ಬೆಂಗಳೂರು: ಭಾರತೀಯ ರೈಲ್ವೆ ಉದ್ಯಾನ ನಗರಿ ಬೆಂಗಳೂರಿನಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಡಿಪೋ ಮತ್ತು ವರ್ಕ್‌ಶಾಪ್ ನಿರ್ಮಾಣ ಮಾಡಲಿದೆ. ಈ ಪ್ರಸ್ತಾವಿತ ಯೋಜನೆಯ ವೆಚ್ಚ 270 ಕೋಟಿ ರೂ.ಗಳು. ರೈಲ್ವೆ ಬೋರ್ಡ್ ಈಗಾಗಲೇ ಕಾಮಗಾರಿಗೆ ಅನುಮೋದನೆಯನ್ನು ನೀಡಿದೆ.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ನಗರದ ಥಣಿಸಂದ್ರದಲ್ಲಿ ಡಿಪೋ ಮತ್ತು ವರ್ಕ್‌ಶಾಪ್ ನಿರ್ಮಾಣವನ್ನು ಮಾಡಲಿದೆ. ಈ ಕಾಮಗಾರಿ 2026ರಲ್ಲಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಮತ್ತು ಬೆಂಗಳೂರಿನ ಬಿಇಎಂಎಲ್ ಜಂಟಿಯಾಗಿ 16 ಕೋಚ್‌ನ 10 ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ನಿರ್ಮಾಣ ಮಾಡುತ್ತಿವೆ. ಈಗಿರುವ ವಂದೇ ಭಾರತ್ ರೈಲು, ಸ್ಲೀಪರ್ ರೈಲುಗಳ ಪರಿಶೀಲನೆ, ನಿರ್ವಹಣೆಯನ್ನು ಥಣಿಸಂದ್ರದಲ್ಲಿ ಮಾಡಲಾಗುತ್ತದೆ.
ಯೋಜನೆಯ ವಿವರ: ಈಗಾಗಲೇ ಬೆಂಗಳೂರು ನಗರದಿಂದ 6 ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಮುಂದಿನ ದಿನಗಳಲ್ಲಿ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳು ತಯಾರಾಗಲಿದ್ದು, ಅವುಗಳ ನಿರ್ವಹಣೆಯನ್ನು ನಗರದಲ್ಲಿಯೇ ಮಾಡಲು ಡಿಪೋ ಮತ್ತು ವರ್ಕ್‌ಶಾಪ್ ಸಿದ್ಧಗೊಳ್ಳಲಿದೆ.
ಇದರ ಜೊತೆಗೆ ಭಾರತೀಯ ರೈಲ್ವೆ ಎರಡು ಹೊಸ ಟರ್ಮಿನಲ್ ಅನ್ನು ನಗರದಲ್ಲಿ ನಿರ್ಮಾಣ ಮಾಡಲಿದೆ. ಒಂದು ಟರ್ಮಿನಲ್ ದೇವನಹಳ್ಳಿ ಬಳಿ ಮತ್ತೊಂದು ಟರ್ಮಿನಲ್ ನೆಲಮಂಗಲದಲ್ಲಿ ನಿರ್ಮಾಣ ಮಾಡಿ ವೈಟ್‌ಫೀಲ್ಡ್ ಮೇಲೆ ಈಗ ಇರುವ ಒತ್ತಡವನ್ನು ಕಡಿಮೆ ಮಾಡಲಾಗುತ್ತದೆ.
ಥಣಿಸಂದ್ರ ಬೆಂಗಳೂರು ನಗರದ ಪ್ರಮುಖ ಪ್ರದೇಶವಾಗಿದೆ. ಮುಂದಿನ ದಿನ ದಿನಗಳಲ್ಲಿ ಬೆಂಗಳೂರು ಸಬ್ ಅರ್ಬನ್ ಕಾರಿಡಾರ್-4 ಇಲ್ಲಿಗೆ ಸಂಪರ್ಕ ಕಲ್ಪಿಸಲಿದೆ. ಇಲ್ಲಿ ಮಾನ್ಯತಾ ಟೆಕ್ ಪಾರ್ಕ್ ಇದ್ದು, ಬೀಗ ಹಾಕಿರುವ ಥಣಿಸಂದ್ರ ರೈಲು ನಿಲ್ದಾಣವನ್ನು ತೆರೆಯಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
2024ರಲ್ಲಿಯೇ ಥಣಿಸಂದ್ರ ಡಿಪೋ ಮತ್ತು ವರ್ಕ್‌ಶಾಪ್ ನಿರ್ಮಾಣದ ಪ್ರಸ್ತಾವನೆಯನ್ನು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಕೇಂದ್ರ ರೈಲ್ವೆ ಬೋರ್ಡ್‌ಗೆ ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆಯನ್ನು ಸಹ ನೀಡಲಾಗಿತ್ತು. ಆದರೆ ದೇವನಹಳ್ಳಿ ಬಳಿ ಟರ್ಮಿನಲ್ ನಿರ್ಮಾಣ ಮಾಡಲು ಸ್ಥಳೀಯ ರೈತರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ಎಷ್ಟು ಬೋಗಿ ಈ ಡಿಪೋ ಮತ್ತು ವರ್ಕ್‌ಶಾಪ್‌ಗೆ ಬರಲಿದೆ?, ಯೋಜನೆಗೆ ಎಷ್ಟು ಭೂಮಿ ಅಗತ್ಯವಿದೆ? ಎಂಬ ಕುರಿತು ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಿ ಕಳಿಸಲಾಗಿತ್ತು. 270 ಕೋಟಿ ರೂ.ಗಳ ವೆಚ್ಚದ ಯೋಜನೆ ಇದ್ದಾಗಿದ್ದು, ಮುಂದಿನ ದಿನಗಳಲ್ಲಿ ವಂದೇ ಭಾರತ್ ರೈಲುಗಳ ಸಂಖ್ಯೆ ಹೆಚ್ಚಾಗುವ ಹಿನ್ನಲೆಯಲ್ಲಿ ಇದರ ನಿರ್ವಹಣೆಗಾಗಿಯೇ ಡಿಪೋ ಮತ್ತು ವರ್ಕ್‌ಶಾಪ್ ಅಗತ್ಯವಿದೆ.
ಬೆಂಗಳೂರು ನಗರದಿಂದ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ, ಬೆಂಗಳೂರು-ಕಾಚಿಗುಡ, ಬೆಂಗಳೂರು-ಕಲಬುರಗಿ ಸೇರಿದಂತೆ ವಿವಿಧ ನಗರಗಳಿಗೆ ವಂದೇ ಭಾರತ್ ರೈಲುಗಳ ಸಂಪರ್ಕವಿದೆ. ಭವಿಷ್ಯದಲ್ಲಿ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಾಗುತ್ತದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಘೋಷಣೆ ಮಾಡಿದ್ದಾರೆ.
ವಿದ್ಯುತ್ ಎಂಜಿನ್ ಮೂಲಕ ಸಂಚಾರ ನಡೆಸುವ ವಂದೇ ಭಾರತ್ ರೈಲುಗಳನ್ನು ನಿರ್ವಹಣೆ ಮಾಡಲು ಪ್ರತ್ಯೇಕವಾದ ವ್ಯವಸ್ಥೆ ಬೇಕಿದೆ. ಈ ಮಾದರಿ ರೈಲು ಒಂದು ಬಾರಿ ಸಂಚಾರವನ್ನು ಪೂರ್ಣಗೊಳಿಸಿದ ಬಳಿಕ ಸಂಪೂರ್ಣ ನಿರ್ವಹಣೆಯನ್ನು ಮಾಡಲಾಗುತ್ತದೆ. ಆದ್ದರಿಂದಲೇ ಹೊಸ ಡಿಪೋ & ವರ್ಕ್ ಶಾಪ್ ನಿರ್ಮಾಣ ಮಾಡಲಾಗುತ್ತಿದೆ.
086vjy