ಹುಬ್ಬಳ್ಳಿ: ಶಾಲಾ-ಕಾಲೇಜಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯ ಸುವರ್ಣವಿಧಾನಸೌಧ ಬಳಿ ನಡೆದಿತ್ತು. ಈ ಕುರಿತಂತೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಉತ್ತರ ಕರ್ನಾಟಕದವರು ತಮ್ಮ ಹಕ್ಕಿಗೆ ಹೋರಾಟ ಮಾಡಲೇಬೇಕೆ? ಎಂದು ಪ್ರಶ್ನಿಸಿದ್ದಾರೆ.
ಬಸ್ ಸೌಲಭ್ಯಕ್ಕಾಗಿ ರಸ್ತೆಗಿಳಿದ ಶಾಲೆ ಮಕ್ಕಳನ್ನು ಒಮ್ಮೆ ಗಮನಿಸಿದರೆ ಸಾಕು ನಮ್ಮ ಉತ್ತರ ಕರ್ನಾಟಕ ಭಾಗದ ನೈಜ ಚಿತ್ರಣದ ಅರಿವಾಗಲಿದೆ. ಮೂಲ ಸೌಕರ್ಯ ಪಡೆಯಲು ಈ ಭಾಗದ ಜನರಿಗೆ ಇಂತಹ ಹೋರಾಟ ಅನಿವಾರ್ಯವೇ ಆಗಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ್ದರೂ ಅದು ಅಧಿವೇಶನಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂದಿರುವ ಅವರು ಉತ್ತರ ಕರ್ನಾಟಕದಲ್ಲಿ ಸುವರ್ಣವಿಧಾನಸೌಧ ನಿರ್ಮಾಣವಾದರೂ ಸಮಸ್ಯೆಗಳು ಪರಿಹಾರ ಕಂಡಿಲ್ಲ ಆಗಿಲ್ಲ ಎಂಬುದು ಈ ಪ್ರತಿಭಟನೆಯಿಂದ ತಿಳಿಯುತ್ತದೆ ಎಂದಿದ್ದಾರೆ.
ಉತ್ತರ ಕರ್ನಾಟಕ ಭಾಗದ ಜನರು ಸರ್ಕಾರಿ ಬಸ್ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಜನ ಪರದಾಡುವಂತಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಸಾರಿಗೆ ಬಸ್‌ಗಳ ದುಸ್ಥಿತಿ, ನಿರ್ವಹಣೆ ಕುರಿತು ಇಲಾಖೆ ಹಿರಿಯ ಅಧಿಕಾರಿಗಳು, ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುವ ಮೂಲಕ ಸಾರಿಗೆ ಸಂಸ್ಥೆಯ ಕಾರ್ಯವೈಖರಿ ವಿವರಿಸಿದ್ದಾರೆ.
ಹೊಸ ಬಸ್‌ಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಬಾರಿ ಪತ್ರ ಬರೆದಿದ್ದೇನೆ. ಆದರೆ ಇದ್ಯಾವುದೂ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕಿಲ್ಲವೇ? ಉತ್ತರ ಕರ್ನಾಟಕದವರು ತಮ್ಮ ಹಕ್ಕಿಗೆ ಹೋರಾಟ ಮಾಡಲೇಬೇಕೆ? ಸಿದ್ದರಾಮಯ್ಯನವರೇ ಇನ್ನಾದರೂ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳಿಗೆ ಕಿವಿಯಾಗಿ ಎಂದು ಉತ್ತರ ಕರ್ನಾಟಕ ಭಾಗದ ಸಮಸ್ತೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಘಟನೆ ವಿವರ: ಬೆಳಗಾವಿ ತಾಲೂಕಿನ ಕೊಂಡಸಕಪ್ಪ ಗ್ರಾಮದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಬಸ್ ಸಿಗದೆ ಅನಾನುಕೂಲವಾಗಿತ್ತು. ಆದ್ದರಿಂದ ಇದರಿಂದ ಬೇಸತ್ತ ಪೋಷಕರು ಈ ಹಿಂದೆ ವಿದ್ಯಾರ್ಥಿಗಳೊಂದಿಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೂ ಸಹ ಸಮಸ್ಯೆ ಬಗೆಹರಿಯದ ಹಿನ್ನಲೆಯಲ್ಲಿ ಬುಧವಾರ ಗ್ರಾಮಸ್ಥರು, ವಿದ್ಯಾರ್ಥಿಗಳು ಬೆಳಗಾವಿಯ ಸುವರ್ಣವಿಧಾನಸೌಧ ಮುಂದೆ ಏಕಾಏಕಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿ, ತಮ್ಮ ಊರಿಗೆ ಸರಿಯಾದ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದರು.
ದಿಢೀರ್ ಪ್ರತಿಭಟನೆಯಿಂದಾಗಿ ಹೆದ್ದಾರಿಯೂದ್ದಕ್ಕೂ ವಾಹನಗಳು ಗಂಟೆಗಟ್ಟಲೇ ನಿಲ್ಲಬೇಕಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರೇಬಾಗೇವಾಡಿ ಪೊಲೀಸರು ಗ್ರಾಮಸ್ಥರು, ವಿದ್ಯಾರ್ಥಿಗಳ ಮನವೊಲಿಸಿ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಪ್ರತಿಭಟನೆಯನ್ನು ಕೈ ಬಿಡುವಂತೆ ಮನವಿ ಮಾಡಿದರು. ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿತ್ತು.