ಮೈಸೂರು: ಮುಖ್ಯಮಂತ್ರಿಯಾಗಿ ಇನ್ನೂ ಎರಡೂವರೆ ವರ್ಷ ನಾನೆ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ವರ್ಷವೂ ನಾನೇ ಯಾಕೆ ಪುಷ್ಪಾರ್ಚನೆ ಮಾಡಬಾರದು. ಮುಂದಿನ ಸಾರಿಯೂ ನಾನೇ ಮಾಡುತ್ತೆನೆ ಎಂಬ ಭರವಸೆ ಇದೆ ಎಂದರು.
ದಸರಾವೇಳೆಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವುದಿಲ್ಲ ಎಂದು ವಿಪಕ್ಷಗಳು ಭವಿಷ್ಯ ನುಡಿದಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿ, “ವಿರೋಧಪಕ್ಷಗಳು ಭವಿಷ್ಯಕಾರರಲ್ಲ. ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗುವುದಿಲ್ಲ. ಆದರೆ ಪಕ್ಷದ ವರಿಷ್ಠರ ಆದೇಶದಂತೆ ಎಲ್ಲರೂ ನಡೆಯಬೇಕಿದೆ. ಮುಂದಿನ ವರ್ಷಗಳಲ್ಲಿಯೂ ನಾನೇ ದಸರಾ ಉತ್ಸವದಲ್ಲಿ ಪುಷ್ಪಾರ್ಚನೆ ಮಾಡುತ್ತೇನೆಂಬ ಭರವಸೆ ಇದೆ. ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲ್ಲ. ಬಜೆಟ್ ಮಂಡಿಸಲು ಸಾಧ್ಯವಿಲ್ಲ ವೆಂದಿದ್ದರು. ಆದರೂ ನಾನೇ ಎರಡನೇ ಬಾರಿಗೂ ಮುಖ್ಯಮಂತ್ರಿಯಾಗಿ ಮುಂದುವರೆದು ಬಜೆಟ್ ಮಂಡಿಸಿದ್ದೇನೆ” ಎಂದರು.
ನವೆಂಬರನಲ್ಲಿ ಸರ್ಕಾರಕ್ಕೆ ಎರಡು ವರ್ಷ ತುಂಬುವ ಕಾರಣ ಆ ರೀತಿ ಮಾತನಾಡುತ್ತಾರೆ. ಹೈ ಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಹೈ ಕಮಾಂಡ್ ಹೇಳಿದಂತೆ ಕೇಳಬೇಕು. ಬಿಜೆಪಿಗೆ ವಸ್ತು ಸ್ಥಿತಿ ಗೊತ್ತಿಲ್ಲ. ಅವರು ಹೇಳಿದ್ದು ಏನು ನಡೆಯುವುದಿಲ್ಲ.
ಸರ್ಕಾರಿ ನೌಕರರ ತುಟ್ಟಿಭತ್ಯ ಬಾಕಿಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರಸರ್ಕಾರ ತುಟ್ಟಿಭತ್ಯೆ ನೀಡಿದ ನಂತರ ರಾಜ್ಯ ಸರ್ಕಾರವೂ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡುತ್ತದೆ ಎಂದರು.
ಸಂವಿಧಾನದ ಬಗ್ಗೆ ಅರಿವಿಲ್ಲದವರೇ ದಸರಾ ಉದ್ಘಾಟಿಸುವವರ ಬಗ್ಗೆ ವಿರೋಧವನ್ನು ವ್ಯಕ್ತಪಡಿಸಿದವರಿಗೆ ಸುಪ್ರೀಂ ಕೋರ್ಟ್ ನಲ್ಲಿಯೂ ಛೀಮಾರಿ ಹಾಕಲಾಯಿತು. ದಸರಾ ಉತ್ಸವ ರಾಜಕೀಯದ ವಿಷಯವಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು