ಬೆಂಗಳೂರಲ್ಲಿ ಮೋದಿ: 4 ಗಂಟೆ, 3 ಕಾರ್ಯಕ್ರಮ ವಿವರ

0
82

ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ಉದ್ಯಾನ ನಗರಿ ಬೆಂಗಳೂರಿಗೆ ಇದೊಂದು ಐತಿಹಾಸಿಕ ಕ್ಷಣ. ಬೆಳಗ್ಗೆ ಪ್ರಧಾನಿ ಮೋದಿ ನಗರಕ್ಕೆ ಆಗಮಿಸಿದ್ದು, ರಾಜ್ಯಪಾಲರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕರು ಸ್ವಾಗತ ಕೋರಿದರು.

ನರೇಂದ್ರ ಮೋದಿ ಮೊದಲು ಬೆಂಗಳೂರು-ಬೆಳಗಾವಿ ಸೇರಿ 3 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ. ಭಾನುವಾರ ನರೇಂದ್ರ ಮೋದಿ 4 ಗಂಟೆ ನಗರದಲ್ಲಿ ಇರಲಿದ್ದು, 3 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಪ್ರಮುಖ ಕಾರ್ಯಕ್ರಮ ಆರ್‌ವಿ ರಸ್ತೆ- ಬೊಮ್ಮಸಂದ್ರ ನಡುವಿನ 5,057 ಕೋಟಿ ರೂಪಾಯಿ ವೆಚ್ಚದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವುದು.

ರೈಲು ಸೇವೆಗೆ ರಾಗಿಗುಡ್ಡ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಮೋದಿ ರಾಗಿಗುಡ್ಡ-ಎಲೆಕ್ಟ್ರಾನಿಕ್ ಸಿಟಿ ತನಕ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲಿದ್ದಾರೆ. ಈ ರೈಲನ್ನು ಮಹಿಳಾ ಲೋಕೋ ಪೈಲಟ್ ವಿನುತಾ ಓಡಿಸಲಿದ್ದಾರೆ. ಕೇಂದ್ರ ಸಚಿವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​, ಸಂಸದರು, ಶಾಸಕರು ರೈಲಿನಲ್ಲಿ 117 ಜನರು ಪ್ರಯಾಣ ಮಾಡಲಿದ್ದಾರೆ.

ಮೆಟ್ರೋ ರೈಲು ಹಸಿರು ನಿಶಾನೆ ವೇದಿಕೆ ಕಾರ್ಯಕ್ರಮ ಎಲೆಕ್ಟ್ರಾನಿಕ್ ಸಿಟಿ ಐಐಟಿ ಆಡಿಟೋರಿಯಂನಲ್ಲಿ ನಡೆಯಲಿದೆ. ಕಿತ್ತಳೆ ಮತ್ತು ಬೂದು ಮಾರ್ಗದ ಮೆಟ್ರೋ ಹಂತಗಳಿಗೆ ಶಂಕುಸ್ಥಾಪನೆಯನ್ನು ಸಹ ಮೋದಿ ನೆರವೇರಿಸಲಿದ್ದಾರೆ. ಬಳಿಕ ನರೇಂದ್ರ ಮೋದಿ ಹೆಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ವಾಪಸ್ ಆಗಲಿದ್ದಾರೆ.

ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕ ರಹಿತ ರೈಲು ಓಡಿಸಲಿದೆ. ಆದರೆ ಸದ್ಯ ಚಾಲಕ ಸಹಿತವಾಗಿಯೇ ರೈಲು ಸಂಚಾರ ನಡೆಸಲಿದೆ. 6 ತಿಂಗಳ ಬಳಿಕ ಡ್ರೈವರ್ ಲೆಸ್​​ ರೈಲು ಸಂಚಾರ ಮಾಡಲಿದೆ ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿದೆ.

ಪ್ರಧಾನಿ ಭೇಟಿ ಸಂಚಾರ ಮಾರ್ಗ ಬದಲು: ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತದೆ. ಬನ್ನೇರುಘಟ್ಟ ರಸ್ತೆ, ಜಿಗಣಿ ಮಾರ್ಗ, ಹೊಸೂರು ರಸ್ತೆ ಮುಂತಾದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.

ಬೆಳಗ್ಗೆ 10 ರಿಂದ ಮಧ್ಯಾಹ್ನದ ತನಕ ನಮ್ಮ ಮೆಟ್ರೋ ಹಸಿರು ಮಾರ್ಗದ ಲಾಲ್ ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆ‌ರ್.ವಿ.ರಸ್ತೆ ನಿಲ್ದಾಣ ತಾತ್ಕಾಲಿಕವಾಗಿ ಮುಚ್ಚಲಾಗುತ್ತವೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

Previous articleವಿಶ್ವ ಗುರು ಪರಂಪರೆಗೆ ವಿದೇಶಿ ದಾಳಿಗಳೇ ಕೊಳ್ಳಿ
Next articleಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಮೋದಿ ಹಸಿರು ನಿಶಾನೆ

LEAVE A REPLY

Please enter your comment!
Please enter your name here