Home ನಮ್ಮ ಜಿಲ್ಲೆ ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ: 153 ದಿನ ಬೆಂಗಳೂರಲ್ಲಿ ನಿಲ್ದಾಣ ಬದಲಾವಣೆ

ಕರಾವಳಿ ರೈಲು ಪ್ರಯಾಣಿಕರ ಗಮನಕ್ಕೆ: 153 ದಿನ ಬೆಂಗಳೂರಲ್ಲಿ ನಿಲ್ದಾಣ ಬದಲಾವಣೆ

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಿಂದ ಕರಾವಳಿ ಕಡೆಗೆ ಸಂಚಾರ ನಡೆಸುವ ರೈಲು ಪ್ರಯಾಣಿಕರಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಹಲವು ರೈಲುಗಳ ನಿಲ್ದಾಣಗಳು 153 ದಿನಗಳ ಕಾಲ ಬದಲಾಗಲಿದೆ. ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ರೈಲು ನಿಲ್ದಾಣದಿಂದ ಹೊರಡುವ ರೈಲುಗಳ ನಿಲ್ದಾಣ ಬದಲಾವಣೆ ಮಾಡಲಾಗಿದೆ.

ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಹಲವು ರೈಲುಗಳ ನಿಲುಗಡೆ ಬದಲು, ನಿಲ್ದಾಣಗಳಲ್ಲಿ ಬದಲಾವಣೆ ಆಗಲಿದೆ. ರೈಲು ಪ್ರಯಾಣಿಕರು ಆಗಸ್ಟ್ 15ರಿಂದ ಈ ಕುರಿತು ಮಾಹಿತಿ ತಿಳಿದು ಸಂಚಾರ ನಡೆಸಬೇಕು ಎಂದು ಹೇಳಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ (ಕೆಎಸ್‌ಆರ್‌ ಬೆಂಗಳೂರು) ಯಾರ್ಡ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ನಡೆಯುತ್ತಿರುವುದರಿಂದ ಆಗಸ್ಟ್ 15 ರಿಂದ 2026ರ ಜನವರಿ 15ರ ತನಕ 153 ದಿನಗಳ ಕಾಲ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

ಈ ಅವಧಿಯಲ್ಲಿ ಕೆಎಸ್‌ಆರ್ ಬೆಂಗಳೂರು ಬದಲಾಗಿ ಹಲವು ರೈಲುಗಳು ಎಸ್‌ಎಂವಿಟಿ ಬೆಂಗಳೂರು ಮತ್ತು ಯಶವಂತಪುರ ನಿಲಾಣಗಳಿಂದ ಪ್ರಯಾಣವನ್ನು ಪ್ರಾರಂಭಿಸಲಿವೆ, ನಿಲುಗಡೆಗೊಳ್ಳಲಿವೆ. ಅಲ್ಲದೆ, ರೈಲುಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ.

ರೈಲುಗಳ ವಿವರ: ಆಗಸ್ಟ್ 15ರಿಂದ ಜನವರಿ 15, 2026 ತನ ಎರ್ನಾಕುಲಂನಿಂದ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್‌ಆರ್‌ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು, ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಲ್ಲಿ (ರಾತ್ರಿ 9:00) ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ರೈಲು ಕಾರ್ಮೆಲರಾಮ್, ಬೈಯಪ್ಪನಹಳ್ಳಿ, ಎಸ್‌ಎಂವಿಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಬೆಂಗಳೂರು ಕ್ಯಾಂಟ್ ಮತ್ತು ಕೆಎಸ್‌ಆರ್‌ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

ಆಗಸ್ಟ್ 16-ಜನವರಿ 16, 2026ರ ತನಕ ರೈಲು ಸಂಖ್ಯೆ 12677 ಕೆಎಸ್‌ಆರ್ ಬೆಂಗಳೂರು- ಎರ್ನಾಕುಲಂ ಡೈಲಿ ಎಕ್ಸ್‌ಪ್ರೆಸ್ ರೈಲು, ಕೆಎಸ್‌ಆರ್‌ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ (ಬೆಳಗ್ಗೆ 6:10) ತನ್ನ ಪ್ರಯಾಣ ಪ್ರಾರಂಭಿಸಲಿದೆ. ರೈಲು ಎಸ್‌ಎಂವಿಟಿ ಬೆಂಗಳೂರು, ಬೈಯಪ್ಪನಹಳ್ಳಿ ಮತ್ತು ಕಾರ್ಮೆಲರಾಮ್ ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕ್ಯಾಂಟ್ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ.

ಆಗಸ್ಟ್ 15-ಜನವರಿ 15, 2026ರ ತನಕ ನಾಂದೇಡ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16594 ನಾಂದೇಡ್-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಲ್ಲಿ (ಬೆಳಗ್ಗೆ 4:15) ತನ್ನ ಪ್ರಯಾಣ ಕೊನೆಗೊಳಿಸಲಿದೆ. ರೈಲು ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ ಮಾರ್ಗವಾಗಿ ಸಂಚರಿಸಲಿದ್ದು, ಬೆಂಗಳೂರು ಕ್ಯಾಂಟ್ ಮತ್ತು ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಲ್ಲಿ ನಿಲುಗಡೆ ಇಲ್ಲ.

ಆಗಸ್ಟ್ 16-ಜನವರಿ 16, 2026ರ ತನಕ ರೈಲು ಸಂಖ್ಯೆ 16593 ಕೆಎಸ್‌ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಯಶವಂತಪುರದಿಂದ (ರಾತ್ರಿ 11:15) ಪ್ರಯಾಣ ಆರಂಭಿಸಲಿದೆ. ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ ಮತ್ತು ಯಲಹಂಕ ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್‌ಆರ್ ಬೆಂಗಳೂರು ಮತ್ತು ಬೆಂಗಳೂರು ಕ್ಯಾಂಟ್ ನಿಲ್ದಾಣದಲ್ಲಿ ನಿಲುಗಡೆ ಇಲ್ಲ.

ಆಗಸ್ಟ್ 15-ಜನವರಿ 15, 2026ರ ತನಕ ಕಣ್ಣೂರಿನಿಂದ ಹೊರಡುವ ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರಿಗೆ ಬದಲಾಗಿ ಎಸ್‌ಎಂಐಟಿ ಬೆಂಗಳೂರಿನಲ್ಲಿ (ಬೆಳಗ್ಗೆ 7:45) ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ರೈಲು ಕುಣಿಗಲ್, ಚಿಕ್ಕಬಾಣಾವರ, ಯಶವಂತಪುರ, ಹೆಬ್ಬಾಳ, ಬಾಣಸವಾಡಿ ಮತ್ತು ಎಸ್‌ಎಂವಿಟಿ ಬೆಂಗಳೂರು ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್‌ಆರ್ ಬೆಂಗಳೂರಿನಲ್ಲಿ ನಿಲುಗಡೆ ಇಲ್ಲ.

ಆಗಸ್ಟ್ 16-ಜನವರಿ 16, 2026ರ ತನಕ ಹೊರಡುವ ರೈಲು ಸಂಖ್ಯೆ 16511 ಕೆಎಸ್‌ಆರ್‌ ಬೆಂಗಳೂರು-ಕಣ್ಣೂರು ಡೈಲಿ ಎಕ್ಸ್‌ಪ್ರೆಸ್, ಕೆಎಸ್‌ಆರ್‌ ಬೆಂಗಳೂರಿಗೆ ಬದಲಾಗಿ ಎಸ್‌ಎಂವಿಟಿ ಬೆಂಗಳೂರಿನಿಂದ (ರಾತ್ರಿ 8:00) ತನ್ನ ಪ್ರಯಾಣ ಪ್ರಾರಂಭಿಸಲಿದೆ. ಈ ರೈಲು ಎಸ್‌ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ, ಯಶವಂತಪುರ, ಚಿಕ್ಕಬಾಣಾವರ ಮತ್ತು ಕುಣಿಗಲ್ ಮಾರ್ಗವಾಗಿ ಸಂಚರಿಸಲಿದ್ದು, ಕೆಎಸ್‌ಆರ್‌ ಬೆಂಗಳೂರಲ್ಲಿ ನಿಲುಗಡೆ ಇಲ್ಲ.

ಮೆಜೆಸ್ಟಿಕ್ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಬೆಂಗಳೂರಿನಲ್ಲಿ ವಿವಿಧ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡಲಾಗಿದೆ. ಎಸ್‌ಎಂಐಟಿ ಬೆಂಗಳೂರು ಎಂದರೆ ಬೈಯ್ಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್. ಇಲ್ಲಿಂದ ನಗರಕ್ಕೆ ಆಗಮಿಸಲು ನಮ್ಮ ಮೆಟ್ರೋ, ಬಿಎಂಟಿಸಿ, ಕ್ಯಾಬ್ ಸೇವೆ ಲಭ್ಯವಿದೆ.

Exit mobile version