ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವು ಈ ವರ್ಷ 11 ದಿನಗಳ ಕಾಲ ವೈಭವದಿಂದ ನೆರವೇರಿ, ಇಂದು ವಿಜಯದಶಮಿ ಜಂಬೂ ಸವಾರಿಯೊಂದಿಗೆ ಅಂತಿಮ ಘಟ್ಟ ತಲುಪಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಅರಮನೆಯಲ್ಲಿ ಖಾಸಗಿ ದರ್ಬಾರ್, ಮತ್ತು ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಗಳೊಂದಿಗೆ ಇಡೀ ಮೈಸೂರು ನಗರವೇ ಹಬ್ಬದ ಕಳೆ ಕಟ್ಟಿತ್ತು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಂಬೂ ಸವಾರಿಗೂ ಮುನ್ನ, ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದ ಬನ್ನಿಮಂಟಪದಲ್ಲಿ ಶಮಿ ಪೂಜೆ ನೆರವೇರಿತು. ರಾಜ ಯದುವೀರ್ ಒಡೆಯರ್ ಸಾಂಪ್ರದಾಯಿಕವಾಗಿ ಶಮಿ ಪೂಜೆ ಸಲ್ಲಿಸಿ, ಅರಮನೆ ದಸರಾ ಆಚರಣೆಗಳಿಗೆ ಅಧಿಕೃತವಾಗಿ ತೆರೆ ಎಳೆದರು. ವಜ್ರಮುಷ್ಠಿ ಕಾಳಗದ ನಂತರ ವಿಜಯಯಾತ್ರೆ ನಡೆದು, ಯದುವೀರ್ ಒಡೆಯರ್ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಅರಮನೆಗೆ ಮರಳಿದರು.
ಈ ವಿಜಯಯಾತ್ರೆಯಲ್ಲಿ ಪೊಲೀಸ್ ಬ್ಯಾಂಡ್, ಪಟ್ಟದ ಆನೆ, ಕುದುರೆ, ಮತ್ತು ಹಸುಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜವಂಶದ ಖಾಸಾ ಆಯುಧಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಯದುವೀರ್ ತಮ್ಮ ತಂದೆ ಶ್ರೀಕಂಠದತ್ತ ಒಡೆಯರ್ ಬಳಸುತ್ತಿದ್ದ ಕಾರಿನಲ್ಲಿ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಇತಿಹಾಸದ ಸಾರವನ್ನು ಹೊತ್ತು ಸಾಗಿದಂತೆ ಭಾಸವಾಯಿತು.
ಈ ಬಾರಿಯ ಜಂಬೂ ಸವಾರಿಯಲ್ಲಿ 58 ಸ್ತಬ್ಧಚಿತ್ರಗಳು, 100ಕ್ಕೂ ಹೆಚ್ಚು ಕಲಾ ತಂಡಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಮತ್ತು ಪೊಲೀಸ್ ತುಕಡಿಗಳು ಭಾಗವಹಿಸಿದ್ದು, ಜನರ ಕಣ್ಮನ ಸೆಳೆದವು. ಕುಂಭ ಲಗ್ನದಲ್ಲಿ ಸಂಜೆ 4:42 ರಿಂದ 5:06 ರವರೆಗಿನ ಶುಭ ಮುಹೂರ್ತದಲ್ಲಿ, ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಳಲಿದೆ.
6ನೇ ಬಾರಿಗೆ ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಲಿದೆ. ಕಾವೇರಿ ಮತ್ತು ರೂಪಾ ಆನೆಗಳು ಅಭಿಮನ್ಯುವಿಗೆ ಕುಮ್ಕಿ ಆನೆಗಳಾಗಿ ಸಾಥ್ ನೀಡಿಲಿವೆ. ಜಂಬೂ ಸವಾರಿ ವೀಕ್ಷಣೆಗಾಗಿ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ಸುಮಾರು 45 ಸಾವಿರ ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಮೈಸೂರು ದಸರಾವು ಮತ್ತೊಮ್ಮೆ ತನ್ನ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಪರಿಚಯಿಸಲಿದೆ.