“ಬಿಹಾರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುವುದು ಖಚಿತ. ಅದೇ ರೀತಿ ಸಿಎಂ ಬದಲಾವಣೆಯೂ ಆಗಲಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
ಮೈಸೂರು ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿ, “ಸಿದ್ದರಾಮಯ್ಯ ರ‍್ಯಾಂಪ್ ವಾಕ್ ಮಾಡುವಾಗ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಇಬ್ಬರೂ ಅಡ್ರೆಸ್‍ಗೆ ಇರಲಿಲ್ಲ. ಕಾಂಗ್ರೆಸ್ ಶಾಸಕರೇ ನವೆಂಬರ್ ಕ್ರಾಂತಿ ಎಂದು ಹೇಳುತ್ತಿದ್ದಾರೆ” ಎಂದರು.
“ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬೇಡಿ ಎಂದು ವೇಣುಗೋಪಾಲ್ ಎಚ್ಚರಿಸುತ್ತಾರೆ. ನಾಯಕತ್ವ ಬದಲಾವಣೆ ಕುರಿತು ಹೈ ಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹೇಳುತ್ತಾರೆ. ಆದರೆ ಹೈಕಮಾಂಡ್ ಎಲ್ಲೂ ನಾಯಕತ್ವ ಬದಲಾವಣೆ ಇಲ್ಲಾ ಎಂದು ಹೇಳುತ್ತಿಲ್ಲ” ಎಂದು ಹೇಳಿದರು.
ಪೂರ್ವ ತಯಾರಿ ಇಲ್ಲದೆ ಗಣತಿ: “ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯ ಸರ್ಕಾರ ಪೂರ್ವ ತಯಾರಿ ಇಲ್ಲದೆ ಆತುರದಲ್ಲಿ ಕೈಗೊಂಡಿದೆ. ಸಮೀಕ್ಷೆಯಲ್ಲಿ ಎಷ್ಟು ಗೊಂದಲ ಇದೆ ಎಂಬುದನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕ್ರಿಯೆಯಲ್ಲಿಯೇ ಗೊತ್ತಾಗುತ್ತದೆ” ಎಂದು ತಿಳಿಸಿದರು.
“60 ಪ್ರಶ್ನೆಗಳನ್ನು ಜನರ ಮುಂದಿಟ್ಟಿದ್ದಾರೆ. ಈ ಸಮೀಕ್ಷೆಯಿಂದ ಗೊಂದಲಗಳೇ ಹೆಚ್ಚು. ರಾಜ್ಯ ಸರ್ಕಾರ ಪೂರ್ವ ತಯಾರಿ ಇಲ್ಲದೆ ಆತುರದ ನಿರ್ಧಾರ ತೆಗೆದುಕೊಂಡಿದೆ. ಸಮೀಕ್ಷೆಗೆ ವಿಶೇಷಚೇತರನ್ನು ಬಳಸಿಕೊಂಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಸಿದ್ದರಾಮಯ್ಯಗೆ ಇಷ್ಟೊಂದು ಆತುರ ಯಾಕೆ?” ಎಂದು ಪ್ರಶ್ನಿಸಿದರು.
ಒಡಕು ಸರಿಯಲ್ಲ: “ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಮೂಲಕ ಹಿಂದೂ ಧರ್ಮ ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಲಾಗಿದೆ. ಯಾರೇ ಆದರೂ ಧರ್ಮದ ರಕ್ಷಣೆ ಮಾಡಬೇಕೆ ಹೊರತು ಒಡೆಯಲು ಹೋಗಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು” ಎಂದರು.
“ಇವತ್ತು ಧರ್ಮದಲ್ಲಿ ರಾಜಕಾರಣ ತರುವ ಷಡ್ಯಂತ್ರಗಳು ನಡೆಯುತ್ತಿದೆ. ಹಿಂದಿನಿಂದಲೂ ನಮ್ಮ ಸಮಾಜವನ್ನು ಒಡೆದಾಳುವ ನೀತಿಯನ್ನು ಕೆಲವರು ಅನುಸರಿಸುತ್ತಿದ್ದಾರೆ. ವೀರಶೈವ ಲಿಂಗಾಯಿತ ಸಮಾಜಕ್ಕೆ ಹಿನ್ನಡೆಯಾಗಿದ್ದರೂ ಸಹ ಮುಂದೆ ಪುಟಿದೇಳುವ ಶಕ್ತಿ ನಮ್ಮ ಸಮಾಜಕ್ಕೆ ಇದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ತಿಳಿಸಿದರು.
“ನಮ್ಮ ಸಮಾಜವನ್ನು ಒಗ್ಗೂಡಿಸಿಕೊಂಡು ಎಲ್ಲಾ ಸಮಾಜಗಳಿಗೂ ಕೂಡ ನೆರಳಾಗಿ ಹಿಂದೂ ಸಮಾಜವನ್ನು ಸುಭದ್ರಗೊಳಿಸುವ ಕೆಲಸ ಆಗಬೇಕೇ ಹೊರತು ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸವಾಗಬಾರದು” ಎಂದು ಹೇಳಿದರು.