Chikkamagaluru Tour: ಚಿಕ್ಕಮಗಳೂರು ಪ್ರವಾಸಿಗರಿಗೆ ಮಹತ್ವದ ಮಾಹಿತಿ

0
156

ಚಿಕ್ಕಮಗಳೂರು: ನೈಋತ್ಯ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ ಚಿಕ್ಕಮಗಳೂರು ಜಿಲ್ಲೆಗೆ ಸಾವಿವಾರು ಜನರು ಭೇಟಿ ನೀಡುತ್ತಿದ್ದಾರೆ. ಮುಳ್ಳಯ್ಯನ ಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ನಿಯಮವನ್ನು ಜಾರಿಗೆ ತರಲಿದೆ.

ಚಿಕ್ಕಮಗಳೂರು ಜಿಲ್ಲೆಗೆ ವಾರಾಂತ್ಯ, ಸಾಲು ಸಾಲು ರಜೆ ಸಂದರ್ಭದಲ್ಲಿ 3 ಸಾವಿರಕ್ಕೂ ಅಧಿಕ ವಾಹನಗಳು ಬರುತ್ತಿವೆ. ಇದರಿಂದಾಗಿ ಸ್ಥಳೀಯರ ಸಂಚಾರಕ್ಕೂ ಸಹ ತೊಂದರೆಯಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ, ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.

ಬುಕ್ಕಿಂಗ್ ಕಡ್ಡಾಯ: ಪ್ರವಾಸೋದ್ಯಮ ಇಲಾಖೆ, ಚಿಕ್ಕಮಗಳೂರು ಜಿಲ್ಲಾಡಳಿತ ಚಿಕ್ಕಮಗಳೂರು ಪ್ರವಾಸಕ್ಕೆ ಬರುವ ವಾಹನಗಳಿಗೆ ಬುಕ್ಕಿಂಗ್ ಕಡ್ಡಾಯಗೊಳಿಸಲಿದೆ. ಇದಕ್ಕಾಗಿಯೇ ವೆಬ್‌ಸೈಟ್ ರೂಪಿಸಲಾಗುತ್ತದೆ. ಪ್ರವಾಸ ಕೈಗೊಳ್ಳುವ ಮೊದಲು ಯಾವ ವಾಹನದಲ್ಲಿ ಪ್ರವಾಸ ಕೈಗೊಳ್ಳುತ್ತೇವೆ ಎಂದು ವಿವರ ಕೊಟ್ಟು ಬುಕ್ ಮಾಡಬೇಕಿದೆ.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ. ಆರ್. ಲೋಹಿತ್ ಮಾತನಾಡಿ, “ಮೊದಲು ನೋಂದಣಿ ಆದ ವಾಹನಗಳಿಗೆ ಆದ್ಯತೆ ನೀಡಲಾಗುತ್ತದೆ. 100 ಬೈಕ್, ಟ್ಯಾಕ್ಸಿ, ಟೆಂಪೊ ಟ್ರಾವೆಲರ್‌ಗಳಿಗೆ ಅವಕಾಶ ನೀಡಲಾಗುತ್ತದೆ” ಎಂದು ಹೇಳಿದರು.

ಏಕಕಾಲಕ್ಕೆ 600 ವಾಹನ, ದಿನಕ್ಕೆ 1200 ವಾಹನಕ್ಕೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಮುಳ್ಳಯ್ಯನ ಗಿರಿ ಸೇರಿ ಪರ್ವತ ಶ್ರೇಣಿಗಳಲ್ಲಿ ಭೂ ಕುಸಿವಾಗದಂತೆ ತಪ್ಪಿಸುವುದು, ವಾಹನ ದಟ್ಟಣೆ ನಿವಾರಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಿನಕ್ಕೆ ಎರಡು ಬಾರಿ 600 ವಾಹನಗಳನ್ನು ಬಿಡಲು ಸದ್ಯ ತೀರ್ಮಾನ ಮಾಡಲಾಗಿದೆ.

ಮುಳ್ಳಯ್ಯನ ಗಿರಿ, ದತ್ತಪೀಠ, ಗಾಳಿಕೆರೆಗೆ ಹೋಗುವವರು ನೋಂದಣಿ ಮಾಡಿಕೊಂಡು ಹೋಗಬೇಕಿದೆ. ಪರ್ವತ ಶ್ರೇಣಿಯಲ್ಲಿ ವಾಹನ, ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ತಜ್ಞರು ಸಹ ಸಲಹೆ ನೀಡಿದ್ದರು.

ಈಗಾಗಲೇ ಕರ್ನಾಟಕದ ಅರಣ್ಯ ಇಲಾಖೆ ಚಿಕ್ಕಮಗಳೂರು ಸೇರಿ ವಿವಿಧ ಪ್ರದೇಶಗಳಲ್ಲಿ ಚಾರಣ ನಡೆಸುವವರಿಗೆ ಮುಂಗಡ ಬುಕ್ಕಿಂಗ್ ಕಡ್ಡಾಯಗೊಳಿಸಿದೆ. ಇದೇ ಮಾದರಿಯಲ್ಲಿ ಚಿಕ್ಕಮಗಳೂರು ಪರ್ವತ ಶ್ರೇಣಿಗಳಲ್ಲಿಯೂ ವಾಹನ ಸಂಚಾರಕ್ಕೆ ಬುಕ್ಕಿಂಗ್ ಕಡ್ಡಾಯಗೊಳಿಸಲಾಗುತ್ತದೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಂಟಿಯಾಗಿ ಪರ್ವತ ಶ್ರೇಣಿಗಳಲ್ಲಿ ಖಾಸಗಿ ವಾಹನಗಳಿಗೆ ತಡೆ ಹಾಕಲು ಚೆಕ್ ಪೋಸ್ಟ್ ಮಾಡಿಕೊಂಡು ಕಾರ್ಯಾಚರಣೆ ಮಾಡಲಿವೆ. ಜಿಲ್ಲಾಡಳಿತದ ವತಿಯಿಂದ ಚೆಕ್‌ಪೋಸ್ಟ್‌ನಿಂದ ಪರ್ವತಗಳಿಗೆ ಸಾರಿಗೆ ವ್ಯವಸ್ಥೆ ಮಾಡುವ ಕುರಿತು ಚರ್ಚೆಗಳು ನಡೆದಿವೆ.

ಖಾಸಗಿ ವಾಹನದಲ್ಲಿ ಪ್ರವಾಸಿಗರು ಸಂಚಾರ ನಡೆಸಲು ಬಯಸಿದರೆ ಅದಕ್ಕೆ ಹಣ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆಗಳನ್ನು ಮಾಡಲಾಗಿದೆ. ಆದರೆ ಇದಕ್ಕಾಗಿ ವೆಬ್‌ಸೈಟ್ ರೂಪಿಸುವ ಕೆಲಸ ನಡೆಯುತ್ತಿದೆ.

ವಾರಾಂತ್ಯ, ಸಾಲು ಸಾಲು ರಜೆಯ ಸಮಯದಲ್ಲಿ ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು ಆಗಮಿಸುತ್ತದೆ. ಆಗ ಸಾಮಾಜಿಕ ಜಾಲತಾಣದಲ್ಲಿ ವಾಹನ ದಟ್ಟಣೆಯ ಕುರಿತು ಪೋಸ್ಟ್ ಹಾಕಲಾಗುತ್ತದೆ. ಸ್ಥಳೀಯರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಜನರು ಗಮನ ಸೆಳೆಯುತ್ತಾರೆ.

Previous articleಉತ್ತರ ಕರ್ನಾಟಕ ಭಾಗದ ಜನರಿಗೆ ಹೋರಾಟ ಅನಿವಾರ್ಯವೇ?
Next articleನಮ್ಮ ಮೆಟ್ರೋ ಮಾರ್ಗದಲ್ಲಿ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ: ಸಿಗಲಿದೆ ನಿರಂತರ ವೈಫೈ

LEAVE A REPLY

Please enter your comment!
Please enter your name here