ವಿಜಯಪುರದಿಂದ ಕೆನೇರಿ ಕಾಡಸಿದ್ದೇಶ್ವರ ಸ್ವಾಮೀಜಿಗಳ ಗಡಿಪಾರು ಆದೇಶ ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಹಿಂದುಗಳನ್ನು ಒಡೆಯುವ ಯತ್ನವನ್ನು ವಿರೋಧಿಸಿದ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಅಕ್ಟೋಬರ್ 16 ರಂದು ವಿಜಯಪುರ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿ, ಸ್ವಾಮೀಜಿಗಳು ಜಿಲ್ಲೆಯ ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿ, ಡಿಸೆಂಬರ್ 14, 2025 ರವರೆಗೆ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಿಸಿದ್ದಾರೆ.
ಯತ್ನಾಳ್ ಆಕ್ರೋಶ: ಈ ಆದೇಶವನ್ನು ಖಂಡಿಸಿರುವ ಯತ್ನಾಳ್, ಸಮಾಜದಲ್ಲಿನ ಘಟನೆಗಳನ್ನು ವಿವರಿಸಿದ್ದಕ್ಕಾಗಿ ಸ್ವಾಮೀಜಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದು ರಾಜಕೀಯ ಪ್ರಾಬಲ್ಯ ಸಾಧಿಸಲು ಮತ್ತು ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸಿದ ಕಾರಣಕ್ಕಾಗಿ ನಡೆದಿದೆ.
ಆತ್ಮನಿರ್ಭರ ಸಮಾಜವನ್ನು ಸ್ಥಾಪಿಸಲು ದುಡಿಯುತ್ತಿರುವ ಸ್ವಾಮೀಜಿಗಳ ಮೇಲೆ ಸರ್ಕಾರ ಕ್ರಮ ಜರುಗಿಸಿರುವುದು ಖಂಡನೀಯ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಯತ್ನಾಳ್ ಪ್ರಕಾರ, ಇದು ಪ್ರಜೆಗಳ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವಾಗಿದೆ.
“ಮೊಹಬ್ಬತ್ ಕಿ ದುಕಾನ್” ಎಂದು ಹೇಳುವವರು ಪೊಲೀಸರನ್ನು ಬಳಸಿಕೊಂಡು ವಾಕ್ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಇದು ಹೇಯ ಮತ್ತು ಖಂಡನೀಯ ಸಂಗತಿ ಹಾಗೂ ಪ್ರಜಾಪ್ರಭುತ್ವದ ಅಣಕ ಎಂದು ಯತ್ನಾಳ್ ಹೇಳಿದ್ದಾರೆ.
ಸರ್ಕಾರಕ್ಕೆ ಗಡುವು: ಸರ್ಕಾರ ಕೂಡಲೇ ಈ ನಿಷೇಧವನ್ನು ವಾಪಸ್ ಪಡೆಯಬೇಕು ಮತ್ತು ಈ ರೀತಿಯ ನಿರಂಕುಶ ಧೋರಣೆಯನ್ನು ಕೈಬಿಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ. ಒಂದು ವೇಳೆ, ನಿಷೇಧವನ್ನು ವಾಪಸ್ ಪಡೆಯದಿದ್ದರೆ, ವಿಜಯಪುರ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಡಿಸಿ ಆದೇಶದಲ್ಲಿ ಏನಿದೆ?: ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ್ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಕಲಂ 163 (1), (2) ಮತ್ತು (3) ಪ್ರಕಾರ, ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಕನೇರಿ ಮಠ, ಬೀಳೂರು ಗ್ರಾಮ, ತಾಲ್ಲೂಕು ಜತ್ತ, ಮಹಾರಾಷ್ಟ್ರ ರಾಜ್ಯ ಇವರನ್ನು ಅಕ್ಟೋಬರ್ 16, 2025 ರಿಂದ ಡಿಸೆಂಬರ್ 14, 2025 ರವರೆಗೆ ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ಪ್ರತಿಬಂಧಿಸಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯನ್ನು ಈ ಆದೇಶದಲ್ಲಿ ಪ್ರಮುಖ ಕಾರಣವಾಗಿ ಉಲ್ಲೇಖಿಸಲಾಗಿದೆ.ಗಡಿಪಾರು ಆದೇಶದ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, “ಜೋಳದ ರೊಟ್ಟಿ” ಎಂಬ ಎಕ್ಸ್ ಖಾತೆ ಈ ಆದೇಶವನ್ನು ಹಂಚಿಕೊಂಡು, ಹಿಂದುಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬರೆದಿದೆ. ಯತ್ನಾಳ್ ಈ ಪೋಸ್ಟ್ ಅನ್ನು ಮರು ಪೋಸ್ಟ್ ಮಾಡುವ ಮೂಲಕ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.