ಗ್ರಾಮೀಣ ಜನರ ಜೀನವಕ್ಕೆ ಆಸರೆಯಾದ ‘ನರೇಗಾ’ ಯೋಜನೆ

0
79

ಗ್ರಾಮೀಣ ಭಾಗದಲ್ಲಿ ‘ನರೇಗಾ’ ಯೋಜನೆ ಹಲವು ಕುಟುಂಬಗಳಿಗೆ ಆಧಾರವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕೆಳದಿ ಗ್ರಾಮದ ಶಿವಪ್ಪನಾಯಕರ ಕಾಲದಲ್ಲಿ ನಿರ್ಮಿಸಿದ್ದರೆನ್ನಲಾದ ಅತ್ಯಂತ ದೊಡ್ಡದಾದ ಹಿರೆಕೆರೆಯ ಹೂಳೆತ್ತುವ ಕಾಮಗಾರಿಯನ್ನು ಯೋಜನೆಯಡಿ ಕೈಗೊಳ್ಳುವ ಮೂಲಕ ಮಳೆಗಾಲದಲ್ಲಿ ಕೆರೆ ತುಂಬಲು ಮತ್ತು ಸುತ್ತಮುತ್ತಲ ಜಮೀನುಗಳಿಗೆ ಬೇಸಿಗೆ ಬೆಳೆಗೆ ಅನುಕೂಲ ಮಾಡಿಕೊಟ್ಟಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ಇದು ವಿವಿಧ ಕಾಮಗಾರಿಗಳ ಮೂಲಕ ಉದ್ಯೋಗ ಖಾತ್ರಿ ಪಡಿಸುವ ಮೂಲಕ ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕೆ ಆಸರೆಯಾಗಿದ್ದು, ಬದುಕು ಹಸನುಗೊಳಿಸುತ್ತಾ ಬಂದಿದೆ. ಸಾಗರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಕೆರೆಗಳನ್ನು ಹೂಳು ತೆಗೆದು ಕೆರೆ ಅಭಿವೃದ್ದಿಪಡಿಸುವ ಮೂಲಕ ಸುತ್ತಮುತ್ತಲಿನ ಜಮೀನುಗಳಿಗೆ ನೀರು ಒದಗಿಸಲು ಸಾಧ್ಯವಾಗಿಸಿದೆ ‘ನರೇಗಾ’.

ಕೆಳದಿ ಗ್ರಾಮದಲ್ಲಿ ಶಿವಪ್ಪನಾಯಕನ ಆಡಳಿತ ಅವಧಿಯಲ್ಲಿ ನಿರ್ಮಾಣವಾಗಿರುವ ಹಿರೆಕೆರೆ ಅತ್ಯಂತ ದೊಡ್ಡ ಕೆರೆಯಾಗಿದೆ. ಈ ಕೆರೆಯು ಸುಮಾರು 150 ಎಕರೆಯಷ್ಟು ವಿಸ್ತಿರ್ಣ ಹೊಂದಿದೆ. ಸುತ್ತಲೂ ಸುಮಾರು 200 ಎಕರೆ ಜಮೀನಿಗೆ ಈ ಕೆರೆಯ ನೀರು ಮೂಲವಾಗಿದೆ. ಈ ಕೆರೆಯಿಂದ ಕೆಳಭಾಗದಲ್ಲಿರುವ ಸಾಕಷ್ಟು ಜಮೀನುಗಳು ಕೃಷಿಗೆ ಈ ನೀರನ್ನು ಬಳಸುತ್ತಾರೆ.

ಇಲ್ಲಿನ ಬಹುತೇಕ ಜಮೀನಿನಲ್ಲಿ ಭತ್ತ ಮತ್ತು ಅಡಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಹಿರೆಕೆರೆಯಿಂದ ಬರುವ ನೀರು ಮತ್ತು ಈ ಗ್ರಾಮದಲ್ಲಿರುವ ಕಾಲುವೆ ಅಕ್ಕಪಕ್ಕದ ಜಮೀನುಗಳಿಂದ ಬರುವ ನೀರು ಸಹ ಕಾಲುವೆ ಮೂಲಕ ಹರಿದು ಮುಂದೆ ನದಿ ಸೇರುತ್ತದೆ. ಆದರೆ ಕಾಲುವೆ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ಬರುವ ನೀರು ಸುತ್ತಲೂ ಇರುವ ಜಮೀನು ಮತ್ತು ತೋಟಗಳಿಗೆ ನುಗ್ಗಿ ಸಾಕಷ್ಟು ಹಾನಿಯುಂಟು ಮಾಡಿದ್ದು, ಇದರಿಂದ ಅಲ್ಲಿನ ರೈತರು ಕಂಗೆಟ್ಟಿದ್ದರು.

‘ನರೇಗಾ’ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾರ್ಯವನ್ನು ಕೈಗೊಂಡಿದ್ದು, ಇದರಿಂದ ಸುಮಾರು 200 ಎಕರೆಯಷ್ಟು ಜಮೀನುಗಳಿಗೆ ಬೇಸಿಗೆ ಅವಧಿಯಲ್ಲಿ ನೀರು ಜಮೀನುಗಳಿಗೆ ಸರಾಗವಾಗಿ ಹರಿದು ಹೋಗಲು ಅನುಕೂಲಕರವಾಗಿದೆ ಹಾಗೂ ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ಕಾಲುವೆ ತುಂಬಿ ತೋಟ, ಗದ್ದೆಗಳಿಗೆ ನೀರು ನುಗ್ಗಿ ಗಿಡಗಳಿಗೆ ಹಾಕಿರುವ ಗೊಬ್ಬರ ಮತ್ತು ಮಣ್ಣನ್ನು ಕೊಚ್ಚಿಕೊಂಡು ಹೋಗುವ ಸಮಸ್ಯೆ ತಪ್ಪಿದೆ.

ಈ ಕುರಿತು ಮಾನಾಡಿದ ರೈತ ನಾರಾಯಣಪ್ಪ, “ಪ್ರತಿ ವರ್ಷ ಮಳೆಗಾಲ ಬಂದಾಗ ಜಮಿನುಗಳಲ್ಲಿರುವ ಬೆಳೆಗಳಿಗೆ ಯಾವ ರೀತಿ ಹಾನಿಯಾಗುತ್ತದೆ ಮತ್ತು ಏನು ನಷ್ಟ ಉಂಟು ಮಾಡುತ್ತದೆ ಎಂಬ ಭಯದಿಂದ ಕಾಲ ಕಳೆಯುತ್ತಿದ್ದೆವು. ಆದರೆ ಈ ವರ್ಷ ಕಾಲುವೆ ಹೂಳೆತ್ತಿ ಅಭಿವೃದ್ದಿಪಡಿಸಿರುವುದರಿಂದ ಚಿಂತೆ ಇಲ್ಲದೇ ಇದ್ದೇವೆ” ಎಂದು ಹೇಳಿದರು.

ಮಾಸೂರಿನಲ್ಲಿ ನೆಡುತೋಪುಗಳು: ‘ನರೇಗಾ’ ಯೋಜನೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಮಾಸೂರಿನ ರಸ್ತೆ ಬದಿಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳ ಸುತ್ತಲೂ ಗಿಡಗಳನ್ನು ನೆಟ್ಟು, ಬೆಳೆಸಿ ಪೋಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯೋಜನೆಯನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡಿರುವ ಸಾಮಾಜಿಕ ಅರಣ್ಯ ಇಲಾಖೆಯು 1000 ಗಿಡಗಳನ್ನು ಈ ಭಾಗದಲ್ಲಿ ನೆಟ್ಟಿದ್ದು, ಈ ಕಾಮಗಾರಿಯಲ್ಲಿ ಅಂದಾಜು ರೂ. 5 ಲಕ್ಷ ಮೊತ್ತದಲ್ಲಿ 892 ಮಾನವ ದಿನಗಳನ್ನು ಸೃಜನೆ ಮಾಡಿಕೊಡಲಾಗಿದೆ.

ಅರಣ್ಯ ಇಲಾಖೆಯು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಡುವ ಮೂಲಕ ಸಾರ್ವಜನಿಕರಿಗೆ, ಪ್ರಾಣಿ, ಪಕ್ಷಿಗಳಿಗೆ ಹಣ್ಣು, ಆಹಾರ ಮತ್ತು ಆಶ್ರಯ ನಿಡಲು ಸಹಾಯಕವಾಗಿರುತ್ತವೆ. ಈ ರೀತಿಯಾಗಿ ಅರಣ್ಯ ಪ್ರದೇಶಗಳನ್ನು ಅಭಿವೃದ್ದಿ ಮಾಡುವುದರಿಂದ ಮುಂದಿನ ಪೀಳಿಗೆಗಾಗಿ ಕಾಡನ್ನು ಬೆಳೆಸಲು ಮತ್ತು ಉಳಿಸಿಕೊಳ್ಳಲು ಸಹಕಾರಿಯಾಗಿದೆ.

2024-25ನೇ ಸಾಲಿನಲ್ಲಿ ಕೆಳದಿ ಗ್ರಾಮ ಪಂಚಾಯಿತಿಯಲ್ಲಿ ಅಂದಾಜು ಮೊತ್ತ ರೂ. 3.00 ಲಕ್ಷ ಮೊತ್ತದಲ್ಲಿ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಂಡಿದ್ದು, 750 ಮಾನವ ದಿನಗಳನ್ನು ಸೃಜಸಿ, ಒಟ್ಟು ರೂ. 2.74 ಲಕ್ಷ ವೆಚ್ಚ ಮಾಡಲಾಗಿದೆ. ಸಾಗರ ತಾಲ್ಲೂಕಿನ ಕೆಳದಿ, ಮಾಸೂರು ಹಾಗೂ ಇತರೆಡೆ ನರೇಗಾ ಯೋಜನೆಯು ಯಶಸ್ವಿಯಾಗಿ ನಡೆಯುತ್ತಿದ್ದು, ಅಲ್ಲಿನ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುತ್ತಾ ಬಂದಿದೆ. 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಿಂದ ಕಾಲುವೆ, ನೆಡುತೋಪು ಕಾಮಗಾರಿಗಳನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಾಡಕಲಸಿ ಗ್ರಾಮ ಪಂಚಾಯಿತಿಯು ಸಾಗರ ತಾಲ್ಲೂಕು ಕೇಂದ್ರದಿಂದ 10 ಕೀ.ಮೀ ದೂರವಿದೆ. ಭೌಗೋಳಿಕವಾಗಿ ಸಾಕಷ್ಟು ಚದುರಿದ ವಿಸ್ತೀರ್ಣ ಹೊಂದಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಕೆರೆಗಳಿದ್ದು, ಈ ಕೆರೆಗಳಿಂದ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ನರೇಗಾ ಯೋಜನೆಯ ಮೂಲಕ ಕಾಲುವೆ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಲಾಗಿದೆ.

ಈ ಕುರಿತು ಮಾತನಾಡಿದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಹೇಮಂತ್ ಎನ್‌., “ನರೇಗಾ ಯೋಜನೆ ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ, ಕಾಲುವೆ ನಿರ್ಮಾಣ ಸೇರಿದಂತೆ ಗ್ರಾಮೀಣ ಭಾಗದ ಜನ ಜೀವನ ಸುಗಮಗೊಳಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರವಾಹ, ಬರದಂತಹ ಪ್ರಾಕೃತಿಕ ವಿಕೋಪ ಸಂಭವಿಸಿ, ಘೋಷಣೆಯಾದ ಪ್ರದೇಶಗಳಲ್ಲಿ 150 ಮಾನವ ದಿನಗಳನ್ನು ಸೃಜಿಸಲಾಗುತ್ತದೆ. ಪ್ರಸ್ತುತ ಪ್ರತಿ ಕಾರ್ಮಿಕರಿಗೆ ದಿನವೊಂದಕ್ಕೆ ರೂ.370 ಕೂಲಿ ಪಾವತಿ ಮಾಡಲಾಗುತ್ತಿದೆ” ಎಂದು ಹೇಳಿದ್ದಾರೆ.

ಲೇಖನ
ಆಕಾಶ್.ಆರ್‌.ಎಸ್.
ಪ್ರಶಿಕ್ಷಾಣಾರ್ಥಿ, ವಾರ್ತಾ ಇಲಾಖೆ

Previous article“ಮಾರುತ” ಚಿತ್ರದ “ನಮ್ಮಮ್ಮ ಸವದತ್ತಿ ಎಲ್ಲಮ್ಮ” ಹಾಡು ಬಿಡುಗಡೆ
Next articleಕಾಂತಾರ ಚಾಪ್ಟರ್-1: ಅಡ್ವಾನ್ಸ್ ಬುಕ್ಕಿಂಗ್‌ಗೆ ಮುಹೂರ್ತ ಫಿಕ್ಸ್, ಇಲ್ಲಿದೆ ಸಂಪೂರ್ಣ ಮಾಹಿತಿ

LEAVE A REPLY

Please enter your comment!
Please enter your name here