರೂ ಕೊಟ್ಟಿಲ್ಲ, ಇಂಥ ಕಟ್ಟಡಗಳನ್ನು ಕಾನೂನು ರೀತ್ಯ ನೆಲಸಮ ಮಾಡಬೇಕು, ಆದರೆ ಲಕ್ಷಾಂತರ ರೂ. ಬಂಡವಾಳ ಹೂಡಿಕೆಯಾಗಿದೆ. ಬಿಡಿಎ ಮತ್ತು ಬಿಬಿಎಂಪಿ ಇಂಜಿನಿಯ‌ರ್‌ಗಳು ಅಕ್ರಮ ಕಟ್ಟಡ ತಲೆಎತ್ತಲು ಕಾರಣವಾದಂತೆ ಈಗ ಅವಗಳನ್ನು ನೆಲಸಮ ಮಾಡಲು ಮುಂದಾಗಬೇಕಿದೆ.

ಎರಡರಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುವುದಂತೂ ನಿಶ್ಚಿತ ಈ ಹಿಂದೆ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಬಿಡಿಎ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿಲ್ಲ. ಖಾಸಗಿ ಲೇಔಟ್ ತಲೆಎತ್ತಿದ್ದವು, ಇವುಗಳ ವಿರುದ್ಧ ಖಟ್ಲೆ ಸುಪ್ರೀಂಕೋರ್ಟ್‌ವರೆಗೂ ಹೋಯಿತು, ಬಿಡಿಎ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಈಗ ಬಿಡಿಎ ನಿವೇಶನಗಳು ಖಾಸಗಿಯಾವರ ಪಾಲಾಗಿವೆ, ಮಧ್ಯವರ್ತಿಗಳು ರಾಜಾರೋಷವಾಗಿ ಬಿಡಿಎ ಸೈಟುಗಳನ್ನು ಮಾರಾಟ ಮಾಡುತ್ತಿದ್ದಾರೆ, ಇದು ಒಂದು ಕಡೆ ನಡೆಯುತ್ತಿದ್ದರೆ ಮತ್ತೊಂದು ಕಡೆ ರಾಜಕಾರಣಿಗಳೇ ಅಕ್ರಮ ಲೇಔಟ್ ತಲೆ ಎತ್ತಲು ಕಾರಣವಾಗಿದ್ದಾರೆ. ಬಿಡಿಎ ಪ್ರಕಾರ 279 ಅಕ್ರಮ ಲೇ ಔಟ್‌ಗಳು ತಲೆ ಎತ್ತಿದೆ.ಇವುಗಳು ಪೂರ್ಣ ಪ್ರಮಾಣದಲ್ಲಿ ರೂಪಗೊಳ್ಳುವ ವೇಳೆಯಲ್ಲಿ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಬಿಡಿಎ ಮತ್ತು ಬಿಬಿಎಂಪಿಯಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತದಂತೆ ತಡೆಯಲು ಕಾರ್ಯಪಡೆ ರಚನೆ ರಚಿಸಲಾಗಿದೆ. ಅದಕ್ಕೆ ನಿವೃತ್ತ ಪೊಲೀಸ್ ಅಧಿಕಾರಿಗಳು ನೇತೃತ್ವ ವಹಿಸಿದ್ದರು. ಆದರೂ ಈಗ 4 ಲಕ್ಷ ಅಕ್ರಮ ಮನೆಗಳಿವೆ ಎಂದು ಸರ್ಕಾರವೇ ಒಪ್ಪಿಕೊಂಡಿರುವಾಗ ಇದಕ್ಕೆ ಪರಿಹಾರ ಎಲ್ಲಿದೆ?.

ಸೈಟುಗಳ ಬೆಲೆ ಗಗನಕ್ಕೇರುತ್ತಿದ್ದಂತೆ ಈಗಿರುವ ಹಳೆ ಮನೆಗಳನ್ನು ಒಡೆದು ಹೊಸದಾಗಿ ನಿರ್ಮಿಸುವ ಕೆಲಸವೂ ನಿರಂತರ ಸಾಗಿದೆ. ಕೆ.ಆರ್. ಮಾರುಕಟ್ಟೆ ಸುತ್ತ ಇರುವ ಎಲ್ಲ ಕಟ್ಟಡಗಳು ಬಹುತೇಕ ಶಿಥಿಲಾವಸ್ಥೆಯಲ್ಲಿವೆ. ಇಲ್ಲಿ ವಾಸಿಸುವವರು ಜೀವ ಕೈಯಲ್ಲಿ ಹಿಡಿದು ನೆಲೆಸಬೇಕು, ಈ ಕಟ್ಟಡಗಳಲ್ಲಿ ವಿದ್ಯುತ್‌ ತಂತಿಗಳ ಪರಿಸ್ಥಿತಿ ನೋಡಿದರೆ ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಈ ಮಾರುಕಟ್ಟೆ ಸಮೀಪ ಹಣ್ಣುಗಳ ಶೀಥಲಗೃಹಗಳಿವೆ.ಅವುಗಳನ್ನು ಒಳಗೆ ಹೋಗಿ ನೋಡಬೇಕು. ಒಬ್ಬ ಮನುಷ್ಯ ಒಳಗೆ ಹೋಗಿ ಹೊರಗೆ ಬಾರದೆ ಮತ್ತೊಬ್ಬ ಹೋಗಲು ಸ್ಥಳವಿಲ್ಲ, ತಲೆ ಮೇಲೆ ವಿದ್ಯುತ್‌ ತಂತಿ ನೇತಾಡುತ್ತದೆ. ಇಲ್ಲಿ 24 ಗಂಟೆ ವಿದ್ಯುತ್ ಬಳಕೆಯಾಗುತ್ತದೆ. ಇಲ್ಲಿ ಶಾರ್ಟ್ ಸರ್ಕಿಟ್ ಆಗದೇ ಇರಲು ಸಾಧ್ಯವೇ ಇಲ್ಲ. ಬೆಸ್ಕಾಂ ಅಧಿಕಾರಿಗಳು ಹೇಗೆ ಅನುಮತಿ ಕೊಟ್ಟರೋ ತಿಳಿಯದು.

ಅಕ್ರಮ ಕಟ್ಟಡಗಳ ಬೆಳವಣಿಗೆಗೆ ಬ್ರೇಕ್ ಎಂಬುದೇ ಇಲ್ಲ. ಇದ್ದಕ್ಕಿದ್ದಂತೆ ಎರಡು ಆಕ್ರಮ ಕಟ್ಟಡಗಳು ಕುಸಿದುಬಿದ್ದಾಗ ಎಲ್ಲರ ಗಮನ ಅಲ್ಲಿಗೆ ಹರಿಯಿತು. ಆಗ ಪರಿಶೀಲನೆ ಆರಂಭವಾಯಿತು, ಸುಪ್ರೀಂಕೋರ್ಟ್ ಮುಂದೆ ಈ ರೀತಿ ಆಕ್ರಮ ಕಟ್ಟಡಗಳ ಪ್ರಕರಣಗಳು ವಿಚಾರಣೆಗೆ ಬಂದಿತು, ಡಿಸೆಂಬರ್ 17, 2014ರಲ್ಲಿ ಎಲ್ಲ ರಾಜ್ಯಗಳಿಗೆ ಸುಪ್ರೀಂಕೋರ್ಟ್‌ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸಿಕೊಟ್ಟಿದೆ.

ಅದರಂತೆ ಈಗ ಯಾವುದೇ ಕಟ್ಟಡಕ್ಕೆ ವಿದ್ಯುತ್‌, ಕುಡಿಯುವ ನೀರು, ಒಳಚರಂಡಿ ಸಂಪರ್ಕ ನೀಡುವ ಮುನ್ನ ಬಿಬಿಎಂಪಿ ಬಿಬಿಎಂಪಿ ಅಥವ ಸಂಬಂಧಪಟ್ಟ ಇಲಾಖೆಯಿಂದ ವಾಸಯೋಗ್ಯ ಎಂದು ಸರ್ಟಿಫಿಕೇಟ್‌ಪಡೆಯಬೇಕು. ಈಗ ಇದು ನುಂಗಲಾರದ ತುತ್ತಾಗಿದೆ. ಯಾವುದೇ ದಾಖಲೆಗಳಿಲ್ಲದ ಕಟ್ಟಡಕ್ಕೆ ವಾಸಕ್ಕೆ ಯೋಗ್ಯ ಎಂದು ಸರ್ಟಿಫಿಕೇಟ್ ನೀಡಿ ಒಂದು ವೇಳೆ ಕುಸಿದರೆ ಸರ್ಟಿಫಿಕೇಟ್ ನೀಡಿದ ಆ ಅಧಿಕಾರಿಗೆ ಜೈಲು ಗ್ಯಾರಂಟಿ.

ವಿದ್ಯುತ್, ಕುಡಿಯುವ ನೀರು, ಒಳಚರಂಡಿ ಸವಲತ್ತು ಇಲ್ಲದೆ ಯಾರೂ ಮನೆಗಳಿಗೆ ಬರುವುದಿಲ್ಲ. ಇದು ಈಗ ರಿಯಲ್ ಎಸ್ಟೇಟ್ ಮಾಫಿಯಾಗೆ ದೊಡ್ಡ ತಲೆನೋವಾಗಿದೆ. ಅಕ್ರಮ ಕಟ್ಟಡಗಳು ಈಗ ಸರ್ಟಿಫಿಕೇಟ್ ಇಲ್ಲದೆ ಇರುವುದು 4 ಲಕ್ಷ ಎಂದು ಅಂದಾಜು ಮಾಡಲಾಗಿದೆ, ಇನ್ನೂ ನಿರ್ಮಾಣದ ಹಂತದಲ್ಲಿರುವ ಕಟ್ಟಡಗಳಿಗೂ ಇದು ಎಚ್ಚರಿಕೆಯ ಗಂಟೆಯಾಗಿದೆ.

ರಾಜ್ಯ ಸರ್ಕಾರ ಹಿಂದೆ ಅಕ್ರಮ ಸ್ಲಂಗಳನ್ನು ಸಕ್ರಮಗೊಳಿಸಿದಂತೆ ಪ್ರತ್ಯೇಕ ಕಾಯ್ದೆ ಮೂಲಕ ಈ ಅಕ್ರಮ ಕಟ್ಟಡಗಳಿಗೆ ಪರಿಹಾರ ಕೊಡಬೇಕಾದ ಕಾಲ ಬರಲಿದೆ. ಅಲ್ಲಿಯವರೆಗೆ ಧರಣಿ, ಪ್ರತಿಭಟನೆ, ಹೋರಾಟ ನಡೆಯಲೇಬೇಕು. ಅಕ್ರಮ-ಸಕ್ರಮ ಒಂದು ರೀತಿಯ ಚಕ್ರ ಇದ್ದಂತೆ, ಒಮ್ಮೆ ಅಕ್ರಮ ನಂತರ ಅದನ್ನು ಸಕ್ರಮಗೊಳಿಸಲು ಕಾನೂನು. ಮತ್ತೆ ಅಕ್ರಮ ಈ ರೀತಿ ಇದು ಮುಂದುವರಿಯುತ್ತಲೇ ಇರುತ್ತದೆ. ಎಲ್ಲ ರಂಗಗಳಲ್ಲೂ ಅಕ್ರಮ-ಸಕ್ರಮದ ಸರಪಳಿ ಕಂಡು ಬರುವುದು ಜೀವನ ಕ್ರಮ ಎಂಬಂತೆ ಆಗಿದೆ. ಸುದೈವದಿಂದ ಇದು ಗ್ರಾಮೀ ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತಿಲ್ಲ.

Previous articleಧಾರವಾಡ: ಮಳೆ ಅಬ್ಬರ, ಅಂಗನವಾಡಿ, ಶಾಲೆ-ಕಾಲೇಜಿಗೆ ಮಂಗಳವಾರ ರಜೆ
Next articleShakti Scheme: ವಿಶ್ವದಾಖಲೆಗೆ ಸೇರಿದ ಕರ್ನಾಟಕದ ‘ಶಕ್ತಿ’ ಯೋಜನೆ

LEAVE A REPLY

Please enter your comment!
Please enter your name here