ಮೈಸೂರು ದಸರಾ: ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿ ಚಾಮುಂಡಿಬೆಟ್ಟಕ್ಕೆ ಪಾದಯಾತ್ರೆ

0
11

ಮೈಸೂರು ದಸರಾ 2025 ಉದ್ಘಾಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ತನಕ 11 ದಿನಗಳ ಕಾಲ ಈ ಬಾರಿಯ ದಸರಾ ನಡೆಯಲಿದೆ.

“ನಮ್ಮ ಧರ್ಮ, ಸಂಸ್ಕೃತಿ ಬಗ್ಗೆ ಟೀಕೆ ಮಾಡುವ ಬಾನು ಮುಷ್ತಾಕ್ ಅವರು ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಿಸಲು ಆಹ್ವಾನಿಸುವುದು ಬೇಡವೆಂದು ಒತ್ತಾಯಿಸಿದರೂ ಸರ್ಕಾರ ಮೊಂಡುತನ ತೋರಿದೆ. ಹೀಗಾಗಿ ಇದನ್ನು ವಿರೋಧಿಸಿ ಸೆ. 9ರಂದು ಚಾಮುಂಡಿಬೆಟ್ಟಕ್ಕೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಪ್ರಾಂತ್ಯ ಸಂಚಾಲಕ ಕೇಶವಮೂರ್ತಿ ತಿಳಿಸಿದರು.

“ಅಂದು ಬೆಳಗ್ಗೆ 7.30ಕೆ ಕುರುಬಾರಹಳ್ಳಿ ವೃತ್ತದಿಂದ ಪಾದಯಾತ್ರೆ ಹೊರಡಲಿದೆ. ಇದರಲ್ಲಿ ಸುಮಾರು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ಬೆಟ್ಟದ ಮೇಲೆ ಪ್ರತಿಭಟನಾ ಸಭೆ ಸಹಾ ನಡೆಯಲಿದೆ” ಎಂದರು.

“ಬಾನು ಮುಷ್ತಾಕ್ ಅವರ ಆಯ್ಕೆ ವಿರುದ್ಧ ಈಗಾಗಲೇ ವೇದಿಕೆ ಮಾತ್ರವಲ್ಲದೆ, ಅನೇಕ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಧಾರ್ಮಿಕ ವ್ಯಕ್ತಿಗಳು ಮಾತನಾಡಿದ್ದಾರೆ. ಹೀಗಿದ್ದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬಾನು ಮುಷ್ತಾಕ್ ಅವರು ಈ ಹಿಂದೆ ಸಾಹಿತ್ಯ ಸಮ್ಮೇಳನದಲ್ಲಿ ತಾಯಿ ಭುವನೇಶ್ವರಿಯ ಅರಿಶಿನ ಕುಂಕುಮದ ಬಗ್ಗೆ ಅವಹೇಳನ ಮಾತನ್ನಾಡಿದ್ದಾರೆ. ಇದು ಎಲ್ಲರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಹೀಗಾಗಿ ಇವರು ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದರು.

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಕರ್ನಾಟಕ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ಅದರ ವಿಚಾರಣೆ ಇನ್ನೂ ನಡೆಯಬೇಕಿದೆ.

ಸೆಪ್ಟೆಂಬರ್ 22ರಂದು ದಸರಾ ಉದ್ಘಾಟನೆಗೆ ಆಗಮಿಸಬೇಕು ಎಂದು ಮೈಸೂರು ಜಿಲ್ಲಾಡಳಿತ ಹಾಸನದಲ್ಲಿರುವ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನ ನೀಡಿದೆ.

Previous articleಕೆ.ಎನ್.ರಾಜಣ್ಣ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನ ಯಾರಿಗೆ?
Next articleಹುಬ್ಬಳ್ಳಿ: ರೈಲ್ವೆ ಪ್ಲಾಟ್‌ಫಾರ್ಮ್ ನಲ್ಲಿ 11 ಕೆ.ಜಿ ಗಾಂಜಾ ಪತ್ತೆ

LEAVE A REPLY

Please enter your comment!
Please enter your name here