ಉಡುಪಿ: ತೀವ್ರ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್ 108 ಸೇವೆ ಲಭಿಸದ ಹಿನ್ನೆಲೆಯಲ್ಲಿ ಗೂಡ್ಸ್ ಟೆಂಪೊದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಇಲ್ಲಿನ ಉದ್ಯಾವರದಲ್ಲಿ ನಡೆದಿದೆ.
ಭಾನುವಾರ ರಾತ್ರಿ ರೋಗಿಯೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲು 7ರಿಂದ 9.30 ಗಂಟೆ ವರೆಗೂ ಅಂಬ್ಯುಲೆನ್ಸ್ ಸಿಗದೆ ರೋಗಿ ಚಿಂತಾಜನಕ ಪರಿಸ್ಥಿತಿ ತಲುಪಿದಾಗ ನಿರ್ವಾಹವಿಲ್ಲದೇ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಗೂಡ್ಸ್ ಟೆಂಪೋದಲ್ಲಿ ಮಂಚವೊಂದನ್ನು ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದರು.
ರೋಗಿಯ ಕಡೆಯವರು ಅಂಬ್ಯುಲೆನ್ಸ್ 108ಕ್ಕೆ ಕರೆ ಮಾಡಿದಾಗ ಅಂಬ್ಯುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಅಂಬ್ಯುಲೆನ್ಸ್ ಗಳೂ ಲಭಿಸದ ಹಿನ್ನೆಲೆಯಲ್ಲಿ ರೋಗಿಯ ಕಡೆಯವರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು.
ವಿಶು ಶೆಟ್ಟಿ ಕೂಡಾ ಖಾಸಗಿ ಅಂಬ್ಯುಲೆನ್ಸ್ ಗೆ ಸಂಪರ್ಕಿಸಿದಾಗ ಸಿಗದೇ ಇರುವುದರಿಂದ ರೋಗಿಯ ಪರಿಸ್ಥಿತಿ ಗಮನಿಸಿ ಅನ್ಯ ಕಾಣದೆ ತನ್ನ ಗೂಡ್ಸ್ ಟೆಂಪೋಗೆ ಮಂಚ ಇರಿಸಿ ಅದರ ಮೂಲಕ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.ಕಳೆದ ಒಂದು ವರ್ಷದಿಂದ ಅಂಬ್ಯುಲೆನ್ಸ್ 108 ಸೇವೆ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ಅನೇಕ ರೋಗಿಗಳು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಘಟನೆಯಲ್ಲಿಯೂ ಸುಮಾರು ಎರಡೂವರೆ ಗಂಟೆ ಕಾಲ ಅಂಬ್ಯುಲೆನ್ಸ್ ಅಲಭ್ಯತೆಯಿಂದಾಗಿ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು.
ಇನ್ನಾದರೂ ಸರಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಹಕರಿಸುವಂತೆ ವಿನಂತಿಸಿದ್ದಾರೆ. ಸಾರ್ವಜನಿಕರ ಜೀವದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದವರು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಅಂಬ್ಯುಲೆನ್ಸ್ 108 ಸೇವೆಯ 18 ವಾಹನಗಳಿದ್ದರೂ ಸೇವೆಗೆ 6 ವಾಹನಗಳು ಮಾತ್ರ ಲಭಿಸುತ್ತವೆ ಎಂದು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.























