ದಾಂಡೇಲಿ : ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡಿರುವುದನ್ನು ಅಕ್ಷೇಪಿಸಿ ಜಿಲ್ಲಾಧಿಕಾರಿ ಹಾಗೂ ಕಸಾಪ ಆಡಳಿತಾಧಿಕಾರಿ ಗಾಯತ್ರಿ ಅವರಿಗೆ ಕಸಾಪ ಆಜೀವ ಸದಸ್ಯರು ಗುರುವಾರ ಲಿಖಿತ ಮನವಿ ನೀಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ಮೂರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಕೆ.ಎಮ್. ಗಾಯತ್ರಿ ಅವರನ್ನು ನೇಮಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡಿರುವ ಔಚಿತ್ಯವನ್ನು ಅಜೀವ ಸದಸ್ಯರಾದ ಅಕ್ರಂಖಾನ್, ಅರ್.ವಿ ಗಡೆಪ್ಪನವರ್ ಮತ್ತಿತರರು ಪ್ರಶ್ನಿಸಿ ಆಡಳಿತಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದ್ದು , ಜಿಲ್ಲಾ ಕ.ಸಾಪ. ಅಧ್ಯಕ್ಷ ಬೊಮ್ಮಯ್ಯ ವಾಸರೆ ಜಿಲ್ಲೆಯ ಉದ್ಯಮಿ ವ್ಯಾಪಾರಸ್ಥರಿಂದ ಮತ್ತು ಅರಣ್ಯ, ಅಬಕಾರಿ, ಇನ್ನಿತರ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ವಂತಿಗೆ ಹಣ ಕೂಡಿಸುತ್ತಿರುವದನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಸೆಪ್ಟೆಂಬರ -೩೦ ರಂದು ಮೂರು ತಿಂಗಳ ಅವಧಿಗೆ ಮಾತ್ರ ಸಿಮೀತವಾಗಿ ಉಚ್ಚ ನ್ಯಾಯಾಲಯದ ನಿರ್ದೆಶನದಂತೆ ಕಾರ್ಯ ನಿರ್ವಹಿಸಲು ಕ.ಸಾ.ಪ. ಆಡಳಿತಾಧಿಕಾರಿಗೆ ಆದೇಶ ನೀಡಿದೆ. ಈ ಅವಧಿಯಲ್ಲಿ ಕ.ಸಾಪದ ಪ್ರಭಾರ ವಹಿಸಿಕೊಂಡು ವಿಚಾರಣೆಗೆ ಸಂಬಂದಿಸಿದಂತೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ವಿಚಾರಣಾಧಿಕಾರಿಗಳಿಗೆ ಪೂರೈಸುವಂತೆ ಸೂಚಿಸಲಾಗಿದೆ.
ಆದರೆ ಜಿಲ್ಲೆ, ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ, ಅನುಮತಿ ನೀಡಲು ವಂತಿಗೆ ಸಂಗ್ರಹಿಸಲು ಅವಕಾಶವಿಲ್ಲ. ಇಂದಿಗೂ ಕ.ಸಾ.ಪ ರಾಜ್ಯಾಧ್ಯಕ್ಷರು ಮಹೇಶ ಜೋಶಿ ಅವರೇ ಆಗಿರುತ್ತಾರೆ. ಈ ಮೂರು ತಿಂಗಳ ವಿಚಾರಣಾ ಅವಧಿಯಲ್ಲಿ ಅವರ ಅಧಿಕಾರ ತಡೆ ಆಗಿರಬಹುದು.
ಅವರನ್ನು ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಹುದ್ದೆಯಿಂದ ಕೆಳಗಿಳಿಸಿಲ್ಲ. ಹೀಗಿರುವಾಗ ಎಲ್ಲ ಜಿಲ್ಲಾ, ತಾಲೂಕು ಪದಾಧಿಕಾರಿಗಳು ಅವರ ಆಧೀನದಲ್ಲೇ ಇರುತ್ತಾರೆ.
ಆಡಳಿತಾಧಿಕಾರಿಗಳ ಮೂರು ತಿಂಗಳ ಅವಧಿಯನ್ನೇ ತನ್ನ ಸ್ವಾರ್ಥಕ್ಕಾಗಿ, ತನಗೆ ಬಂದಿರುವ ಕಳಂಕವನ್ನು ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ (ವಾಸರೆ) ದಾಂಡೇಲಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದಾರೆ ಎಂದು ಅಪಾದಿಸಿದ್ದಾರೆ.
ಇವರು ದಾಂಡೇಲಿ ನಗರಸಭೆಯ ೭೦ ಲಕ್ಷ ರೂಪಾಯಿ ಬೆಲೆ ಬಾಳುವ ಸೈಟನ್ನು ದಲಿತನೋರ್ವನ ಹೆಸರಿನಲ್ಲಿ ಅಧಿಕಾರಿಗಳ ಸಹಕಾರದಿಂದ ೧೦ ಸಾವಿರ ರೂಪಾಯಿ ತುಂಬಿ ಆಶ್ರಯ ಯೋಜನೆಯಡಿ ಸುಳ್ಳು ದಾಖಲೆ ಸೃಷ್ಟಿಸಿ ಮೂರೇ ದಿನದಲ್ಲಿ ಪತ್ನಿ ಜಲಜಾಕ್ಷಿ ಹೆಸರಿಗೆ ನೋಂದಣಿ ಮಾಡಿಸಿಕೊಂಡು ೧೫ ಲಕ್ಷ ರೂಪಾಯಿ ಬ್ಯಾಂಕ್‌ನಿಂದ ಸಾಲ ಪಡೆದು ವಂಚಿಸಿರುವ ಪ್ರಕರಣವೀಗ ಜಿಲ್ಲೆಯಾದ್ಯಂತ ಸುದ್ದಿಯಾಗಿದೆ.
ಲೋಕಾಯುಕ್ತ ರಿಂದ ವಿಚಾರಣೆ ನಡೆದಿದ್ದರೆ, ದಲಿತನ ಹೆಸರಿನಲ್ಲಿ ಮೋಸದಿಂದ ಸೈಟ್ ಕಬಳಿಸಿದ್ದರಿಂದ ವಂಚನೆ ಹಾಗೂ ಪೋರ್ಜರಿ ಪ್ರಕರಣ ದಾಖಲಿಸಲು ಎಸ್.ಪಿ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಪತ್ರ ಮುಖೇನ ಸೂಚನೆ ಹೋಗಿದೆ. ಇದರ ದಾಖಲೆಗಳನ್ನು ಮನವಿ ನೀಡಿದ ಕಸಪಾ ಅಜೀವ ಸದಸ್ಯರಿಬ್ಬರು ಲಗತ್ತಿಸಿದ್ದಾರೆ.
ಈ ಸೈಟ್ ಹಗರಣದಿಂದ ಮುಖ ಉಳಿಸಿಕೊಳ್ಳಲು ಜಿಲ್ಲಾ ಸಮ್ಮೇಳನ ಹಮ್ಮಿಕೊಂಡು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸುತ್ತಿದ್ದಾರೆ. ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ಕೇಂದ್ರ ಪರಿಷತ್ತಿನಿಂದ ಲಕ್ಷಾಂತರ ರೂಪಾಯಿ ಅನುದಾನ ನೀಡಲಾಗುತ್ತದೆ. ಆದರೆ ನಮ್ಮ ಜಿಲ್ಲೆಯಲ್ಲಿ ಎಲ್ಲಾ ತಾಲೂಕು ಸಮ್ಮೇಳನ ನಡೆಸಲಾಗುತ್ತಿದೆ.
ಜಿಲ್ಲಾ ಸಾಹಿತ್ಯ ಸಮ್ಮೇಳನ ಎಂಬುದು ಈಗಿನ ಜಿಲ್ಲಾಧ್ಯಕ್ಷರು ಬಂದಾಗಿನಿಂದ ಸರ್ಕಾರದ ಅನುದಾನ ಬರಲಿ, ಬಿಡಲಿ , ಸಾರ್ವಜನಿಕ ವಂತಿಗೆ ಹಣ ಲಕ್ಷಾಂತರ ರೂಪಾಯಿ ಸಂಗ್ರಹಿಸುವದು ದಂಧೆ ಆಗಿ ಮಾರ್ಪಟ್ಟಿದೆ ಎಂದು ಜಿಲ್ಲಾಧಿಕಾರಿಗೆ ನೀಡಿದ ಪತ್ರದಲ್ಲಿ ದೂರಿದ್ದಾರೆ. ಅಪಾದಿಸಿದ್ದಾರೆ.
ಸಾರ್ವಜನಿಕರಿಂದ ಕೂಡಿಸಿದ ಹಣಕ್ಕಿಂತ ಹೆಚ್ಚಿನ ಖರ್ಚು ತೋರಿಸಿ ಪಾರದರ್ಶಕತೆಯ ಸೋಗು ಹಾಕಿ ಲೆಕ್ಕ ಪರಿಶೋಧಕರಿಂದ ಆಡಿಟ್ ಮಾಡಿಸಿ ಲೆಕ್ಕ ಮಂಡನೆ ಮಾಡಲಾಗುತ್ತದೆ. ತಡವಾಗಿ ಬರುವ ಕೇಂದ್ರ ಪರಿಷತ್ತಿನ ಅನುದಾನ ಎಲ್ಲಿಗೆ ಹೋಗುತ್ತದೆ ಎನ್ನುವದು ಯಾರಿಗೂ ಗೊತ್ತಾಗುವದಿಲ್ಲ.
ಆದ್ದರಿಂದ ಸಾರ್ವಜನಿಕ ವಂತಿಗೆ ಕೂಡಿಸಲು ಆಡಳಿತಾಧಿಕಾರಿಗಳು ಅನುಮತಿ ನೀಡಬಾರದು. ನ್ಯಾಯಾಲಯ ಮತ್ತು ವಿಚಾರಣಾ ಪ್ರಕ್ರಿಯೆ ನಡೆಯುತ್ತಿರುವಾಗ ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಈ ಸಮಯದಲ್ಲಿ ಸಮ್ಮೇಳನ ನಡೆಯುತ್ತಿಲ್ಲ.
ಆಡಳಿತಾಧಿಕಾರಿ ಅವಧಿಯ ನಂತರ ಚುನಾಯಿತ ರಾಜ್ಯಾಧ್ಯಕ್ಷರು ನಿರ್ಣಯ ಕೈಗೊಳ್ಳುತ್ತಾರೆ. ಆದ್ದರಿಂದ ಈ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಕ್ಷೇಪಣೆ ವ್ಯಕ್ತ ಪಡಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.





















