ದಾಂಡೇಲಿ: ನಗರಸಭೆ ಪೌರಾಯುಕ್ತ – ಇಬ್ಬರು ದ್ವಿತೀಯ ದರ್ಜೆ ಸಹಾಯಕರಿಗೆ ಲೋಕಾಯುಕ್ತರಿಂದ ನೋಟೀಸ್

0
21

ದಾಂಡೇಲಿ : ಇಲ್ಲಿನ ‌ ನಗರಸಭೆಯ ಸೈಟ್ ಅಕ್ರಮ‌ ಪರಭಾರೆ ಪ್ರಕರಣವೊಂದರಲ್ಲಿ ದಾಂಡೇಲಿ ನಗರಸಭೆ ಪೌರಾಯುಕ್ತ ಹಾಗೂ ಇಬ್ಬರು ನೌಕರರಿಗೆ ಲೋಕಾಯುಕ್ತರಿಂದ ನೋಟೀಸ್ ಜಾರಿಯಾಗಿದೆ.

ದಾಂಡೇಲಿ ನಗರಸಭೆಯ ಅಧೀನದ ವಾಣಿಜ್ಯ ಸೈಟನ್ನು ಆಶ್ರಯ ಮನೆ ಪಟ್ಟಾದಡಿ ಅಕ್ರಮವಾಗಿ 2019ರ ಅವಧಿಯಲ್ಲಿ ದಾಂಡೇಲಿ ನಗರಸಭೆಯ ಅಂದಿನ ಪೌರಾಯುಕ್ತರು, ಜೋಯಿಡಾ ತಾಲೂಕು ,ಅವೇಡಾ ಪಂಚಾಯತಿ, ಕೊಂಡಪಾ ಗ್ರಾಮ ನಿವಾಸಿ ವೆಂಕಟೇಶ್ ‌ಸುಬ್ಬಯ್ಯ ಎಂಬುವವರಿಗೆ ಕೊಟ್ಟಿದ್ದರು. ಆ‌ಶ್ರಯ ಸೈಟನ್ನು ನಾಲ್ಕೇ ದಿನದ ಅಂತರದಲ್ಲಿ ಜಲಾಜಾಕ್ಷಿ ಬೊಮ್ಮಯ್ಯ ನಾಯಕ ಎಂಬುವವರಿಗೆ ಆತ ಪರಭಾರೆ ಮಾಡಿ , ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಸಹ ಆಗಿ ಹೋಗಿತ್ತು.

ಈ ಪ್ರಕರಣ ಪತ್ತೆ ಹಚ್ಚಿದ ದಾಂಡೇಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ ಎಂಬುವವರು ಈ ಸಂಬಂಧ ಕಾರವಾರ ಲೋಕಾಯುಕ್ತ ಎಸ್ಪಿ ಗೆ ಲಿಖಿತ ದೂರು ನೀಡಿದ್ದರು. ಈ ದೂರು ಆಧರಿಸಿ ಬೆಂಗಳೂರು ಉಪ ಲೋಕಾಯುಕ್ತರು ತನಿಖೆಗೆ ಮುಂದಾಗಿದ್ದು, ದಾಂಡೇಲಿ ನಗರಸಭೆಯ ಪೌರಾಯುಕ್ತರು, ಇಬ್ಬರು ಸಿಬ್ಬಂದಿ ಹಾಗೂ ಹಳಿಯಾಳ ಸಬ್ ರಿಜಿಸ್ಟ್ರಾರ್ ಅಧಿಕಾರಿಗೆ , ಲೋಕಾಯುಕ್ತ ಅಪರ ನಿಬಂಧಕರ (ವಿಚಾರಣೆ) ಮೂಲಕ ನೋಟೀಸ್ ಜಾರಿ ಮಾಡಿದ್ದರು‌.

ಈ ಪತ್ರದಲ್ಲಿ ದಾಂಡೇಲಿ ವಾಣಿಜ್ಯ ಸೈಟ್ ಸರ್ವೆ ನಂಬರ್ 3122 ಅಕ್ರಮ ಪರಭಾರೆಯಾಗಿದೆ ಎಂದು ದಾಂಡೇಲಿಯ ಶಿವಾನಂದ ಗಗ್ಗರಿ ಅವರು ದೂರು ನೀಡಿದ್ದಾರೆ ಎಂಬುದನ್ನು ನೋಟೀಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಇದು 50 ಲಕ್ಷ ಬೆಲೆಬಾಳುವ ಸೈಟಾಗಿದ್ದು, ಇದನ್ನು ಆಶ್ರಯ ಪ್ಲಾಟ್ ಅಡಿ ಹತ್ತು ಸಾವಿರ ರೂ.ಗೆ ಹಂಚಿ ನಗರಸಭೆಗೆ ನಷ್ಟ ಮಾಡಲಾಗಿದೆ.‌ ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ದಾಖಲೆ ಸಹಿತ ದೂರಿದ್ದರು. ಆಶ್ರಯ ಪ್ಲಾಟ್ ಹದಿನೈದು ವರ್ಷಗಳ ಮಾರಾಟ ಮಾಡಲು ಬರುವುದಿಲ್ಲ. ಈ ಪ್ರಕರಣದಲ್ಲಿ ಸೈಟ್ ಪಡೆದ ನಾಲ್ಕನೇ ದಿನಕ್ಕೆ ಸೈಟ್ ಜಲಜಾಕ್ಷಿ ಎಂಬುವವರು ಖರೀದಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದು ಅವರು ಲೋಕಾಯುಕ್ತರಿಗೆ ದೂರಿದ್ದರು.

ಈತನ್ಮಧ್ಯೆ ವೆಂಕಟೇಶ ಸುಬ್ಬಯ್ಯ ತಾನು ಆಶ್ರಯ ಸೈಟ್ ಗೆ ಅರ್ಜಿ ಸಹ ಹಾಕಿಲ್ಲ. ತನಗೆ ಸೈಟ್ ಮಂಜೂರಾದ‌ ಸಂಗತಿ ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ನನ್ನನ್ನು ವಂಚಿಸಿ,‌ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನನ್ನ ಸಹಿ ಪಡೆಯಲಾಗಿದೆ‌ . ಸೈಟ್ ಪಡೆದವರು ನನಗೆ ಮೋಸ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ, ಲೋಕಾಯುಕ್ತರಿಗೆ ಅಫಿಡೆವಿಟ್ ಸಲ್ಲಿಸಿದ್ದರು.

ದಾಂಡೇಲಿ ನಗರಸಭೆಯ ಸರ್ವೆ ನಂಬರ್ 3122 ಸೈಟ್ ಹಗರಣ ಭಾರೀ ಸಂಚಲನ ಮೂಡಿಸಿದೆ, ಸೈಟ್ ಖರೀದಿಸಿದ ಜಲಾಜಾಕ್ಷಿ ನಾಯಕ ,ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬೊಮ್ಮಯ್ಯ ನಾಯಕ ವಾಸರೆ ಅವರ ಪತ್ನಿಯಾಗಿದ್ದು, ಪ್ರಕರಣ ಭಾರೀ ಮಹತ್ವ ಪಡೆದಿದೆ.

ಲೋಕಾಯುಕ್ತರು ದಾಂಡೇಲಿ ನಗರಸಭೆಯ ಹಾಲಿ ಪೌರಾಯುಕ್ತರು, ಎಸ್ ಡಿಎ ಗಳಾದ ಬಿ.ಎಫ್.ಗವಾಸ್ , ಹನುಮಂತ ಉಪ್ಪಾರ ಅವರಿಂದ ವಿವಾದಿತ ಸೈಟ್ ನ ದಾಖಲೆಗಳು ಹಾಗೂ ಆಕ್ಷೇಪಣೆಯನ್ನು ವಾರದಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ ಹಳಿಯಾಳ ಸಬ್ ರಿಜಿಸ್ಟ್ರಾರ್ ಅವರಿಂದ ಸಹ ಮಾಹಿತಿ ಕೇಳಿದ್ದು,‌ಅವರು 2019 ಜನವರಿಯಲ್ಲಿ ಈ ಪ್ರಕರಣದ‌ ಬಗ್ಗೆ ಆದ ವಹಿವಾಟು, ದಾಖಲೆಗಳು ಹಾಗೂ ವಾಸ್ತವ ವರದಿಯನ್ನು ಈಗಾಗಲೇ ಲೋಕಾಯುಕ್ತರ ಕಚೇರಿಗೆ ಕಳುಹಿಸಿದ್ದಾರೆ.

ಮುಂದೆ ಈ ಪ್ರಕರಣ ಹೇಗೆ ತಿರುವು ಪಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Previous articleಆಸ್ತಿವಿಚಾರಕ್ಕೆ ಮಹಿಳೆಯ ಅರಬೆತ್ತಲೆಗೊಳಿಸಿ ಹಲ್ಲೆ: ವರ್ಷದ ನಂತರ ವೀಡಿಯೋ ವೈರಲ್
Next articleರಂಗಸನ್ಸ್: ಅಗರಬತ್ತಿ ವ್ಯಾಪಾರದಿಂದ ಏರೋಸ್ಪೇಸ್ ಕ್ಷೇತ್ರದವರೆಗೆ ಹೊಸ ಮೈಲಿಗಲ್ಲು

LEAVE A REPLY

Please enter your comment!
Please enter your name here