ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಸೇರಿ ಹಲವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿದ ಪ್ರಕರಣದಲ್ಲಿ ಮುಡಾದ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಬಂಧಿಸಲಾಗಿದೆ. ಮುಡಾ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿದೆ.
ಮಂಗಳವಾರ ಸಂಜೆ ಬೆಂಗಳೂರಿನ ಶಾಂತಿನಗರದಲ್ಲಿ ಇಡಿ ವಲಯ ಕಚೇರಿಗೆ ಹಿರಿಯ ಕೆಎಎಸ್ ಅಧಿಕಾರಿ ದಿನೇಶ್ ಕುಮಾರ್ ವಿಚಾರಣೆಗೆ ಕರೆದಿದ್ದ ಅಧಿಕಾರಿಗಳು ಸುದೀರ್ಘ ವಿಚಾರಣೆ ಬಳಿಕ ದಿನೇಶ್ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ. ತಡರಾತ್ರಿ ನ್ಯಾಯಾಧೀಶರ ಎದುರು ದಿನೇಶ್ ಇ.ಡಿ. ಅಧಿಕಾರಿಗಳು ಹಾಜರುಪಡಿಸಲಿದ್ದಾರೆ. ಈ ಮೊದಲೇ ದಿನೇಶ್ ಆಸ್ತಿಗಳ ದಾಳಿ ನಡೆಸಿದ್ದ ಇಡಿ ಕೆಲ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿತ್ತು.
ಮುಖ್ಯಾಂಶಗಳು
*ಇದು ಮುಡಾ ಪ್ರಕರಣದಲ್ಲಿ ನಡೆದಿರುವ ಮೊದಲ ಬಂಧನ
* ಈ ಮೊದಲೇ ದಿನೇಶ್ ನಿವಾಸದ ಮೇಲೆ ಇಡಿ ದಾಳಿ ನಡೆಸಿ ದಾಖಲೆ ವಶಪಡಿಸಿಕೊಂಡಿತ್ತು
*ಮಂಗಳವಾರ ಸಂಜೆ ವಿಚಾರಣೆಗೆ ಕರೆದಿದ್ದ ಜಾರಿ ನಿರ್ದೇಶನಾಲಯ, ರಾತ್ರಿ ಹೊತ್ತಿಗೆ ಅರೆಸ್ಟ್
ಮುಡಾ ಹಗರಣದ ತನಿಖೆಗಾಗಿ ಮಾಜಿ ಅಧ್ಯಕ್ಷ ಹೆಚ್.ವಿ. ರಾಜೀವ್ ಮತ್ತು ದಿನೇಶ್ ಕುಮಾರ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಸರ್ಕಾರ ದಿನೇಶ್‌ಕುಮಾರ್ ವಿರುದ್ಧ ಮಾತ್ರ ತನಿಖೆಗೆ ಅನುಮತಿ ನೀಡಿದೆ.
ಈ ನಡುವೆ, ಪ್ರಕರಣದ ಸಂಬಂಧ ಸಮಾಜದಲ್ಲಿ ತಾನು ಅವಮಾನ ಎದುರಿಸುತ್ತಿರುವುದಾಗಿ ಮತ್ತು ಮಾನಸಿಕವಾಗಿ ಕುಗ್ಗುತ್ತಿರುವುದಾಗಿ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಶೀಘ್ರವಾಗಿ ತನಿಖೆ ಮುಗಿಸಲು ಆದೇಶ ನೀಡುವಂತೆ ಅವರು ಕೋರಿದ್ದಾರೆ. ಹೆಚ್.ವಿ. ರಾಜೀವ್ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಅಗತ್ಯವಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲರು ವಾದಿಸಿದ್ದಾರೆ. ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ.
ದಿನೇಶ್ ಕುಮಾರ್ ವಿರುದ್ಧ ಆರೋಪವೇನು?: ನಕಲಿ ದಾಖಲೆಗಳನ್ನು ದಿನೇಶ್ ಸೃಷ್ಟಿ ಮಾಡಿ ಈ ದಾಖಲೆಗಳ ಮೂಲಕ ಸೈಟ್ ಗಳನ್ನು ಮರುಹಂಚಿಕೆ ಮಾಡಿ ಲಾಭ ಮಾಡಿದ್ದಾರೆ. ಹಣ ಪಡೆದು ಆಸ್ತಿ ಗಳಿಕೆ ಮಾಡಿರುವುದಕ್ಕೆ ದಾಖಲೆ ಪತ್ತೆಯಾಗಿದೆ ಎಂದು ಇಡಿ ಹೇಳಿದೆ. 2022ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಜಿ.ಟಿ.ದಿನೇಶ್ ಕುಮಾರ್ ಅಧಿಕಾರ ಸ್ವೀಕರಿಸಿದ್ದರು. ದಿನೇಶ್ ಕುಮಾರ್ ವಿರುದ್ಧ ಮುಡಾದಲ್ಲಿ 50:50 ಅನುಪಾತದಡಿ ಸೈಟ್ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಯಾವುದೇ ಸ್ಥಳ ತೋರಿಸದೇ ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ಸರ್ಕಾರ ನಂತರ ಹಾವೇರಿ ವಿವಿಯ ಕುಲಸಚಿವ ಹುದ್ದೆಯನ್ನು ನೀಡಿತ್ತು. ಕುಲಸಚಿವ ಹುದ್ದೆಯನ್ನು ನೀಡಿದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸರ್ಕಾರ ಕೊನೆಗೆ ಆ ಆದೇಶವನ್ನೇ ರದ್ದು ಮಾಡಿತ್ತು