ಬಳ್ಳಾರಿಗೆ ರಾಹುಲ್ ಕೊಟ್ಟಿದ್ದ ಭರವಸೆ: 5 ಸಾವಿರ ಕೋಟಿ ಯೋಜನೆಗೆ ಶಂಕು ಸ್ಥಾಪನೆ

0
59

ಬಳ್ಳಾರಿಯಲ್ಲಿ ಬೃಹತ್ ಯೋಜನೆಯೊಂದಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶಂಕು ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಈ ಕುರಿತು ಮಲ್ಲಿಕಾರ್ಜುನ ಚಿಲ್ಕರಾಗಿ ಬರೆದಿರುವ ವಿಶೇಷ ಲೇಖನ ಇಲ್ಲಿದೆ.

ಬಳ್ಳಾರಿ: ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಲ್ಯಾಣ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಭರವಸೆಯೊಂದನ್ನು ನೀಡಿದ್ದರು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಈ ಭರವಸೆ ಈಡೇರಲಿದೆ. ಸುಮಾರು 5 ಸಾವಿರ ಕೋಟಿ ರೂಪಾಯಿಗಳ ಬೃಹತ್ ಯೋಜನೆ ಇದಾಗಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುವಾಗ ರಾಹುಲ್ ಗಾಂಧಿ ಘೋಷಣೆ ಮಾಡಿದ್ದ ‘ಬಳಾರಿ ಜೀನ್ಸ್ ಅಪೆರಲ್ ಪಾರ್ಕ್’ ಸ್ಥಾಪನೆಯ ಕಾರ್ಯಗಳು ಇದ್ದಕ್ಕಿದ್ದಂತೆ ವೇಗ ಪಡೆದುಕೊಂಡಿವೆ.

ಆಗಸ್ಟ್ 5ರಂದು ಬೆಂಗಳೂರಿಗೆ ರಾಹುಲ್‌ ಗಾಂಧಿ ಆಗಮಿಸುವ ನಿರೀಕ್ಷೆ ಇದೆ. ಅವರ ಕೈಯಿಂದಲೇ ಈ ಬೃಹತ್ ಯೋಜನೆಗೆ ಶಂಕು ಸ್ಥಾಪನೆ ಮಾಡಿಸುವ ಕುರಿತು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ.

ಏನಿದು ಜೀನ್ಸ್ ಪಾರ್ಕ್‌?: ಬಳ್ಳಾರಿಯಲ್ಲಿ 500 ಹೆಚ್ಚು ಜೀನ್ಸ್ ಘಟಕಗಳಿವೆ. ಜೀನ್ಸ್ ಉದ್ಯಮ ರಾಷ್ಟ್ರ, ಅಂತಾರಾಷ್ಟ್ರದಲ್ಲಿ ಮನ್ನಣೆ ಗಳಿಸಿದೆ. ಜೀನ್ಸ್ ಪಾರ್ಕ್ ಸ್ಥಾಪನೆಯಾದರೆ ಇಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ನಡೆಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಬಳ್ಳಾರಿಗೂ ಭೇಟಿ ನೀಡಿದ್ದರು. ಜೀನ್ಸ್ ಘಟಕಗಳನ್ನು ಖುದ್ದಾಗಿ ವೀಕ್ಷಿಸಿದ್ದರು. ಕೂಲಿ ಕಾರ್ಮಿಕರು, ಜೀನ್ಸ್ ಉದ್ಯಮಿಗಳು, ಟೆಕ್ಸ್‌ಟೈಲ್‌ ಮಾಲೀಕರ ಸಂಕಷ್ಟಗಳನ್ನು ಆಲಿಸಿದ್ದರು.

ಆಗ ‘ಬಳಾರಿ ಜೀನ್ಸ್ ಅಪೆರಲ್ ಪಾರ್ಕ್’ ನಿರ್ಮಾಣದ ಅಗತ್ಯದ ಕುರಿತು ರಾಹುಲ್‌ ಗಾಂಧಿಗೆ ಮನವಿ ಮಾಡಲಾಗಿತ್ತು. ಪಾರ್ಕ್ ನಿರ್ಮಾಣದ ಭರವಸೆ ನೀಡಿದ್ದ ರಾಹುಲ್ ಜೀನ್ಸ್‌ಗೆ ‘ಮೆಡ್ ಇನ್ ಬಳ್ಳಾರಿ’ ಎನ್ನುವ ಟ್ಯಾಗ್ ಇರಲಿದೆ ಎಂದು ಹೇಳಿದ್ದರು. ಈಗ ಈ ಯೋಜನೆಗೆ ಭೂ ಸ್ವಾಧೀನ ಪೂರ್ಣಗೊಂಡಿದೆ. ಜಮೀನು ಗುರುತು ಮಾಡಿದ್ದ ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದೆ. ರೈತರಿಗೂ ತಲಾ 1 ಎಕರೆಗೆ 40 ಲಕ್ಷ ರೂ.ನಂತೆ 61.83 ಕೋಟಿ ರೂ. ಪರಿಹಾರವನ್ನೂ ವಿತರಿಸಲಾಗಿದೆ.

ಭೂ ಸ್ವಾಧೀನವಾದ ಬಳ್ಳಾರಿ ನಗರ ಹೊರ ವಲಯದ ಸಂಜೀವರಾಯನ ಕೋಟೆ ಬಳಿಯ ಪ್ರದೇಶದಲ್ಲಿ ಮೂಲಭೂತ ಸೌಕರ್ಯ, ಜೀನ್ಸ್ ಉದ್ಯಮಕ್ಕೆ ಬೇಕಿರುವ ಅಗತ್ಯ ಸೌಲಭ್ಯ ಕಲ್ಪಿಸಲು ಮೊದಲ ಹಂತದಲ್ಲಿ 100 ಕೋಟಿ ರೂ.ಗಳಿಗೆ ಟೆಂಡ‌ರ್ ಕರೆಯಲಾಗಿದೆ. ಪೂರಕ ಕೆಲಸಗಳು ಕಳೆದ ಒಂದು ತಿಂಗಳಿಂದ ವೇಗ ಪಡೆದಿವೆ. ಇಲ್ಲಿನ ಪ್ರದೇಶದಲ್ಲಿ ಕೈಗಾರಿಕಾ ನಿವೇಶನಗಳಿಗೆ ಬೇಡಿಕೆ ಇರುವವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಸುಮಾರು 70ಕ್ಕೂ ಹೆಚ್ಚು ಅರ್ಜಿಗಳು ಕೂಡ ಸಲ್ಲಿಕೆಯಾಗಿದ್ದು, ದೊಡ್ಡ ಕಂಪನಿಗಳು ಭಾಗವಹಿಸಲು ಆಸಕ್ತಿ ವಹಿಸಿವೆ. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಗಾರ್ಮೆಂಟ್ಸ್ ಉದ್ದಿಮೆದಾರರೊಂದಿಗೆ ಶನಿವಾರ ಸಭೆಯನ್ನು ಆಯೋಜಿಸಲಾಗಿದೆ.

ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆಯ ಕಾರ್ಯಗಳು ಈಗಾಗಲೇ ನಡೆದಿವೆ. ಸರ್ಕಾರ ಶಂಕುಸ್ಥಾಪನೆ ಸಿದ್ಧತೆ ಕುರಿತು ಸಭೆಯಲ್ಲಿ ಮೌಖಿಕ ಸೂಚನೆ ನೀಡಿದೆ. ಈ ಸಂಬಂಧ ಇದುವರೆಗೆ ಅಧಿಕೃತ ಆದೇಶ ಬಂದಿಲ್ಲಎಂದು ಕೆಐಎಡಿಐ ಕೇಂದ್ರ ಕಚೇರಿಯ ಮುಖ್ಯ ಇಂಜಿನಿಯರ್ ಶಂಕರ್ ರಾಥೋಡ್ ಹೇಳಿದ್ದಾರೆ.

ಬಹುದೊಡ್ಡ ಯೋಜನೆಯ ನಿರ್ಮಾಣ ಕಾಮಗಾರಿಗೆ ರಾಹುಲ್ ಗಾಂಧಿಯಿಂದಲೇ ಅಡಿಗಲ್ಲು ಹಾಕಿಸಬೇಕು ಎನ್ನುವುದು ರಾಜ್ಯ ಸರ್ಕಾರದ ಇಚ್ಛಾಶಕ್ತಿ, ಪೂರಕ ಎಲ್ಲ ಸಿದ್ಧತೆ ನಡೆದಿದ್ದು, ಅವರ ಡೇಟ್ ಅಂತಿಮಗೊಳಿಸುವುದು ಬಾಕಿ ಇದೆ. ಇದಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಶತಪ್ರಯತ್ನದಲ್ಲಿದ್ದಾರೆ.

Previous articleರೈತರಿಗೆ ಖುಷಿ ಸುದ್ದಿ: ಪಿಎಂ ಕಿಸಾನ್ 20ನೇ ಕಂತು ಬಿಡುಗಡೆ
Next articleಬೆಂಗಳೂರಿಗೆ ಬ್ಯಾಡ್ ನ್ಯೂಸ್: ಸಬ್ ಅರ್ಬನ್ ರೈಲು ಇನ್ನೂ ವಿಳಂಬ

LEAVE A REPLY

Please enter your comment!
Please enter your name here