ದೇಶದ ನಂ.2 ಬರಪೀಡಿತ ವಿಜಯಪುರ ಈಗ ಹಸಿರುಪುರ!

0
56

ವಾಸುದೇವ ಹೆರಕಲ್ಲ

ದೇಶದ ನಿಸರ್ಗ ನಿರ್ಮಿತ ಅರಣ್ಯಗಳನ್ನು ಮನುಷ್ಯ ಹಾಳು ಮಾಡಿ ಪರಿಸರಕ್ಕೆ ಕಂಟಕ ತರುತ್ತಿರುವುದೇ ಸುದ್ದಿಯಾಗುತ್ತಿರುವ ಸಂದರ್ಭದಲ್ಲಿ ವಿಜಯಪುರ ಜಿಲ್ಲೆ ಮಾನವ ನಿರ್ಮಿತ ಅರಣ್ಯವನ್ನು ಅಭಿವೃದ್ಧಿಪಡಿಸಿ ವಿಶ್ವದ ಗಮನಸೆಳೆದಿದೆ. 2016ರಲ್ಲಿ ಕೇವಲ ಶೇ.0.17ರಷ್ಟು ಅರಣ್ಯ ಪ್ರದೇಶ ಹೊಂದಿತ್ತು ವಿಜಯಪುರ ಜಿಲ್ಲೆ. ದೇಶದಲ್ಲಿಯೇ ಶಾಶ್ವತ ಬರಗಾಲಪೀಡಿತ ಪ್ರದೇಶಗಳಲ್ಲಿ ರಾಜಸ್ಥಾನದ ಜೈಸಲಮೇರ್ ಮರುಭೂಮಿ ಮೊದಲ ಸ್ಥಾನದಲ್ಲಿದ್ದರೆ ವಿಜಯಪುರ ಎರಡನೇ ಸ್ಥಾನದಲ್ಲಿತ್ತು.

ಎಲ್ಲರೂ ಪರಿಸರ ರಕ್ಷಣೆ, ಅರಣ್ಯೀಕರಣದ ಬಗ್ಗೆ ಮಾತನಾಡುತ್ತಿದ್ದರೇ ಹೊರತು ಯಾವುದೂ ಕಾರ್ಯಗತವಾಗುತ್ತಿರಲಿಲ್ಲ. ಆದರೆ ವಿಜಯಪುರದಲ್ಲಿ ಕೆಲವು ವರ್ಷಗಳಿಂದ ಮೌನಕ್ರಾಂತಿಯಾಗಿದೆ. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಜಲಸಂಪನ್ಮೂಲ ಖಾತೆಯನ್ನು ವಿಜಯಪುರದ ಎಂ.ಬಿ.ಪಾಟೀಲರಿಗೆ ವಹಿಸಿದರು. ಜಿಲ್ಲೆಯಲ್ಲಿ ಅರಣ್ಯ ಅಭಿವೃದ್ಧಿಪಡಿಸುವ ಕುರಿತು ಚಿಂತಕರೊಂದಿಗೆ ಸಚಿವರು ನಡೆಸಿದ ಸಮಾಲೋಚನೆ ಫಲವಾಗಿ ಆರಂಭವಾಗಿದ್ದೇ ಕೋಟಿವೃಕ್ಷ ಅಭಿಯಾನ.

ವೃಕ್ಷ ಅಭಿಯಾನ ಟ್ರಸ್ಟ್ ಸ್ಥಾಪಿಸಿ ಉತ್ಸಾಹಿ ಯುವಕ ಮುರುಗೇಶ ಪಟ್ಟಣಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ನೇಮಕ ಮಾಡಿ ಸಂಘಟನೆಗೆ ತೊಡಗಿಸಿದರು. ಗ್ರಾಮ ಗ್ರಾಮಗಳಲ್ಲಿ ಈ ಅಭಿಯಾನ ಆರಂಭವಾಯಿತು. ಜಿಲ್ಲೆಯ ಬಹುತೇಕ ಸಂಘ ಸಂಸ್ಥೆಗಳು ಕೈಜೋಡಿಸಿದವು. ಯುವಕರು ಮುಂದೆ ಬಂದರು. ಅರಣ್ಯ ಇಲಾಖೆ, ಕೆಬಿಜೆಎನ್‌ಎಲ್ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯ ಇಲಾಖೆ, ಖಾಸಗಿ ನರ್ಸರಿಗಳಿಂದಲೂ ಸಸಿಗಳನ್ನು ತಂದು ನೆಟ್ಟು ಪೋಷಿಸಲಾಯಿತು. 2016 ಜೂನ್ 5ರಂದು ಅಧಿಕೃತವಾಗಿ ಆರಂಭವಾದ ಈ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ 1.5 ಕೋಟಿ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಅದರಲ್ಲಿ ಶೇ. 90ರಷ್ಟು ಗಿಡಗಳು ಬೆಳೆದು ಅರಣ್ಯಗಳೇ ನಿರ್ಮಾಣವಾಗಿವೆ.

ಮಮದಾಪುರ, ಕರಾಡದೊಡ್ಡಿ, ಸಾವಳಸಂಗ ಮೊದಲಾದ ಕಡೆಗಳಲ್ಲಿ ಮಾನವ ನಿರ್ಮಿತ ಅರಣ್ಯಪ್ರದೇಶ ಅಭಿವೃದ್ಧಿಯಾಗಿದೆ. ಮಮದಾಪುರ ಬಳಿಯ 1628 ಎಕರೆ ಅರಣ್ಯಕ್ಕೆ ಶ್ರೀಸಿದ್ದೇಶ್ವರ ಸ್ವಾಮೀಜಿ ಜೀವ ವೈವಿಧ್ಯ ತಾಣ ಎಂದು ಹೆಸರಿಸಿ ಸಂರಕ್ಷಿಸಲಾಗುತ್ತಿದೆ. ಭೂತನಾಳ ಕೆರೆಯ ಹಿಂಭಾಗದಲ್ಲಿ ಕರಾಡದೊಡ್ಡಿಯಲ್ಲಿ 543 ಎಕರೆ ಪ್ರದೇಶದಲ್ಲಿ ಸಂಪೂರ್ಣವಾಗಿ ಹನಿ ನೀರಾವರಿ ಮೂಲಕ ಅಭಿವೃದ್ಧಿಪಡಿಸಲಾಗಿದೆ.

ಜೀವನ ಸಾರ್ಥಕ: “ವೃಕ್ಷ ಅಭಿಯಾನದಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಅವಕಾಶ ನೀಡಿದ ಎಂ.ಬಿ.ಪಾಟೀಲರಿಗೆ ನಾನು ಚಿರಋಣಿ, ಅರಣ್ಯವನ್ನು ನೋಡಿದರೆ ಜೀವನ ಸಾರ್ಥಕ ಎಂಬ ಭಾವನೆ ಬರುತ್ತದೆ. ನಾನು ನಿಮಿತ್ತ ಮಾತ್ರ ಜನರ ಇಚ್ಛಾಶಕ್ತಿಯೇ ಇದಕ್ಕೆಲ್ಲ ಕಾರಣ” ಎಂದು ಮುರುಗೇಶ ಪಟ್ಟಣಶೆಟ್ಟಿ, ವೃಕ್ಷ ಅಭಿಯಾನ ಸಂಚಾಲಕರು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಡುತ್ತಿದ್ದುದು ಸಾಮಾನ್ಯ. ಇಲ್ಲೇನಿದ್ದರೂ ಹಿಂಗಾರು ಬೆಳೆಯೇ ಆಧಾರ. ಆದರೆ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಅರಣ್ಯ ಅಭಿವೃದ್ಧಿಯಿಂದಾಗಿ ಮುಂಗಾರು ಮಾರುತಗಳು ಆಕರ್ಷಿತಗೊಳ್ಳುತ್ತಿವೆ.

ಜಿಲ್ಲೆಯ ವಾಡಿಕೆ ಮಳೆ ವಾರ್ಷಿಕ 594 ಮಿ.ಮೀ. ಆದರೆ ಈಗಾಗಲೇ 782 ಮಿ.ಮೀ. ಮಳೆ ಸುರಿದಿದೆ. ಅಪರೂಪದ ವನ್ಯಜೀವಿಗಳು, ಪಕ್ಷಿ ಸಂಕುಲ ಕಾಣಿಸಿಕೊಳ್ಳುತ್ತಿವೆ. ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿದೆ. ವಾಯುಗುಣಮಟ್ಟ ಶೇ.37ಕ್ಕೆ ತಲುಪಿದ್ದು ದೇಶದಲ್ಲಿ ಮೂರನೇ ಹಾಗೂ ಕರ್ನಾಟಕದಲ್ಲಿ ಪ್ರಥಮ ಸ್ಥಾನವನ್ನು ತಲುಪಿದೆ.

ಈ ಕುರಿತು ಬೃಹತ್ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ ಮಾತನಾಡಿ, “ಕೋಟಿ ವೃಕ್ಷ ಅಭಿಯಾನ ನನ್ನ ಕನಸು. ಈ ಕನಸಿಗೆ ಕೈ ಜೋಡಿಸಿದ್ದು ವಿಜಯಪುರ ಜಿಲ್ಲೆಯ ಮಹಾಜನತೆ, ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಸಂಕಲ್ಪ ದೃಢವಾಗಿರಬೇಕು, ಬದ್ಧತೆ ಇರಬೇಕು. ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ, ದೂರದೃಷ್ಟಿ ಇರಬೇಕು ಎಂಬುದಕ್ಕೆ ವಿಜಯಪುರ ಜಿಲ್ಲೆಯ ಈ ಸಾಧನೆ ಪ್ರತ್ಯಕ್ಷ ಸಾಕ್ಷಿ” ಎಂದು ಹೇಳಿದ್ದಾರೆ.

ಕೋಟಿ ವೃಕ್ಷ ಅಭಿಯಾನದಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ತಲೆಎತ್ತಿರುವ ಮಾನವ ನಿರ್ಮಿತ ಅರಣ್ಯ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲೂ ಶ್ಲಾಘನೆಯಾಗಿದೆ. ವಿಜಯಪುರದ ಸಾಧನೆಯನ್ನು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮುಕ್ತ ಕಂಠದಿಂದ ಶ್ಲಾಘಿಸಿದೆ. ಪತ್ರಿಕೆಯ ಸೆಪ್ಟೆಂಬರ್ 2ರ ಸಂಚಿಕೆಯಲ್ಲಿ ‘ಹೌ ಎ ಡಿಸ್ಟ್ರಿಕ್ಸ್‌ ಇನ್ ಇಂಡಿಯಾ ಕೇಮ್ ಟುಗೆದರ್ ಟು ಪ್ಲಾಂಟ್ 15 ಮಿಲಿಯನ್ ಟ್ರೀಸ್’ ಎನ್ನುವ ಹೆಡ್‌ಲೈನ್ ಅಡಿಯಲ್ಲಿ ಮಾನವ ನಿರ್ಮಿತ ಅರಣ್ಯದ ವಿಶೇಷ ವರದಿ ಪ್ರಕಟವಾಗಿದೆ.

Previous articleಕಮತಗಿ: ಪತ್ರಕರ್ತ ಪ್ರಕಾಶ ಗುಳೇದಗುಡ್ಡ ಹೃದಯಾಘಾತದಿಂದ ನಿಧನ
Next articleಶಿರಸಿ: ಬಾಲಕನ ಕೈಯಲ್ಲಿದ್ದ ಏರಗನ್‌ನಿಂದ ಸಿಡಿದ ಗುಂಡು ಮಗು ಸಾವು

LEAVE A REPLY

Please enter your comment!
Please enter your name here