ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ 25ನೇ ಸಾಹಿತ್ಯ ಸಮ್ಮೇಳನದ ವಿವಾದ ಅಜೀವ ಸದಸ್ಯರ ಅಪಸ್ವರದಿಂದಾಗಿ ದಾಂಡೇಲಿ ಜೆಎಂಎಫ್ ಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ OS No.216/2025 ರಂತೆ ಪ್ರಕರಣ ದಾಖಲಿಸಿಕೊಂಡು ನಾಳೆಗೆ ವಿಚಾರಣೆ ಮುಂದೂಡಿದೆ.
ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾದ ಅಕ್ರಂ ವುಲ್ಲಾ ಖಾನ್, ಸಂದೀಪ ಭಂಡಾರಿ, ಪ್ರವೀಣ ಕೊಠಾರಿ ಅವರು ವಕೀಲರಾದ ರಾಘವೇಂದ್ರ ವಿ.ಗಡೆಪ್ಪನವರ ಮೂಲಕ ನ್ಯಾಯಾಲಯದಲ್ಲಿ ಕ.ಸಾ.ಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ಎನ್. ವಾಸರೆ ಮತ್ತು ರಾಜ್ಯ ಕ.ಸಾ.ಪ ಆಡಳಿತಾಧಿಕಾರಿ ಕೆ.ಎಂ. ಗಾಯತ್ರಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಹಣ ದುರುಪಯೋಗದ ಕುರಿತು ವಿಚಾರಣೆ ನಡೆದಿರುವಾಗ ಮತ್ತು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕ.ಸಾ.ಪ ವಿಚಾರಣೆ ಮುಂದುವರಿದಿದೆ.
ಈ ಸಂದರ್ಭವನ್ನು ಜಿಲ್ಲಾಧ್ಯಕ್ಷ ಬೊಮ್ಮಯ್ಯ ಎನ್. ವಾಸರೆ ಬಳಸಿಕೊಂಡು ರಾಜ್ಯಾಧ್ಯಕ್ಷ ಮಹೇಶ ಜೋಶಿ , ಕಸಾಪ ಆಡಳಿತಾಧಿಕಾರಿ ಅವರ ಅನುಮತಿ ಪಡೆದಿಲ್ಲ. ಸರಕಾರ 3 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ಕೆ.ಎಂ ಗಾಯತ್ರಿ ಅವರನ್ನು ನೇಮಿಸಿದೆ. ಅವರು ಈ ತಿಂಗಳ ಅವಧಿಯಲ್ಲಿ ವಿಚಾರಣೆಗೆ ಬೇಕಾಗಿರುವ ದಾಖಲೆಗಳನ್ನು ಮಾತ್ರ ನೀಡಬೇಕು.
ಅವರು ಹಣಕಾಸಿನ ವ್ಯವಹಾರವಾಗಲಿ, ಅನುಧಾನ ಬಿಡುಗಡೆಯಾಗಲಿ, ಸಮ್ಮೇಳನ ನಡೆಸಲು ಅನುಮತಿ ನೀಡುವ ಅಧಿಕಾರವಿಲ್ಲ. ಡಿಸೆಂಬರ್ 31 ರಂದು ಅವರ 3 ತಿಂಗಳ ಅವಧಿ ಮುಗಿಯಲಿದೆ. ಈ ಅವಧಿಯ ಒಳಗೆ ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ, ಶಾಲಾ ಕಾಲೇಜು ಶಿಕ್ಷಕರು, ಹೋಟೆಲ್, ರೆಸಾರ್ಟ್, ಬಾರ್ ಮತ್ತು ವಿವಿಧ ಉದ್ಯಮಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ದಂಧೆ ನಡೆಸ ಹೊರಟಿದ್ದಾರೆಂದು ವಾದಿಗಳು ಪ್ರತಿಪಾದಿಸಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ ರಾಜ್ಯಾಧ್ಯಕ್ಷರ ಹೆಸರು, ಭಾವಚಿತ್ರ ಹಾಕದೇ ಕ.ಸಾ.ಪ. ಸಂಪ್ರದಾಯವನ್ನು ಮುರಿಯಲಾಗಿದೆ. ಸಾಹಿತ್ಯ ಸಮ್ಮೇಳನ ನಡೆಸಲು ಕೇಂದ್ರ ಕ.ಸಾ.ಪ. ದಿಂದ 5 ಲಕ್ಷ ರೂಪಾಯಿ ನೀಡಲಾಗುತ್ತದೆ.
ರಾಜ್ಯ ಕ.ಸಾ.ಪ ದ ಅನುಮತಿ ಪಡೆಯದೇ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿದ್ದು, ಜಿಲ್ಲಾಧ್ಯಕ್ಷ ಮತ್ತು ಅವರ ಪತ್ನಿಯ ವಿರುದ್ಧ ಮೋಸದಿಂದ ಸೈಟೊಂದನ್ನು ನಗರಸಭೆಯಿಂದ ಪಡೆದ ಬಗ್ಗೆ ಲೋಕಾಯುಕ್ತದಲ್ಲಿ ವಿಚಾರಣೆಯಲ್ಲಿರುವುದನ್ನು ಮತ್ತು ಜಿಲ್ಲಾಧಿಕಾರಿಗಳು ಜಿಲ್ಲಾ ಪೋಲಿಸ್ ವರಿಷ್ಠರಿಗೆ ವಂಚನೆ ಮತ್ತು ಪೋರ್ಜರಿ ಪ್ರಕರಣ ದಾಖಲಿಸುವಂತೆ ಬರೆದಿರುವ ಪತ್ರಗಳು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಅನಿಶ್ಚಿತ ಹಾದಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೋರ್ಟಿನ ಮೂಗುದಾರ ಬಿದ್ದಿದೆ.























