ಸಂ.ಕ. ಸಮಾಚಾರ ಮೈಸೂರು: “ಮುಡಾ 50:50 ಹಗರಣದಲ್ಲಿ ಭಾಗಿಯಾಗಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆಯುಕ್ತ ನಟೇಶ್ ಅವರನ್ನೂ ಬಂಧಿಸುವುದರ ಜೊತೆಗೆ ಸಮಗ್ರ ತನಿಖೆಯಾಗಬೇಕು” ಎಂದು ಶಾಸಕ ಟಿ.ಎಸ್. ಶ್ರೀವತ್ಸ ಒತ್ತಾಯಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಜಾರಿ ನಿರ್ದೇಶನಾಲಯ ತನಿಖೆ ನಡೆಸಿ ದಿನೇಶ್ ಅವರಿಂದ 40ಕ್ಕೂ ಹೆಚ್ಚು ನಿವೇಶನಗಳನ್ನು ಜಪ್ತಿ ಮಾಡಿದೆ. ಅದೇ ರೀತಿ ಇನ್ನಷ್ಟು ಅಧಿಕಾರಿಗಳ ಮೇಲೆ ಕ್ರಮ ಆಗಬೇಕಿದೆ” ಎಂದರು.
“ಚಾಮುಂಡೇಶ್ವರಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನೀಡಲಾಗಿದ್ದ 44 ನಿವೇಶನಗಳನ್ನು ಮುಡಾ ವಾಪಸ್ ಪಡೆದುಕೊಂಡಿದೆ. ಈಗ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು ಕೂಡಲೇ ಫಲಕ ಹಾಕಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಎಂಡಿಎ ಆಯುಕ್ತರು ಕ್ರಮ ಕೈಗೊಳ್ಳಬೇಕೆಂದು” ಆಗ್ರಹಿಸಿದರು.
“ನಾಲ್ಕು ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನೀಡಲಾಗಿದೆ. ಇದರಲ್ಲಿ ಸಿಎಂ ಕುಟುಂಬ 14 ನಿವೇಶನಗಳನ್ನು ವಾಪಾಸ್ ನೀಡಿದೆ. ಉಳಿದ ನಿವೇಶನಗಳ ಬಗ್ಗೆ ತನಿಖೆ ನಡೆಯಲಿದೆ. ಮುಂದೆ ಇನ್ನೂ ಹಗರಣಗಳು ಬಯಲಿಗೆ ಬರಲಿವೆ” ಎಂದರು.