ಬೆಂಗಳೂರು: ಬೆಂಗಳೂರು-ತುಮಕೂರು ನಡುವೆ ಸಂಚಾರ ನಡೆಸುವ ವಾಹನ ಸವಾರರಿಗೆ ಪ್ರಮುಖ ಮಾಹಿತಿಯೊಂದಿದೆ. ರಾಷ್ಟ್ರೀಯ ಹೆದ್ದಾರಿ-48ರ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ನೆಲಮಂಗಲದಿಂದ ತುಮಕೂರು ತನಕ ಸುಲಭವಾಗಿ ಸಂಚಾರವನ್ನು ನಡೆಸಬಹುದಾಗಿದೆ.
ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನೆಲಮಂಗಲ ಟೋಲ್‌ಗೇಟ್‌ನಿಂದ ತುಮಕೂರು ತನಕದ 44.04 ಕಿ. ಮೀ. ಮಾರ್ಗದ ಅಗಲೀಕರಣ ಭೂ ಸ್ವಾಧೀನ ಸೇರಿದಂತೆ ವಿವಿಧ ಕಾರಣಕ್ಕೆ ವಿಳಂಬವಾಗಿತ್ತು. ಆದರೆ ಈಗ ಕಾಮಗಾರಿ ಚುರುಕಾಗಿದ್ದು, ವಾಹನ ಸವಾರರು ನಿರಾಳರಾಗಿದ್ದಾರೆ.
ಎನ್‌ಹೆಚ್‌ಎಐ ಅಧಿಕಾರಿಗಳ ಮಾಹಿತಿ ಪ್ರಕಾರ ನೆಲಮಂಗಲ-ತುಮಕೂರು ನಡುವಿನ ಸರ್ವೀಸ್ ರಸ್ತೆ 2026ರ ಜೂನ್‌ನಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಅಲ್ಲದೇ ಈ ಕಾಮಗಾರಿ 2027ರ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದೆ.
ಆಗಸ್ಟ್‌ನಲ್ಲೇ ಪೂರ್ಣವಾಗಬೇಕಿತ್ತು: ನೆಲಮಂಗಲ-ತುಮಕೂರು ನಡುವಿನ ಸರ್ವೀಸ್ ರಸ್ತೆ 2025ರ ಆಗಸ್ಟ್‌ನಲ್ಲಿಯೇ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ಭೂ ಸ್ವಾಧೀನ ಸೇರಿ ವಿವಿಧ ಕಾರಣಕ್ಕೆ ಈ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ತುಮಕೂರು ಸಂಸದ, ಕೇಂದ್ರ ಸಚಿವ ವಿ. ಸೋಮಣ್ಣ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು, ಇತರ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಈ ವರ್ಷದ ಏಪ್ರಿಲ್‌ನಲ್ಲಿ ಎಲ್ಲಾ ಅಡೆತಡೆ ನಿವಾರಣೆ ಮಾಡಿದ್ದರು. ಪುನಃ ಕಾಮಗಾರಿ ಆರಂಭಿಸಲಾಗಿದೆ.
2022ರ ಆಗಸ್ಟ್‌ನಲ್ಲಿ ಹಾಲಿ ಇರುವ ನಾಲ್ಕು ಪಥದ ರಸ್ತೆಯನ್ನು 6 ಪಥವಾಗಿ ವಿಸ್ತರಣೆ ಮಾಡುವ, 2 ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡುವ ಕಾಮಗಾರಿ ಆರಂಭಿಸಲಾಯಿತು. ಆದರೆ ಭೂ ಸ್ವಾಧೀನ ಕಾಮಗಾರಿಗೆ ಭಾರೀ ಅಡ್ಡಿ ಉಂಟು ಮಾಡಿತು. ಸುಮಾರು 35 ಕಡೆ ಭೂ ಸ್ವಾಧೀನ ಸಮಸ್ಯೆಗೆ ಕಾರಣವಾಯಿತು. ಮಾಲೀಕರಿಗೆ ಪರಿಹಾರ ಸಿಕ್ಕಿರಲಿಲ್ಲ. ಅವರು ಭೂಮಿ ನೀಡಲು ಒಪ್ಪಿಗೆ ಕೊಡಲಿಲ್ಲ. ಕೆಲವು ಭೂಮಿ ಅಧಿಕೃತ ಅಧಿಸೂಚನೆಯಲ್ಲಿ ಸೇರಿರಲಿಲ್ಲ.
ಈ ಎಲ್ಲಾ ಕಾರಣಗಳಿಂದ ಅನಿವಾರ್ಯವಾಗಿ ಕಾಮಗಾರಿಯನ್ನು ನಿಲ್ಲಿಸಬೇಕಾಯಿತು. ಸದ್ಯದ ಮಾಹಿತಿ ಪ್ರಕಾರ ಮೊದಲು ಇದ್ದ ಭೂ ಸ್ವಾಧೀನ ವಿವಾದ ಈಗ ಬಗೆಹರಿದಿದೆ. ಕಾಮಗಾರಿಯ ಅಡೆತಡೆ ನಿವಾರಣೆಯಾದ ಕಾರಣ ಯೋಜನೆಯನ್ನು ಪೂರ್ಣಗೊಳಿಸಲು ಇರುವ ಗಡುವನ್ನು ಅಧಿಕಾರಿಗಳು ಪರಿಷ್ಕರಣೆ ಮಾಡಿದ್ದಾರೆ. 2026ರ ಮಧ್ಯಭಾಗದಲ್ಲಿ ಸರ್ವೀಸ್ ರಸ್ತೆ, 2027ರ ಮಾರ್ಚ್‌ನಲ್ಲಿ ಪೂರ್ಣ ಕಾಮಗಾರಿ ಮುಗಿಸಲು ಯೋಜಿಸಲಾಗಿದೆ.
ತುಮಕೂರು ರಸ್ತೆ ಬೆಂಗಳೂರು ನಗರವನ್ನು ಉತ್ತರ ಕರ್ನಾಟಕದ ಜೊತೆ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿದೆ. ಈ ಕಾಮಗಾರಿ ಬೇಗ ಪೂರ್ಣಗೊಳ್ಳದ ಕಾರಣ ಬೆಂಗಳೂರು-ತುಮಕೂರು ರಸ್ತೆಯ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದರು. ಈ ಕಾಮಗಾರಿಯ ಕಾರಣ ಪ್ರತಿನಿತ್ಯ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದರು. ಯೋಜನೆ ತಡವಾಗುತ್ತದೆ ಎನ್ನುವುದನ್ನು ನಾವು ಒಪ್ಪುತ್ತೇವೆ. ಆದರೆ ಸರಿಯಾದ ಯೋಜನೆ ಇಲ್ಲದೇ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.
ಸುಮಾರು 2 ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದೆ. ವಾರಾಂತ್ಯ, ಸಾಲು ಸಾಲು ರಜೆಗಳು ಬಂದರೆ ಬೆಂಗಳೂರು-ತುಮಕೂರು ನಡುವೆ ವಾಹನಗಳ ದಟ್ಟಣೆ ಹೆಚ್ಚಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಕಾಮಗಾರಿ ಪೂರ್ಣಗೊಂಡು ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾದರೆ ಈ ಹೆದ್ದಾರಿಯನ್ನು ಆಕ್ಸೆಸ್ ಕಂಟ್ರೋಲ್ ಹೆದ್ದಾರಿಯಾಗಿ ಪರಿವರ್ತಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.