ಅಯೋಧ್ಯೆ ರಾಮಮಂದಿರದ ದ್ವಾರಕ್ಕೆ ಉಡುಪಿಯ ಯತಿಗಳ ಹೆಸರು: ಮೋದಿಯಿಂದ ಮಹತ್ವದ ಘೋಷಣೆ!

0
6

ಉಡುಪಿ: ದಕ್ಷಿಣದ ದ್ವಾರಕೆ ಎಂದೇ ಕರೆಯಲ್ಪಡುವ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಇಂದು ಭಕ್ತಿ ಮತ್ತು ರಾಷ್ಟ್ರಭಕ್ತಿಯ ಸಂಗಮವಾಗಿತ್ತು. ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕನ್ನಡಿಗರಿಗೆ ಮತ್ತು ಮಧ್ವ ಪರಂಪರೆಯ ಅನುಯಾಯಿಗಳಿಗೆ ಸಂತಸ ತರುವಂತಹ ಮಹತ್ವದ ವಿಷಯವೊಂದನ್ನು ಪ್ರಕಟಿಸಿದರು.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ರಾಮಮಂದಿರದ ಪ್ರಮುಖ ದ್ವಾರವೊಂದಕ್ಕೆ ದ್ವೈತ ಸಿದ್ಧಾಂತದ ಪ್ರತಿಪಾದಕರಾದ ಉಡುಪಿಯ ಶ್ರೀ ಮಧ್ವಾಚಾರ್ಯರ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದರು. ಈ ಮಾತು ಕೇಳುತ್ತಿದ್ದಂತೆ ನೆರೆದಿದ್ದ ಭಕ್ತಸಾಗರ ಕರತಾಡನ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿತು.

ಕನ್ನಡದಲ್ಲೇ ಮಾತು, ಶಿರಬಾಗಿ ನಮನ: “ಎಲ್ಲರಿಗೂ ನಮಸ್ಕಾರ… ಜೈ ಶ್ರೀಕೃಷ್ಣ” ಎಂದು ಅಚ್ಚಗನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಉಡುಪಿ ಮತ್ತು ತಮ್ಮ ತವರೂರಾದ ಗುಜರಾತ್‌ಗೆ ಇರುವ ಕೃಷ್ಣನ ನಂಟನ್ನು ನೆನಪಿಸಿಕೊಂಡರು.

“ದ್ವಾರಕೆಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದಿದ್ದ ನಾನು, ಇಂದು ಉಡುಪಿಯ ಕನಕನ ಕಿಂಡಿಯ ಮೂಲಕ ಅದೇ ಕೃಷ್ಣನ ದರ್ಶನ ಪಡೆದೆ. ಇದು ನನ್ನ ಪುಣ್ಯ,” ಎಂದು ಭಾವುಕರಾದರು. ವೇದಿಕೆಯಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿದ ಮೋದಿ, ಮಠದ ವತಿಯಿಂದ ನೀಡಲಾದ ನವಿಲು ಗರಿಯ ಕಿರೀಟವನ್ನು ಧರಿಸಿ ಸಂಭ್ರಮಿಸಿದರು.

ಉಗ್ರರಿಗೆ ಖಡಕ್ ಎಚ್ಚರಿಕೆ: ಇದೇ ವೇಳೆ ಹೊಸ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಮೋದಿ, ಭಯೋತ್ಪಾದನೆ ಮತ್ತು ಯುದ್ಧದ ವಿಚಾರದಲ್ಲಿ ಭಾರತ ಇನ್ನು ಮುಂದೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ ಎಂದರು. “ನಮ್ಮ ಮೇಲೆ ಯುದ್ಧ ಸಾರುವವರಿಗೆ ಮತ್ತು ಉಗ್ರರನ್ನು ಪೋಷಿಸುವವರಿಗೆ ತಕ್ಕ ಪಾಠ ಕಲಿಸುವ ಶಕ್ತಿ ಇಂದಿನ ಭಾರತಕ್ಕಿದೆ,” ಎಂದು ಗುಡುಗಿದರು.

ಬಾಲಕಿಗೆ ಸಿಕ್ಕಿತು ಪ್ರಧಾನಿಯ ಪತ್ರದ ಭರವಸೆ: ಸಭೆಯಲ್ಲಿ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಜನಸಾಗರದ ನಡುವೆ ಪುಟ್ಟ ಬಾಲಕಿಯೊಬ್ಬಳು ಮೋದಿಯವರ ಭಾವಚಿತ್ರವನ್ನು ಎತ್ತಿ ಹಿಡಿದು ನಿಂತಿದ್ದಳು. ಇದನ್ನು ಗಮನಿಸಿದ ಪ್ರಧಾನಿ, ಭಾಷಣದ ನಡುವೆಯೇ ಪೊಲೀಸರಿಗೆ ಸೂಚನೆ ನೀಡಿ, “ಆ ಮಗುವಿನ ವಿಳಾಸ ಪಡೆದುಕೊಳ್ಳಿ, ಆಕೆ ಪ್ರೀತಿಯಿಂದ ತಂದಿರುವ ಫೋಟೋಗೆ ಪ್ರತಿಯಾಗಿ ನಾನೊಂದು ಕೃತಜ್ಞತಾ ಪತ್ರವನ್ನು ಕಳುಹಿಸುತ್ತೇನೆ,” ಎಂದು ಹೇಳುವ ಮೂಲಕ ನೆರೆದಿದ್ದವರ ಮನಗೆದ್ದರು.

ಬಿಜೆಪಿಯ ಭದ್ರಕೋಟೆ: ಉಡುಪಿ ಕೇವಲ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ, ಇದು ಬಿಜೆಪಿಯ ಸೈದ್ಧಾಂತಿಕ ಕರ್ಮಭೂಮಿ ಎಂದು ಮೋದಿ ಬಣ್ಣಿಸಿದರು. ಜನಸಂಘದ ಕಾಲದಿಂದಲೂ ಪಕ್ಷವನ್ನು ಕರಾವಳಿಯಲ್ಲಿ ಬೆಳೆಸಿದ ದಿವಂಗತ ಡಾ. ವಿ.ಎಸ್. ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಸ್ವಚ್ಛತಾ ಅಭಿಯಾನದಲ್ಲಿ ಉಡುಪಿ ಹಿಂದೆ ದೇಶಕ್ಕೆ ಮಾದರಿಯಾಗಿದ್ದನ್ನು ನೆನಪಿಸಿದರು.

ಪಂಚ ಸಂಕಲ್ಪಕ್ಕೆ ಕರೆ: ಕೊನೆಯಲ್ಲಿ ದೇಶವಾಸಿಗಳಿಗೆ ಕರೆ ನೀಡಿದ ಪ್ರಧಾನಿ, ಜಲ ಸಂರಕ್ಷಣೆ, ನದಿಗಳ ಉಳಿವಿಗೆ ಪಣ ತೊಡಬೇಕು ಎಂದರು. ‘ವೋಕಲ್ ಫಾರ್ ಲೋಕಲ್’ ಅಡಿಯಲ್ಲಿ ಸ್ವದೇಶಿ ವಸ್ತುಗಳನ್ನೇ ಬಳಸಬೇಕು, ರೈತರು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯತ್ತ ಹೊರಳಬೇಕು ಮತ್ತು ನಮ್ಮ ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸುವ ಕೆಲಸವಾಗಬೇಕು ಎಂದು ಮನವಿ ಮಾಡಿದರು. ವಿಕಸಿತ ಭಾರತದ ಕನಸು ನನಸಾಗಲು ಪ್ರತಿಯೊಬ್ಬರೂ ಈ ಸಂಕಲ್ಪಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.

Previous articleUGC ಆದೇಶ: ನಿಗದಿತ ವೇಳೆಗೆ ಪರೀಕ್ಷೆ – ಪ್ರಮಾಣಪತ್ರ ಕಡ್ಡಾಯ!
Next articleಸಚಿವ ಪ್ರೀಯಾಂಕ ಖರ್ಗೆ ಹೇಳಿಕೆ: ಕಾಂಗ್ರೆಸ್ ಹೈಕಮಾಂಡ್‌ಗೆ ‘ಸಮಯ ಪ್ರಜ್ಞೆ’ ಇದೆ, ಕರ್ನಾಟಕದ ವಿದ್ಯುತ್ ಬಿಕ್ಕಟ್ಟನ್ನು ಪರಿಹರಿಸುತ್ತೆ

LEAVE A REPLY

Please enter your comment!
Please enter your name here