ಮೈಸೂರು ನಗರದ ವಸ್ತು ಪ್ರದರ್ಶನ ಮೈದಾನ ಬಳಿ ಎರಡು ದಿನಗಳ ಹಿಂದೆ ನಡೆದ ರೌಡಿ ಶೀಟರ್ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಅದೇ ಜಾಗದ ಕೂಗಳತೆದ ದೂರದಲ್ಲಿ 9 ವರ್ಷ ವಯಸ್ಸಿನ ಬಾಲಕಿಯೊಬ್ಬಳ ಶವ ಪತ್ತೆಯಾಗಿದೆ. ಈ ಅನುಮಾನಸ್ಪದವಾಗಿ ಸಾವಿನ ಪ್ರಕರಣ ಇಡೀ ಮೈಸೂರು ನಾಗರಿಕರನ್ನ ಬೆಚ್ಚಿ ಬೀಳಿಸಿದೆ. ದೇಹದ ಮೇಲೆ ಬಟ್ಟೆಯ ಇಲ್ಲದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬಲೂನ್ ಮಾರಾಟಕ್ಕೆ ಬಂದಿದ್ದ ಕುಟುಂಬ: ಮೈಸೂರು ದಸರಾ ಹಿನ್ನೆಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಸ್ಥರು ಗುಲ್ಬರ್ಗದಿಂದ ಮೈಸೂರಿಗೆ ಗೊಂಬೆ, ಬಲೂನ್ ವ್ಯಾಪಾರಕ್ಕಾಗಿ ಬಂದಿದ್ದರು. ಬುಧವಾರ ರಾತ್ರಿ ಸುಮಾರು 12 ಗಂಟೆವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಒಂದೇ ಕುಟುಂಬದ 8 ಜನ ದೊಡ್ಡ ಕೆರೆ ಮೈದಾನದ ಜೋಪಡಿಯಲ್ಲಿ ಒಟ್ಟಿಗೆ ಮಲಗಿದ್ದರು. ಮುಂಜಾನೆ 4 ಗಂಟೆಯಲ್ಲಿ ಮಳೆ ಬಂದಾಗ ಎಚ್ಚರವಾಗಿದ್ದು, ಪಕ್ಕದಲ್ಲಿ ಬಾಲಕಿ ಇಲ್ಲದ್ದನ್ನು ಗಮನಿಸಿ ನಜರ್ ಬಾದ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿ, ನಂತರ ಹುಟುಕಾಟ ನಡೆಸಿದರು.
ಗುಂಡಿಯಲ್ಲಿ ಬಾಲಕಿ ಶವ : ಸುಮಾರು ಹೊತ್ತು ಹುಡುಕಿದ ಬಳಿಕ ಬೆಳಗ್ಗಿನ ಜಾವ, 6.30ರ ಸುಮಾರಿಗೆ ಜೋಪಡಿ ಪಕ್ಕದ ಗುಂಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸರು ಮೈಕೆಡವಿಕೊಂಡು ನಿದ್ದೆಯಿಂದ ಎದ್ದಂತೆ ಕಾಣುತ್ತಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ನಜರಾಬಾದ್ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಗಂಭೀರ ಸಭೆ ನಡೆಸಿ ಕೆಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆಂದು ತಿಳಿದುಬಂದಿದೆ.
ಆರೋಪಿ ಬಂಧಿನ: ಮೈಸೂರು ದಸರಾ ಸಮಯದಲ್ಲಿ ಬಲೂನು ಮಾರಾಟ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿಯ ದೇಹ ವಸ್ತು ಪ್ರದರ್ಶನದ ಮುಂಭಾಗದ ದೊಡ್ಡಕೆರೆ ಮೈದಾನದಲ್ಲಿ ಪತ್ತೆಯಾಗಿತ್ತು. ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೈಸೂರಿನ ಸಿದ್ಧಲಿಂಗಪುರದ ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಪೊಲೀಸರು ಬಂಧಿಸಲು ಆಗಮಿಸಿದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನ ನಡೆಸಿದ್ದ ಆರೋಪಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷ ಜೈಲಿನಲ್ಲಿದ್ದ ಆರೋಪಿ ಕೆಲವು ದಿನಗಳ ಹಿಂದೆ ಬಿಡುಗಡೆಗೊಂಡಿದ್ದ. ಕೆಲಸಕ್ಕೆ ಹೋಗದೇ ಮದ್ಯ ಸೇವಿಸಿ ಮೈಸೂರು ನಗರದಲ್ಲಿ ಓಡಾಡಿಕೊಂಡಿದ್ದ.