ಇಂದಿನ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟವಾದ ಡಾ. ವಿಜೇಂದ್ರಕುಮಾರ್ ಎಸ್ ಕೆ ಅವರ ಅಂಕಣ
ಪ್ರಾಚೀನ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಬಿಟ್ಟರೆ ಹೆಚ್ಚು ಪ್ರಸಿದ್ಧವಾದುದು ಪಂಚತಂತ್ರದ ಕಥೆಗಳು. ಕೆಲವು ವಿದ್ವಾಂಸರ ಪ್ರಕಾರ ಈ ಕಥೆಗಳು ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದು, ಪರಂಪರೆಯಲ್ಲಿ ಪ್ರಚಲಿತವಿದ್ದ, ಮೌಖಿಕವಾದ ಈ ಕಥೆಗಳಿಗೆ, `ನೀತಿಶಾಸ್ತ್ರಕ್ಕೆ’ ಒಂದು ಚೌಕಟ್ಟನ್ನು, ಸ್ವರೂಪವನ್ನು ಒದಗಿಸಿಕೊಟ್ಟವನು ವಿಷ್ಣು ಶರ್ಮ ಎಂಬ ಬ್ರಾಹ್ಮಣ. ಈ ಕಥೆಗಳನ್ನು ಕಣ್ಣರಳಿಸಿ ಕೇಳಿರದ, ಇಷ್ಟಪಟ್ಟು ಓದಿರದ ಶಿಕ್ಷಿತ ಮಕ್ಕಳುಗಳೇ ಇಲ್ಲವೆಂದರೂ ತಪ್ಪಾಗಲಾರದು. ಆದರೆ ಪಂಚತಂತ್ರವನ್ನು ಕೇವಲ ಮನೆರಂಜನೆಗಾಗಿರುವ, ನೀತಿ ಬೋಧಕವಾದ ಕಥೆಗಳೆಂದು ಕರೆದರೆ ಅದು, ಪಂಚತಂತ್ರಕ್ಕೆ, ಆ ಮೂಲಕ ಅದು ಪ್ರತಿಪಾದಿಸಿದ ಲಕ್ಷಣಗಳಿಗೆ ಅವಮಾನ. ಅದೆಲ್ಲವನ್ನೂ ಗಮನಿಸಿ ನಿಷ್ಕರ್ಷಿಸುವುದು ಈ ಲೇಖನದ ಉದ್ದೇಶ.
ಮಹಿಳಾರೋಪ್ಯದ ರಾಜನಾದ ಅಮರಶಕ್ತಿಯ ಆಸ್ಥಾನಕ್ಕೆ ಅವನ ಮಂತ್ರಿಗಳು ವಿಷ್ಣುಶರ್ಮನನ್ನು ಕರೆಸಿದಾಗ, ಆ ರಾಜಕುಮಾರರನ್ನು “ಪ್ರಾಯೋಗಿಕ ಜೀವನ ಕಲೆಯನ್ನು ಕಲಿಸಿ, ಅವರನ್ನು ಹೋಲಿಕೆಯಿಲ್ಲದ ಮಾಸ್ಟರ್ಸ್ಗಳನ್ನಾಗಿ ಮಾಡಬೇಕು” ಎಂದು ಕೇಳಿದಾಗ, ವಿಷ್ಣುಶರ್ಮ ಸ್ಥಿರವಾಗಿ ನಿಂತಿದ್ದನು. ಸಹಾಯವನ್ನು ಕೇಳಿದವನು ಮಹಾರಾಜ, ಪ್ರಜೆಯಾಗಿ ಅವನ ಕೋರಿಕೆಗೆ ಇಲ್ಲವೆನ್ನಲಾಗುವುದಿಲ್ಲ, ಕೋರಿಕೆಯು ಕೂಡ ಲೋಭದ, ಮೋಹದ ಅತಿರೇಕವಾಗಿರಲಿಲ್ಲ. ಅವರನ್ನು ವಿಧೇಯ ವಿದ್ಯಾರ್ಥಿಗಳನ್ನಾಗಿಸಿ, ರಾಜ್ಯಕ್ಕೆ ಸಮರ್ಥರಾದ ಉತ್ತರಾಧಿಕಾರಿಗಳನ್ನಾಗಿ ಮಾಡಬೇಕಿತ್ತು. ಅದಾವುದೂ ಆಗದಿದ್ದರೆ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಲು ಸಿದ್ಧನಾಗಬೇಕಾಗಿತ್ತು.
ಸಾಮಾನ್ಯರು ರಾಜನಿಗೆ ಒಂದು ಮಾತನ್ನು ಹೇಳಲು ಅಥವಾ ತಾರ್ಕಿಕ ವಿವರಣೆಯ ಮೂಲಕ ರಾಜನಿಗೆ ಅರ್ಥಮಾಡಿಸುವುದು ಕಷ್ಟಸಾಧ್ಯ. ಆದರೆ ಅಲ್ಲಿ ನಿಂತಿದ್ದವನು ಎಂಬತ್ತನಾಲ್ಕು ವರ್ಷದ, ಐಹಿಕ ಭೋಗಗಳಿಗೆ ವಿಮುಖನಾಗಿದ್ದ ವಿಷ್ಣುಶರ್ಮ. ರಾಜಾಜ್ಞೆಯನ್ನು ಎದುರಿಸಲು, ನೂರು ಗ್ರಾಮಗಳ ದೇಣಿಗೆಯನ್ನು ನಯವಾಗಿ ನೈತಿಕ ಕಾರಣಕೊಟ್ಟು ತಿರಸ್ಕರಿಸಿ, ನಿರೀಕ್ಷಿಸಿದ ಸಕಾರಾತ್ಮಕ ಫಲವನ್ನು ಪಡೆಯಲಾಗದಿದ್ದರೆ, ಅಂದರೆ ಮಹಾರಾಜನ ಮಕ್ಕಳನ್ನು ಪರಿವರ್ತಿಸಲಾಗದಿದ್ದರೆ, ತಾನು ಏನು ಮಾಡುತ್ತೇನೆಂದು, ತನ್ನ ಹೆಸರನ್ನು, ಆ ಮೂಲಕ ಬ್ರಾಹ್ಮಣ್ಯದ ಗುರುತನ್ನು ಬದಲಿಸಿಕೊಳ್ಳುತ್ತೇನೆಂದು ಸಿಂಹ ಘರ್ಜನೆಯಲ್ಲಿ ತಿಳಿಸುತ್ತಾನೆ. ವಿಷ್ಣು ಶರ್ಮನ ಪ್ರತಿಜ್ಞೆಯು ಕ್ಷಾತ್ರ ಶಿಕ್ಷೆಯಾಗಿರದೇ ಬ್ರಾಹ್ಮಣ್ಯಕ್ಕೆ ಶಿಕ್ಷೆಯಾಗಿರುತ್ತದೆ, ಅವನಲ್ಲಿನ ಗುರುತ್ವಕ್ಕೆ ಸವಾಲಾಗಿರುತ್ತದೆ.
ಹಾಗೆಯೇ, ಆ ವಿಷಮ ಪರಿಸ್ಥಿತಿಯಲ್ಲಿ ರಾಜಾಸ್ಥಾನದಲ್ಲಿ, ರಾಜನಿಗಿಂತ ಸ್ವಯಂ ನಿಯಂತ್ರಣದಲ್ಲಿ, ಸೂಕ್ಷ್ಮ ವಿಚಾರವನ್ನು ಎದುರಿಗಿರುವ ಅಸಾಮಾನ್ಯ ವ್ಯಕ್ತಿಗಿಂತ ವಿಷ್ಣು ಶರ್ಮ ನಿರ್ವಹಿಸುವ ವಿಧಾನವು ಅನನ್ಯವಾದದ್ದು, ಅದು ಕೇವಲ ಸಾಮಾನ್ಯ ಗುರುಗಳಿಂದ ಆಗುವುದಲ್ಲ, ತನ್ನನ್ನು ಅರಿತುಕೊಂಡಿರುವ ಮತ್ತು ಇತರರಲ್ಲಿನ ಉತ್ತಮ ಸಂಗತಿಗಳನ್ನು ಗುರುತಿಸಿ, ಪೋಷಿಸಿ, ಔನ್ನತ್ಯಕ್ಕೇರಿಸುವ ವ್ಯಕ್ತಿಯದ್ದು.
ಅಲ್ಲಿ, ವಿಷ್ಣು ಶರ್ಮ ತನ್ನ ಸಂವಹನದಲ್ಲಿ ಉಪಯೋಗಿಸಿರುವುದು ಜೀವನ ಕೌಶಲ್ಯದ ಅಂಶಗಳನ್ನು; ಸ್ವಯಂ ಅರಿವು, ಭಾವನೆಗಳನ್ನು ನಿರ್ವಹಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಮಸ್ಯೆ-ಪರಿಹರಿಸುವುದು ಮತ್ತು ನಿಯಂತ್ರಣದಲ್ಲಿಲ್ಲದ ಅಸ್ತಿತ್ವದಲ್ಲಿರುವ ಸಮಸ್ಯೆಗೆ ಸೃಜನಶೀಲ ಚಿಂತನೆ ಮತ್ತು ಪರಿಹಾರವನ್ನು ಕಂಡುಕೊಳ್ಳುವುದು. ವ್ಯವಹಾರದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವ ರೀತಿಯಲ್ಲಿ ಸವಾಲನ್ನು ಘೋಷಿಸುವುದೂ ಸಂವಹನವನ್ನು ಗೆಲ್ಲಲು ಬಳಸುವ ಮತ್ತೊಂದು ಅತ್ಯುತ್ತಮ ತಂತ್ರ.
ವಿಷ್ಣುಶರ್ಮನ ಆರಂಭಿಕ ವಾಕ್ಯಗಳಲ್ಲಿ ಬಂದಿರುವ ಶಿಕ್ಷಣವನ್ನು ಮಾರಾಟ ಮಾಡುವುದಿಲ್ಲ ಎಂಬ ಹೇಳಿಕೆ. ಇದು ಎದುರಾಳಿಯ ಹೃದಯವನ್ನು ಗೆಲ್ಲಲು ಒಂದು ಮೌಲ್ಯಯುತವಾದ ಹೇಳಿಕೆಯಾಗಿದೆ. ಸಮಸ್ಯೆಯನ್ನು ಪರಿಹರಿಸುವಲ್ಲಿ ನೈತಿಕವಾಗಿರಬೇಕಾದ ಮೌಲ್ಯ. ಈ ಹೇಳಿಕೆಯ ಮೂಲಕ ಸಂವಹನವನ್ನು ಕೊನೆಗೊಳಿಸಬಹುದಿತ್ತು, ಹಾಗೆ ಮಾಡದೇ, ಪರಿಣಾಮಕಾರಿ ಸಂವಹನದ ಮೂಲಕ, ನಿರ್ಧಿಷ್ಟ ದಿನಗಳೊಳಗಾಗಿ ಸಮಸ್ಯೆ-ಪರಿಹರಿಸುವ ಸವಾಲನ್ನು ಹಾಕುವುದರೊಂದಿಗೆ ತನ್ನ ವ್ಯವಹಾರವನ್ನು ಕೊನೆಗೊಳಿಸುವ ಚಾತುರ್ಯವು ವಿಷ್ಣು ಶರ್ಮನಂತಹ ಸಮರ್ಥ ಗುರುಗಳಿಂದ ಮಾತ್ರ ಸಾಧ್ಯ. ವಿಷ್ಣು ಶರ್ಮ ಕೇವಲ ಕಲಿಸುವ ಗುರುವಾಗಿರದೆ ತಾನು ಕಲಿಸುವ ಕೌಶಲ್ಯಕ್ಕೆ ಮಾದರಿ ವ್ಯಕ್ತಿಯಾಗುತ್ತಾನೆ.
ರಾಜಕುಮಾರರು ಪ್ರಾಯೋಗಿಕ ಜೀವನವನ್ನು ಕರಗತ ಮಾಡಿಕೊಳ್ಳುವ ಕಲೆಯನ್ನು ಕಲಿತಂತೆ ಪರಿಚಯವು ಕೊನೆಗೊಳ್ಳುತ್ತದೆ. ಇದು ವಿಷ್ಣುಶರ್ಮನ ಪ್ರಯೋಗದ ಸಕಾರಾತ್ಮಕ ಫಲಿತಾಂಶವಾಗಿದೆ. ರಾಜಕುಮಾರರು ತಮ್ಮ ಹಿಂದಿನ ಸ್ಥಿತಿಯಿಂದ ಪ್ರಾಯೋಗಿಕ ಜೀವನದ ಕಲೆಯ ಅಥವಾ ಜೀವನದ ಬುದ್ಧಿವಂತ ನಡವಳಿಕೆಯ ಮಾಸ್ಟರ್‌ಗಳಾದರು ಎಂದು ನಾವು ಹೇಳಬಹುದು. ಪಂಚತಂತ್ರವು ರಾಜಕುಮಾರರ ಸಮಸ್ಯೆಯನ್ನು ಸ್ಪಷ್ಟವಾಗಿ ಹೇಳದಿದ್ದರೂ ವಿವರಣೆಯಿಂದ ನಾವು ಗಮನಿಸಬೇಕಾಗಿರುವುದು ಆ ರಾಜಕುಮಾರರು ಹದಿಹರೆಯದಲ್ಲಿ ಕಂಡುಬರುವ ವಿದ್ಯಾ ವಿರೋಧಿ ಭಾವನೆಗಳು, ಭಾವನಾತ್ಮಕ ಸಂಘರ್ಷಗಳಿಂದ ಬಳಲುತ್ತಿದ್ದರು ಅಥವಾ ಸೌಮ್ಯ ಮಾನಸಿಕ ಕುಂಠಿತರಾಗಿದ್ದರು. ರಾಜನು ಅವರು ಶಿಕ್ಷಣಕ್ಕೆ ಪ್ರತಿಕೂಲರು ಎಂಬ ಪದವನ್ನು ಬಳಸಿರುವುದೂ ಅದನ್ನೇ ಸೂಚಿಸುತ್ತದೆ.
ಇಲ್ಲಿ ಗಮನಿಸಬೇಕಾದ ಒಂದು ಕುತೂಹಲಕಾರಿ ಅಂಶವೆಂದರೆ ವಿಷ್ಣುಶರ್ಮನು ಸರಳವಾದ, ಆದರೆ ಅಮೂರ್ತವಾದ ಮತ್ತು ಉನ್ನತ ಮಟ್ಟದ ಜ್ಞಾನ ಮತ್ತು ಬುದ್ಧಿವಂತಿಕೆಯ ಅಗತ್ಯವಿರುವ ಅನೇಕ ಗಾದೆಗಳು ಮತ್ತು ಹೇಳಿಕೆಗಳನ್ನು ಬಳಸಿದ್ದಾನೆ, ಇವುಗಳನ್ನು ಬುದ್ಧಿಮಾಂದ್ಯ ಜನರು ಅರ್ಥಮಾಡಿಕೊಳ್ಳಲು ಸಮರ್ಥರಾಗಿರುವುದಿಲ್ಲ. ಇದೆಲ್ಲದರಿಂದ ನಮಗೆ ಅರ್ಥವಾಗುವ ಅಂಶವೇನೆಂದರೆ ಪಂಚತಂತ್ರವು ರಾತ್ರಿ ಮಲಗುವ ವೇಳೆ ಮಕ್ಕಳಿಗೆ ಹೇಳುವ ಕಥೆಗಳಾಗಿರದೆ ಮನೋಚಿಕಿತ್ಸೆಯ ಸಿದ್ಧಾಂತವಾಗಿ, ಜೀವನ ಕೌಶಲ್ಯ ಕಲಿಸುವ ಕೈಪಿಡಿಯಾಗಿರುತ್ತದೆ. ಅಂದರೆ ಆಧುನಿಕ ಮನೋವಿಜ್ಞಾನ, ಮನೋಚಿಕಿತ್ಸಕ ಪದ್ಧತಿಗಳು ಕಣ್ಣು ಬಿಡುವ ಮುನ್ನವೇ ಪ್ರಾಚೀನ ಭಾರತದಲ್ಲಿ ಆಧುನಿಕ ಕಾಲಕ್ಕೂ ಸಕಾಲಿಕವಾಗುವ ಪದ್ಧತಿಯೊಂದಿತ್ತು, ಮತ್ತು ಅಂತಹ ಪದ್ಧತಿಯೊಂದನ್ನು ನಮಗೆ ಸಂಪಾದಿಸಿ ಕೊಟ್ಟ ಗುರುವನ್ನುಗುರು ಪೂರ್ಣಿಮೆಯ ಈ ಹೊತ್ತಿನಲ್ಲಿ ಸ್ಮರಿಸಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಎನ್ನುವುದು ನಮ್ಮ ಇಂಗಿತ.
(ಅರ್ಥರ್ ರೈಡರ್ ಎಂಬ ಲೇಖಕರ The Panchatantra (1949) ಕೃತಿಯ ಆಧಾರದ ಮೇಲೆ ಬರೆದಿರುವ ಲೇಖನ)