ವಾಸುದೇವ ಹೆರಕಲ್ಲ
ಸಂ.ಕ.ಸಮಾಚಾರ ವಿಜಯಪುರ: ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಕಾರ್ಯದ ಗಣತಿಯ ಅಪ್ಲಿಕೇಷನ್ ಈಗ ಕೆಲವು ಕಡೆ ಖಾಸಗಿ ವ್ಯಕ್ತಿಗಳ ಕೈ ಸೇರಿದೆ. ಸರ್ಕಾರಿ ಸಿಬ್ಬಂದಿ ತಮ್ಮ ಮೊಬೈಲ್‌ನ್ನು ಬದಲಿ ವ್ಯಕ್ತಿಗಳಿಗೆ ನೀಡಿ ಸರ್ವೆಗೆ ಕಳುಹಿಸುತ್ತಿದ್ದಾರೆ.
ಗಣೇಶ ನಗರದ ಮನೆಯೊಂದಕ್ಕೆ ಬಂದಿದ್ದ ಖಾಸಗಿ ವ್ಯಕ್ತಿಯೊಬ್ಬ ತನ್ನ ಹೆಸರನ್ನು ಪ್ರಕಾಶ ಎಂದು ಹೇಳಿಕೊಂಡು ಮಾಹಿತಿ ಪಡೆಯಲು ಅಣಿಯಾಗಿದ್ದ. ಆಗ ಆ ಮನೆಯವರು ತಮ್ಮ ಹೆಸರೇನು?, ಎಲ್ಲಿಂದ ಬಂದಿದ್ದೀರಾ?, ಯಾವ ಇಲಾಖೆ?, ತಮ್ಮ ಐಡಿ ಎಲ್ಲಿದೆ? ಎಂದು ಪ್ರಶ್ನಿಸಿದಾಗ ಆತನ ಬಳಿ ಉತ್ತರವಿರಲಿಲ್ಲ.
ನಮ್ಮ ಸರ್ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಶಶಿಕಾಂತ ಗಂಗಾಧರ ಮಾಶ್ಯಾಳ ಎಂಬುವರು ತನ್ನನ್ನು ಕಳುಹಿಸಿದ್ದಾರೆ ಎಂದು ಹೇಳಿಕೊಂಡ. ಅವರನ್ನೇ ಕರೆಯಿಸಿ ಎಂದು ಹೇಳಿದಾಗ ಕರೆದುಕೊಂಡು ಬರುತ್ತೇನೆ ಎಂದು ಪಲಾಯನ ಮಾಡಿದವನು ಮತ್ತೆ ಆ ಓಣಿಯ ಕಡೆ ಸುಳಿಯಲೇ ಇಲ್ಲ.
ಸರ್ವೇ ಕಾರ್ಯದಲ್ಲಿ ಸರ್ಕಾರಿ ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರು ಬರುತ್ತಿರುವುದು ಜನರಲ್ಲಿ ಸಂದೇಹವನ್ನು ಮೂಡಿಸುತ್ತಿದೆ. ವೈಯಕ್ತಿಕ
ಮಾಹಿತಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿಯೂ ಈ ರೀತಿ ಬೇರೆ ವ್ಯಕ್ತಿಗಳು ಮಾಹಿತಿ ಪಡೆಯುವಂತಿಲ್ಲ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಗಣತಿ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಯೇ ಗಣತಿ ಮಾಡಬೇಕು. ಹಾಗೊಮ್ಮೆ ಬೇರೆಯವರಿಗೆ ಮಾಹಿತಿ ಸಿಕ್ಕರೆ ಅದು ದುರ್ಬಳಕೆಯಾಗುವ ಸಾಧ್ಯತೆಯೂ ಉಂಟು. ಜಾತಿ ಜನಗಣತಿ ವಿಷಯದಲ್ಲಿ ಹೈಕೋರ್ಟ್ ವಿಧಿಸಿರುವ ಕಟ್ಟಳೆಗಳಿಗೂ ಇದು ವಿರುದ್ಧವಾಗಿದೆ.
ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕುವ ಈ ಖಾಸಗಿ ವ್ಯಕ್ತಿಗಳು ಏನಾದರೂ ಖಾಸಗಿ ಕಂಪನಿಗಳಿಗೆ ಡಾಟಾ ಮಾರಿಕೊಂಡರೆ ಅಥವಾ ಮಾಹಿತಿಯನ್ನು ಹ್ಯಾಕರ್‌ಗಳಿಗೆ ತಲುಪಿಸಿದರೆ ಗತಿ ಏನು? ಒಬ್ಬಂಟಿ ವ್ಯಕ್ತಿಗಳು ಇರುವ ಮನೆಯ ಮಾಹಿತಿಯನ್ನು ಕಳ್ಳಕಾಕರಿಗೆ, ದರೋಡೆಕೋರರಿಗೆ ತಿಳಿಸಿದಲ್ಲಿ ಆಗುವ ಅನಾಹುತ ಎಂತಹದ್ದು ಎಂಬ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಾಗಿದೆ.
ವಿಜಯಪುರ ಒಂದೇ ಅಲ್ಲ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸಂಚರಿಸುತ್ತಿರುವ ಸಮೀಕ್ಷೆಕಾರರಲ್ಲಿ ಅರ್ಧದಷ್ಟು ಡೂಪ್ಲಿಕೇಟ್ ಇದ್ದಾರೆ ಎಂಬ ಮಾಹಿತಿ ಇದೆ. ಕೆಲವು ಸರ್ಕಾರಿ ಸಿಬ್ಬಂದಿ ತಾವು ಗಣತಿ ಕಾರ್ಯಕ್ಕೆ ಹೋಗದೇ ನೂರು ಮನೆಗಳಿಗೆ 20 ಸಾವಿರ ಕೊಡುವುದಾಗಿ ಹೇಳಿ ನಿರುದ್ಯೋಗಿ ಯುವಕರನ್ನು ಈ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ಏನು ಮಾಡಬೇಕು?: ಗಣತಿಗೆ ಬರುವ ವ್ಯಕ್ತಿಯ ಗುರುತಿನ ಚೀಟಿಯನ್ನು ಪರಿಶೀಲಿಸಿ, ಆತ ಸರ್ಕಾರಿ ಸಿಬ್ಬಂದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆತನ ಕೈಯಲ್ಲಿರುವ ಮೊಬೈಲ್‌ನಲ್ಲಿ ಸರ್ವೇ ಆ್ಯಪ್ ಇರಬಹುದಾದರೂ ಅದು ಆತನ ಹೆಸರಿನ ಐ.ಡಿ. ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ. ಅಲ್ಲದೇ ಬಂದ ವ್ಯಕ್ತಿ ಸರ್ಕಾರಿ ಸಿಬ್ಬಂದಿಯೇ ಆಗಿದ್ದರೂ ನಿಮ್ಮ ಮನೆಯಲ್ಲಿರುವ ಹಣ, ಚಿನ್ನದ ಒಡವೆಯ ಮಾಹಿತಿ ಕೇಳಿದ್ದಲ್ಲಿ ಕೊಡಬೇಕಾಗಿಲ್ಲ. ಅಲ್ಲದೇ ಬ್ಯಾಂಕ್ ಅಕೌಂಟ್ ನಂಬರ್ ಆಗಲಿ, ಯಾವುದೇ ಬ್ಯಾಂಕ್ ಅಕೌಂಟ್‌ನ ಓಟಿಪಿಯಾಗಲಿ ಕೊಡಬಾರದು.
“ಸರ್ಕಾರಿ ಸಿಬ್ಬಂದಿ ಬದಲಿ ಖಾಸಗಿ ವ್ಯಕ್ತಿಗಳು ಬರುತ್ತಿರುವ ಬಗ್ಗೆ ನಮಗೂ ಮಾಹಿತಿ ಬಂದಿದೆ. ಈ ಬಗ್ಗೆ ನಾವು ಗಮನಿಸಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಪುಂಡಲೀಕ ಮಾನವರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಸರ್ವೆ ನೋಡೆಲ್ ಅಧಿಕಾರಿ ಹೇಳಿದ್ದಾರೆ.