ಮೈಸೂರು: ನಸುಕಿನ ಜಾವ, ಇಡೀ ಜಗತ್ತು ನಿದ್ದೆಯಲ್ಲಿರುವಾಗ ಮೈಸೂರು ರೈಲ್ವೆ ನಿಲ್ದಾಣದಲ್ಲಿ ತಾಯಿಯೊಬ್ಬಳ ಆಕ್ರಂದನ ಮುಗಿಲುಮುಟ್ಟಿತ್ತು. ಆಕೆಯ ಆರು ತಿಂಗಳ ಹಸುಗೂಸು ಕಣ್ಮರೆಯಾಗಿತ್ತು.
ಆದರೆ, ರೈಲ್ವೆ ರಕ್ಷಣಾ ಪಡೆಯ (RPF) ಸಮಯಪ್ರಜ್ಞೆ ಮತ್ತು ಚಾಣಾಕ್ಷತನದಿಂದ ಕೆಲವೇ ನಿಮಿಷಗಳಲ್ಲಿ ಕಂದಮ್ಮನನ್ನು ಪತ್ತೆಹಚ್ಚಿ, ಅಪಹರಣಕಾರಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ತಾಯಿಯ ಕಣ್ಣೀರು: ನಿಲ್ದಾಣದ ಪೋರ್ಟಿಕೊ ಬಳಿ ಕುಟುಂಬದೊಂದಿಗೆ ಮಲಗಿದ್ದ ತಾಯಿ, ಬೆಳಗಿನ ಜಾವ 5.20ಕ್ಕೆ ಎಚ್ಚರಗೊಂಡಾಗ ತನ್ನ ಮಡಿಲಲ್ಲಿದ್ದ ಮಗು ನಾಪತ್ತೆಯಾಗಿದ್ದು ಕಂಡು ಬೆಚ್ಚಿಬಿದ್ದಿದ್ದಾರೆ.
ದಿಕ್ಕು ತೋಚದೆ ಅಳುತ್ತಿದ್ದ ಅವರನ್ನು ಗಸ್ತಿನಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಸಿ.ಎಂ. ನಾಗರಾಜು ಗಮನಿಸಿ, ತಕ್ಷಣವೇ ವಿಚಾರಿಸಿದ್ದಾರೆ. ವಿಷಯದ ಗಂಭೀರತೆ ಅರಿತ ಅವರು ಕೂಡಲೇ ತಮ್ಮ ಮೇಲಧಿಕಾರಿಗಳಾದ ಎಎಸ್‌ಐ ಪ್ರಸಿ ಮತ್ತು ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಗಮನಕ್ಕೆ ತಂದರು.
ಸಿಸಿಟಿವಿ ದೃಶ್ಯಾವಳಿ ಬಿಚ್ಚಿಟ್ಟ ಸತ್ಯ: ಒಂದು ಕ್ಷಣವನ್ನೂ ವ್ಯರ್ಥ ಮಾಡದ ಆರ್‌ಪಿಎಫ್ ತಂಡ, ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಲು ಆರಂಭಿಸಿತು. ಆಗ, ಸುಮಾರು 45 ರಿಂದ 50 ವರ್ಷದ ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಂಡು ಆರನೇ ಪ್ಲಾಟ್‌ಫಾರ್ಮ್‌ನತ್ತ ಸಾಗುತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಆಕೆ ರೈಲು ಸಂಖ್ಯೆ 16206 ಹತ್ತಲು ಸಿದ್ಧತೆ ನಡೆಸುತ್ತಿದ್ದಳು.
ರೈಲು ಹೊರಡಲು ಕೆಲವೇ ಕ್ಷಣಗಳು ಬಾಕಿಯಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರನೇ ಪ್ಲಾಟ್‌ಫಾರ್ಮ್‌ಗೆ ಧಾವಿಸಿ, ರೈಲು ಹತ್ತಲು ಯತ್ನಿಸುತ್ತಿದ್ದ ಮಹಿಳೆಯನ್ನು ತಡೆದು ನಿಲ್ಲಿಸಿದರು. ಆಕೆಯ ಕೈಯಲ್ಲಿದ್ದ ಮಗುವನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ತಮ್ಮ ಕಂದನನ್ನು ಮತ್ತೆ ಕಂಡ ಪೋಷಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ಕಣ್ಣೀರಿನೊಂದಿಗೆ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.
ವಿಚಾರಣೆ ವೇಳೆ ಆರೋಪಿಯು ಹಾಸನದ ಪೆನ್ಷನ್ ಮೊಹಲ್ಲಾದ ನಿವಾಸಿ ನಂದಿನಿ (45) ಎಂದು ಗುರುತಿಸಲಾಗಿದೆ. ಆಕೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ಪೊಲೀಸರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.


























