ಹಾಸನ: ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದ ಹಾಸನದ ಮಾಜಿ ಸಂಸದ, ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಕೋರ್ಟ್ ಶುಕ್ರವಾರ ತೀರ್ಪು ನೀಡಿತ್ತು.
ಬೆಂಗಳೂರು ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಶನಿವಾರ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ಪ್ರಜ್ವಲ್ ರೇವಣ್ಣ 4 ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿ. ಸದ್ಯ ಒಂದು ಕೇಸಿನ ವಿಚಾರಣೆ ಮುಗಿದು ತೀರ್ಪು ಬಂದಿದೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ಮೂಲದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಅದರ ವಿಡಿಯೋ ಮಾಡಿಕೊಂಡ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಶಿಕ್ಷೆಯನ್ನು ಪ್ರಕಟಿಸಿದರು.
ಜೀವಾವಧಿ ಶಿಕ್ಷೆ: ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಐಪಿಸಿ ಸೆಕ್ಷನ್ 376 (2) (ಕೆ) ಅಡಿ ಗರಿಷ್ಠ ವರ್ಷದ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡವನ್ನು ವಿಧಿಸಿದೆ.
ಅಪರಾಧಿ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಯ ಜೊತೆಗೆ ಅತ್ಯಾಚಾರ ಪ್ರಕರಣದಲ್ಲಿ ಎರಡು ಸೆಕ್ಷನ್‌ಗಳಡಿ 10 ಲಕ್ಷ ರೂ. ದಂಡವನ್ನು ಪಾವತಿಸಬೇಕು. ಸಂತ್ರಸ್ತ ಮಹಿಳೆಗೆ 7 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕೋರ್ಟ್ ಆದೇಶ ನೀಡುವಾಗ ಪ್ರಜ್ವಲ್ ರೇವಣ್ಣ ನ್ಯಾಯಾಧೀಶರ ಮುಂದೆ ಕೈ ಕಟ್ಟಿ ನಿಂತಿದ್ದರು. ಶನಿವಾರ ಬೆಳಗ್ಗೆ ಶಿಕ್ಷೆ ಪ್ರಮಾಣದ ವಾದ-ವಿವಾದ ನಡೆಯುವಾಗ ಪ್ರಜ್ವಲ್ ಕೋರ್ಟ್ ಹಾಲ್‌ನಲ್ಲಿ ಕಣ್ಣೀರು ಹಾಕಿದ್ದರು.
ಬೆಳಗ್ಗೆ ಕೋರ್ಟ್‌ನಲ್ಲಿ ಶಿಕ್ಷೆಯ ಕುರಿತು ವಾದ-ಪ್ರತಿವಾದ ನಡೆಯುವಾಗ ಎಸ್‌ಪಿಪಿ ಸಂಸದರಾಗಿ ಆಯ್ಕೆಯಾದ ವ್ಯಕ್ತಿ ಇಂತಹ ಕೃತ್ಯ ಎಸಗಿದ್ದಾರೆ. ಅವರು ಜನರಿಂದ ಆಯ್ಕೆಯಾಗಿದ್ದು ಏಕೆ?, ಮಾಡಿರುವ ಕೃತ್ಯ ಎಂಥಹದ್ದು?. ಶಿಕ್ಷೆಯ ಪ್ರಮಾಣ ಸಮಾಜಕ್ಕೆ ಒಂದು ಸಂದೇಶವಾಗಬೇಕಿದೆ. ಆದ್ದರಿಂದ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಪ್ರಬಲವಾಗಿ ವಾದ ಮಂಡಿಸಿದರು.
ಕೋರ್ಟ್ ಪ್ರಜ್ವಲ್ ರೇವಣ್ಣ ಬಂಧನವಾದ ದಿನದಿಂದ ಇಲ್ಲಿಯ ತನಕ ಜೈಲಿನಲ್ಲಿ ಇದ್ದ ಅವಧಿ ಶಿಕ್ಷೆಯ ಪ್ರಮಾಣದಲ್ಲಿ ಸೇರ್ಪಡೆ ಆಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದೇಶದ ಪ್ರತಿಯನ್ನು ಅಪರಾಧಿಗೆ, ಅವರ ಪರ ವಕೀಲರಿಗೆ ನೀಡಬೇಕು ಎಂದು ಹೇಳಿದೆ.
ಶಿಕ್ಷೆಯ ಕುರಿತು ವಾದ-ಪ್ರತಿವಾದ ನಡೆಯುವಾಗ ಸಂಸದನಾಗಿ ನಾನು ಜಿಲ್ಲೆಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ. ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಧೀಶರ ಆದೇಶಕ್ಕೆ ತಲೆಬಾಗುತ್ತೇನೆ.
ನಾನು ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದರೆ ಆಕೆಯ ಸಹೋದರಿ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ?. ನಾನು ಕಳೆದ 6 ತಿಂಗಳಿನಿಂದ ಅಪ್ಪ-ಅಮ್ಮನ ಮುಖ ನೋಡಿಲ್ಲ. ಶಿಕ್ಷೆ ನೀಡುವಾಗ ನನ್ನ ಕುಟುಂಬವನ್ನು ಪರಿಗಣಿಸಿ ಎಂದು ಮನವಿ ಮಾಡಿದರು.
ಶಿಕ್ಷೆ ಪ್ರಮಾಣದ ಕುರಿತು ಸರ್ಕಾರದ ಪರವಾಗಿ ಎನ್. ಜಗದೀಶ್, ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರವಾಗಿ ವಕೀಲ ಅರುಣ್ ಜಿ., ಹಿರಿಯ ವಕೀಲೆ ನಳಿನಾ ಮಾಯಾಗೌಡ ವಾದ ಮಂಡಿಸಿದರು. ನಾನು ಕಾಲೇಜಿನಲ್ಲಿ ಮೆರಿಟ್ ವಿದ್ಯಾರ್ಥಿ. ರಾಜಕೀಯವಾಗಿ ಬೇಗ ಬೆಳೆದದ್ದು ನಾನು ಮಾಡಿದ ತಪ್ಪು ಎಂದು ಕೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ಹೇಳಿದರು.