ಮೈಸೂರು : ಜಾಗತಿಕ ಖ್ಯಾತಿಯ ಬೋಯಿಂಗ್ ಕಂಪನಿಯೊಂದಿಗೆ ಸಹಭಾಗಿತ್ವ ಸಾಧಿಸಿರುವ ರಂಗಸನ್ಸ್ ಏರೋಸ್ಪೇಸ್ ಸಂಸ್ಥೆಯ ನೂತನ ಅತ್ಯಾಧುನಿಕ ಘಟಕಕ್ಕೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಕಂಪನಿಯಿಂದ ತರಬೇತಿ ಪಡೆದ 60 ಐಟಿಐ ಪದವೀಧರರಿಗೆ ಪ್ರಮಾಣ ಪತ್ರ ವಿತರಿಸಿ, ಸಚಿವರು ಅವರ ಭವಿಷ್ಯಕ್ಕೆ ಶುಭಹಾರೈಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, “ಒಂದು ಕಾಲದಲ್ಲಿ ಅಗರಬತ್ತಿ ವ್ಯಾಪಾರದಿಂದ ಪ್ರಾರಂಭಿಸಿದ ರಂಗಸನ್ಸ್ ಕುಟುಂಬ ಇಂದು ಏರೋಸ್ಪೇಸ್ ಕ್ಷೇತ್ರದಲ್ಲಿ ದೇಶದ ಹೆಮ್ಮೆಗುರಿಯಾದ ಮೈಲಿಗಲ್ಲು ನಿರ್ಮಿಸಿದೆ. ಈ ಕ್ಷೇತ್ರದಲ್ಲಿ ಅವರಿಗೆ ಕೈಗಾರಿಕೆ ಇಲಾಖೆ ಅಗತ್ಯವಾದ ಎಲ್ಲ ಸಹಕಾರ ನೀಡಲಿದೆ,” ಎಂದು ಹೇಳಿದ್ದಾರೆ.
ರಂಗಸನ್ಸ್ ಏರೋಸ್ಪೇಸ್ ಸಂಸ್ಥೆಯು ಪ್ರಿಸಿಷನ್ ಉತ್ಪಾದನೆ ಕ್ಷೇತ್ರದಲ್ಲಿ ಜಾಗತಿಕ ಗುಣಮಟ್ಟ ತಲುಪಿರುವುದು, ಹಾಗೂ ಬೋಯಿಂಗ್ ಜತೆ ಕೈಜೋಡಿಸಿರುವುದು ಭಾರತೀಯ ಏರೋಸ್ಪೇಸ್ ಉದ್ಯಮಕ್ಕೆ ಹೊಸ ದಿಕ್ಕು ತೋರಿಸಿದೆ ಎಂದು ಅವರು ಹೇಳಿದರು.
ಘಟಕದಲ್ಲಿ ತರಬೇತಿ ಪಡೆದ ಯುವಕರಲ್ಲಿ ಶೇ.70 ಕ್ಕೂ ಹೆಚ್ಚು ಜನರಿಗೆ ಕಂಪನಿಯೇ ಉದ್ಯೋಗ ನೀಡಿರುವುದು ಉಲ್ಲೇಖನೀಯ. “ಇದರಿಂದ ಯುವಕರಿಗೆ ಮನೆಬಾಗಿಲಲ್ಲೇ ಅವಕಾಶಗಳು ಸಿಗುತ್ತಿವೆ, ಇದು ಕೌಶಲ್ಯಾಭಿವೃದ್ಧಿಗೆ ಉತ್ತಮ ಉದಾಹರಣೆ,” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ. ಮಹೇಶ್, ರಂಗಸನ್ಸ್ ಏರೋಸ್ಪೇಸ್ ಸಿಇಒ ಪವನ್ ರಂಗ, ಬೋಯಿಂಗ್ ಕಂಪನಿಯ ಹಿರಿಯ ನಿರ್ದೇಶಕ ಅಶ್ವನಿ ಭಾರ್ಗವ, ಮತ್ತು ಅಧಿಕಾರಿಗಳು ಮೋಹನದಾಸ್ ಪಿಳ್ಳೈ, ಗಣಪತಿ ಹೆಬ್ಬಾರ್ ಉಪಸ್ಥಿತರಿದ್ದರು


























