ಮೈಸೂರು ದಸರಾ 2025ರ ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ 14 ಗಜಗಳು ಕಾಡಿಗೆ ಮರಳಿದವು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ, ಕಳೆದ 56 ದಿನದಿಂದ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ದಸರಾ ಗಜಪಡೆಗೆ ಭಾನುವಾರ ಬೆಳಗ್ಗೆ 11 ಗಂಟೆಗೆ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ಹಾಗೂ ಕೋಡಿ ಭೈರವೇಶ್ವರಸ್ವಾಮಿ ದೇವಾಲಯದ ಮುಂಭಾಗ ಸಾಲಾಗಿ ನಿಲ್ಲಿಸಿ ಪೂಜಾ ಪ್ರಕ್ರಿಯೆ ನಡೆಸಲಾಯಿತು.
ಅರ್ಚಕ ಎಸ್.ವಿ. ಪ್ರಹ್ಲಾದ್‌ರಾವ್ ನೇತೃತ್ವದಲ್ಲಿ ಎಲ್ಲಾ ಆನೆಗಳಿಗೆ ಹೂವಿನಿಂದ ಅಲಂಕಾರ ಮಾಡಿ, ಅರಿಶಿಣ, ಕುಂಕುಮ, ಶ್ರೀಗಂಧ ಹಚ್ಚಿ, ಸೊಂಡಿಲನ ಮೇಲೆ ‘ಓಂಕಾರ’ ಬರೆದು ಪೂಜೆ ಸಲ್ಲಿಸಿದಾಗ ಏಕಕಾಲದಲ್ಲಿ ಎಲ್ಲಾ ಆನೆಗಳು ಸೊಂಡಿಲೆತ್ತಿ ನಮಿಸಿದವು.
ಶುಭ ಧನು ಲಗ್ನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ, ಡಿಸಿಪಿ ಸುಂದರ್‌ರಾಜ್, ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ, ಆರ್‌ಎಫ್‌ಓ ನದೀಮ್, ಪಶುವೈದ್ಯ ಡಾ. ಆದರ್ಶ್ ಸೇರಿದಂತೆ ಇನ್ನಿತರರು ಆನೆಗಳಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಎಲ್ಲಾ ಆನೆಗಳಿಗೂ ಕಬ್ಬು, ಬೆಲ್ಲ, ವಿವಿಧ ಹಣ್ಣು ತಿನ್ನಿಸಿ, ಬೂದುಕುಂಬಳ ಕಾಯಿಯಿಂದ ದೃಷ್ಟಿ ತೆಗೆದು ಒಡೆದ ಬಳಿಕ ನಿಂಬೆಹಣ್ಣನ್ನು ಕಾಲಿನಿಂದ ತುಳಿಸಿ ಲಾರಿ ಹತ್ತಿಸಲು ಕರೆದೊಯ್ಯಲಾಯಿತು.
ಸ್ನಾನ ಮಾಡಿಸಿ, ನೀರು ಕುಡಿಸಿದ ಮಾವುತರು: ಬೀಳ್ಕೊಡುಗೆ ಪೂಜಾ ಪ್ರಕ್ರಿಯೆ ಮುಗಿದ ಮೇಲೆ ಎಲ್ಲಾ ಆನೆಗಳಿಗೆ ನೀರು ಕುಡಿಸಿದ ಮಾವುತರು, ನಂತರ ಆನೆಗಳಿಗೆ ಸ್ನಾನ ಮಾಡಿಸಿದರು. ಅಷ್ಟರಲ್ಲಾಗಲೇ ಆನೆಗಳಿಗೆ ಪ್ರತ್ಯೇಕವಾಗಿ ನಿಗದಿ ಮಾಡಿದ್ದ ಲಾರಿಗಳಿಗೆ ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರು ಮನೆ ಸಾಮಗ್ರಿಗಳೊಂದಿಗೆ ಲಾರಿ ಏರಿದರು. ಆನೆಗಳಿಗೆ ಸ್ನಾನ ಮಾಡಿಸಿದ ನಂತರ ಒಂದಾದ ಮೇಲೊಂದರಂತೆ ಆನೆಗಳನ್ನು ಪ್ರತ್ಯೇಕ ಲಾರಿಗಳಿಗೆ ಹತ್ತಿಸಿ, ಕಾಡಿನತ್ತ ಪಯಣಿಸಲು ಸಜ್ಜಾದರು.
ಲಾರಿ ಹತ್ತಲು ಬೆದರಿದ ಹೇಮಾವತಿ: ಇದೇ ಮೊದಲ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ದುಬಾರೆ ಆನೆ ಶಿಬಿರದ ಹೇಮಾವತಿ ನಾಡಿನಿಂದ ಕಾಡಿಗೆ ತೆರಳಲು ಹಿಂದೇಟು ಹಾಕಿದಳು. ಚಿಕ್ಕ ವಯಸ್ಸಿನ ಆನೆಯಾದರೂ ಅನುಭವಿಯಂತೆ ವರ್ತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಹೇಮಾವತಿ ನಗರದ ಪರಿಸರಕ್ಕೆ ಹೊಂದಿಕೊಂಡಿತ್ತು.
ಕಳೆದ ಎರಡು ತಿಂಗಳಿಂದ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದ ಹೇಮಾವತಿಗೆ ಮತ್ತೆ ಕಾಡಿಗೆ ಹೋಗಲು ಲಾರಿ ಹತ್ತಿಸಲು ಮುಂದಾದಾಗ ಹತ್ತಲು ಬೆದರಿ, ಹಿಂದೇಟು ಹಾಕಿತು. ಐದಾರು ಬಾರಿ ಲಾರಿ ಹತ್ತು ವಿಫಲ ಪ್ರಯತ್ನ ಮಾಡಿದ ಹೇಮಾವತಿಗೆ ಕಾಲಿಗೆ ಸರಪಳಿ ಹಾಕಿ, ಲಾರಿಗೆ ಹತ್ತಿಸುವಲ್ಲಿ ಮಾವುತರು, ಕಾವಾಡಿಗಳು ಯಶಸ್ವಿಯಾದರು.
ಬೆಂಗಾವಲಿನಲ್ಲಿ ಸ್ವಸ್ಥಾನದತ್ತ ಪಯಣ: ಆಗಸ್ಟ್ 4ರಂದು ಗಜಪಯಣದ ಮೊದಲ ತಂಡದಲ್ಲಿ ಮತ್ತಿಗೋಡು ಆನೆ ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಕೊಡಗು ಜಿಲ್ಲೆಯ ದುಬಾರೆ ಶಿಬಿರದ ಧನಂಜಯ್, ಪ್ರಶಾಂತ, ಕಂಜನ್, ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ, ಲಕ್ಷ್ಮೀ ಆನೆ, ಆಗಸ್ಟ್ 25ರಂದು ಎರಡನೇ ತಂಡದಲ್ಲಿ ಬಂದಿದ್ದ ಮತ್ತಿಗೋಡು ಶಿಬಿರದ ಶ್ರೀಕಂಠ, ಭೀಮನಕಟ್ಟೆಯ ರೂಪಾ, ದುಬಾರೆಯ ಹೇಮಾವತಿ, ಗೋಪಿ, ಸುಗ್ರೀವ ಆನೆ ಪೊಲೀಸರ ಬೆಂಗಾವಲು ವಾಹನದೊಂದಿಗೆ ಅರಮನೆಯ ಜಯಮಾರ್ತಾಂಡ ದ್ವಾರದಿಂದ ಬಿಎನ್ ರಸ್ತೆ ಮಾರ್ಗವಾಗಿ ಗನ್‌ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಕೃಷ್ಣರಾಜ ಬುಲೆವಾರ್ಡ್ ರಸ್ತೆ, ಹುಣಸೂರು ರಸ್ತೆ ಮಾರ್ಗವಾಗಿ ಪಯಣಿಸಿ ತಮ್ಮ ತಮ್ಮ ಶಿಬಿರ ತಲುಪಿದವು.
ಅಪಾರ ಪ್ರೀತಿ ನಡುವೆ ಬೀಳ್ಕೊಡುಗೆ: ದಸರಾ ಜಂಬೂಸವಾರಿ ಮೆರವಣೆಗೆಯನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಲು ಕಾರಣವಾದ ಗಜಪಡೆ ಬೀಳ್ಕೊಡಲು ಜಿಲ್ಲಾಡಳಿತದ ಯಾವುದೇ ಅಧಿಕಾರಿಗಳು ಬರದೇ ಇದ್ದರೂ, ಅಪಾರ ಸಂಖ್ಯೆಯ ಜನಸ್ತೋಮ ನೆರೆದು ಗಜಪಡೆಗೆ ಪ್ರೀತಿಯಿಂದ ಬೀಳ್ಕೊಟ್ಟಿತು.
ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಹೊರತುಪಡಿಸಿದರೆ ಸಾರ್ವಜನಿಕರು, ಅರಮನೆಗೆ ಬಂದಿದ್ದ ಪ್ರವಾಸಿಗರು ದಸರಾ ಗಜಪಡೆ ಬೀಳ್ಕೊಡುವ ವೇಳೆ ಹಾಜರಿದ್ದರು. ಬೀಳ್ಕೊಡುಗೆ ಪೂಜೆ ವೇಳೆ ಆರಂಭದಲ್ಲಿ ಸಾರ್ವಜನಿಕರನ್ನು ಬಿಟ್ಟಿರಲಿಲ್ಲ.
ಆನೆ ಕಾಡಿಗೆ ಹೋಗುವಾಗಲಾದರೂ ಬಿಡಿ ಎಂದು ಹಲವರು ಒತ್ತಾಯಿಸಿದ್ದರಿಂದ ಪೂಜಾ ಪ್ರಕ್ರಿಯೆ ನಡೆಯುತ್ತಿರುವಾಗ ಬ್ಯಾರಿಕೇಡ್ ಬಳಿ ನಿಂತಿದ್ದವರನ್ನು ಆನೆಗಳ ಬಳಿ ಬಿಡಲಾಯಿತು. ಇದರಿಂದ ಸುಮಾರು 2 ಸಾವಿರ ಮಂದಿ ಸಾರ್ವಜನಿಕರು ಆನೆಗಳ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಬಾರಿಯ ದಸರಾ ಗಜಪಡೆಯನ್ನು ನೋಡಲು ಆರಂಭದಿಂದಲೂ ವಿವಿಧೆಡೆಯಿಂದ ಬಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ತಾಲೀಮು ನೋಡಲು ಸೇರುತ್ತಿದ್ದಂತೆ ಬೀಳ್ಕೊಡುಗೆ ವೇಳೆಯೂ ಜನ ಸೇರಿದ್ದರು. ಅರಮನೆ ಆವರಣ ಮಾತ್ರವಲ್ಲದೆ, ಜಯಮಾರ್ತಾಂಡ ದ್ವಾರ, ಬಿ.ಎನ್.ರಸ್ತೆಯಲ್ಲೂ ಅಪಾರ ಸಂಖ್ಯೆಯ ಜನ ಜಮಾಯಿಸಿ ದಸರಾ ಗಜಪಡೆ ಸ್ವಸ್ಥಾನದತ್ತ ಪ್ರಯಾಣಿಸುವುದನ್ನು ಕಣ್ಣುಂಬಿಕೊಂಡು ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡರು.
q8jrqp